ಬೆಂಗಳೂರಿನ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮಾತ್ರ ಅನುದಾನ, ಬಿಜೆಪಿಯ ಶಾಸಕರೊಬ್ಬರಿಗೆ ಬಂಪರ್: ಅಚ್ಚರಿ ಮೂಡಿಸಿದ ಸರ್ಕಾರದ ನಡೆ
ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ ಬಳಕೆಯಾಗದ ನಿಧಿಯಿಂದ ಒಟ್ಟು 480 ಕೋಟಿ ರೂ.ಗಳನ್ನು ಬೆಂಗಳೂರಿನ 11 ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಅ.13: ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಬರಬೇಕಾದ ಅನುದಾನವನ್ನು ತಡೆ ಹಿಡಿಯಲಾಗಿದೆ. ನನ್ನ ಕ್ಷೇತ್ರದ ಹಣವನ್ನು ಬೇರೆಡೆ ನೀಡಲಾಗಿದೆ. ಹೀಗಾದರೆ ನಾವು ಹೇಗೆ ಕೆಲಸ ಮಾಡುವುದು ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿ ಉಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಸಂಸದ ಡಿಕೆ ಸುರೇಶ್ (DK Suresh) ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ದೊಡ್ಡ ಹೈಡ್ರಾಮಾ ಸೃಷ್ಟಿಸಿದ್ದರು. ಈ ನಡುವೆಯೇ ಸರ್ಕಾರದ (Karnataka Government) ಬೆಂಗಳೂರಿನ 11 ಶಾಸಕರಿಗೆ ತಲಾ 40 ಕೋಟಿ ರೂ. ಅನುದಾನ (Fund) ಮಂಜೂರು ಮಾಡಲು ನಿರ್ಧರಿಸಿದೆ. ಸರ್ಕಾರ ಬಿಜೆಪಿಯ 14 ಶಾಸಕರಲ್ಲಿ ಒಬ್ಬ ಶಾಸಕರನ್ನು ಹೊರತುಪಡಿಸಿ, ಉಳಿದ 13 ಕಮಲ ಶಾಸಕರಿಗೆ ಅನುದಾನ ನೀಡದೆ ಬರೀ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದ್ದು ಅಚ್ಚರಿ ಮೂಡಿಸಿದೆ. ವರದಿಗಳ ಪ್ರಕಾರ, ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯ ಬಳಕೆಯಾಗದ ನಿಧಿಯಿಂದ ಒಟ್ಟು 480 ಕೋಟಿ ರೂ.ಗಳನ್ನು ಶಾಸಕರಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಹೆಸರು
ಯಶವಂಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ಅವರಿಗೆ ಮಾತ್ರ ಅನುದಾನ ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಹೌದು ಕಾಂಗ್ರೆಸ್ ಸರ್ಕಾರ ಬಿಜೆಪಿಯ ಯಾವ ಕ್ಷೇತ್ರಕ್ಕೂ ಅನುದಾನ ನೀಡಿಲ್ಲ. ಆದರೆ ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಅನುದಾನ ನೀಡಲಾಗಿದೆ.
2019ರಲ್ಲಿ ಆಪರೇಷನ್ ಕಮಲದ ಸಮಯದಲ್ಲಿ ಶಾಸಕ ಎಸ್ಟಿ ಸೋಮಶೇಖರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮತ್ತೆ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಈಗಾಗಲೆ ಕಾಂಗ್ರೆಸ್ನ ಪ್ರಮುಖ ನಾಯಕರನ್ನು ಭೇಟಿಯಾಗಿದ್ದಾರೆ. ಎಸ್ ಟಿ ಸೋಮೇಶಖರ ಒಂದು ಕಾಲು ಕಾಂಗ್ರೆಸ್ನಲ್ಲಿಟ್ಟಿದ್ದು, ಕೈ ಹಿಡಿಯುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಹೀಗಾಗಿ ಈ ಹಿಂದೆ ಎಸ್ಟಿ ಸೋಮೇಖರ್ ಅವರ ಯಶವಂತಪುರಕ್ಕೆ ಬಿಬಿಎಂಪಿಯಿಂದ 7.63 ಕೋಟಿ ಅನುದಾನ ನೀಡಲಾಗಿತ್ತು. ಇದೀಗ ರಾಜ್ಯ ಸರ್ಕಾರದಿಂದ 40 ಕೋಟಿ ರೂ. ನಿಧಿ ಬಿಡುಗಡೆ ಮಾಡಿದ್ದು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
| ಅನುದಾನ ಹಂಚಿಕೆ | ||
| ಶಾಸಕ | ಕ್ಷೇತ್ರ | ಪಕ್ಷ |
| ಕೃಷ್ಣ ಬೈರೇಗೌಡ | ಬ್ಯಾಟರಾಯನಪುರ | ಕಾಂಗ್ರೆಸ್ |
| ಎಸಿ ಶ್ರೀನಿವಾಸ್ | ಪುಲಕೇಶಿನಗರ | ಕಾಂಗ್ರೆಸ್ |
| ಬೈರತಿ ಸುರೇಶ್ | ಹೆಬ್ಬಾಳ | ಕಾಂಗ್ರೆಸ್ |
| ರಾಮಲಿಂಗಾ ರೆಡ್ಡಿ | BTM ಲೇಔಟ್ | ಕಾಂಗ್ರೆಸ್ |
| ಕೆಜೆ ಜಾರ್ಜ್ | ಸರ್ವಜ್ಞನಗರ | ಕಾಂಗ್ರೆಸ್ |
| ರಿಜ್ವಾನ್ ಅರ್ಷದ್ | ಶಿವಾಜಿನಗರ | ಕಾಂಗ್ರೆಸ್ |
| ಎನ್ಎ ಹರಿಸ್ | ಶಾಂತಿನಗರ | ಕಾಂಗ್ರೆಸ್ |
| ದಿನೇಶ್ ಗುಂಡೂರಾವ್ | ಗಾಂಧಿನಗರ | ಕಾಂಗ್ರೆಸ್ |
| ಪ್ರಿಯಾಕೃಷ್ಣ | ಗೋವಿಂದರಾಜನಗರ | ಕಾಂಗ್ರೆಸ್ |
| ಎಂ ಕೃಷ್ಣಪ್ಪ | ವಿಜಯನಗರ | ಕಾಂಗ್ರೆಸ್ |
| ಜಮೀರ್ ಅಹಮದ್ ಖಾನ್ | ಚಾಮರಾಜಪೇಟೆ | ಕಾಂಗ್ರೆಸ್ |
| ಎಸ್ ಟಿ ಸೋಮಶೇಖರ್ | ಯಶವಂತಪುರ | ಬಿಜೆಪಿ |
ಇದನ್ನೂ ಓದಿ: ಅನುದಾನಕ್ಕಾಗಿ ಮುನಿರತ್ನಗೆ ಡಿಸಿಎಂ ಶಿವಕುಮಾರ್ ಕಾಲುಹಿಡಿಯುವ ಅನಿವಾರ್ಯತೆ ಉಂಟಾಗಿದೆಯೇ?
ನಿಧಿಗಳು ಯಾವುದಕ್ಕೆ ಬಳಕೆ?
ನಗರಾಭಿವೃದ್ಧಿ ಇಲಾಖೆ (ಯುಡಿಡಿ) ಯ ಸರ್ಕಾರಿ ಆದೇಶದ ಪ್ರಕಾರ 480 ಕೋಟಿ ರೂಪಾಯಿಗಳ ದೊಡ್ಡ ಮೊತ್ತವನ್ನು ರಸ್ತೆ ಕಾಮಗಾರಿ ಮತ್ತು ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಮೇಲ್ಸೇತುವೆ ನಿರ್ಮಾಣ, ರಸ್ತೆ ವಿಸ್ತರಣೆ ಸೇರಿದಂತೆ 20 ಯೋಜನೆಗಳಿಗೆ ಈ ಹಣವನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಶಾಸಕರಿಗೆ ತಿಳಿಸಲಾಗಿದೆ. ಎನ್ ಎ ಹ್ಯಾರಿಸ್, ಜಮೀರ್ ಅಹ್ಮದ್ ಖಾನ್ ಮತ್ತು ಪ್ರಿಯಾ ಕೃಷ್ಣ ಅವರಿಗೆ ವಿನಾಯಿತಿಗಳನ್ನು ನೀಡಲಾಗಿದ್ದು, ಅವರು ಇತರ ಯೋಜನೆಗಳಿಗೂ ಹಣವನ್ನು ಬಳಸಲು ಅನುಮತಿಸಲಾಗಿದೆ.
ನಿಧಿ ಹಂಚಿಕೆಯಲ್ಲಿ ರಾಜಕೀಯ ಗದ್ದಲ
ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದಿದ್ದು, ಕಾಂಗ್ರೆಸ್‌ಗೆ ಬೆಂಗಳೂರಿನ ಬಗ್ಗೆ ಇರುವ ಆಸಕ್ತಿಯನ್ನು ಎತ್ತಿ ತೋರಿಸುತ್ತದೆ. ಬೆಂಗಳೂರಿನ ಅಭಿವೃದ್ಧಿಗೆ ಕಾಂಗ್ರೆಸ್ ನಿರ್ಲಕ್ಷ್ಯವಹಿಸಿರುವುದು ಇಲ್ಲಿ ಎದ್ದು ಕಾಣುತ್ತದೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಅನೇಕ ಅಗತ್ಯ ಯೋಜನೆಗಳನ್ನು ಸರ್ಕಾರ ಕೈಬಿಟ್ಟಿದೆ. ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಸುರಕ್ಷತಾ ಸಾಧನಗಳನ್ನು ಪೂರೈಸಲು 15 ಕೋಟಿ ರೂಪಾಯಿ ಹಣವನ್ನು ಸಹ ಹಿಂಪಡೆಯಲಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




