ಬೆಳಗಾವಿ: ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಬಾಬಾಗೌಡ ಪಾಟೀಲ್ (76) ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಪತ್ನಿ, ನಾಲ್ವರು ಮಕ್ಕಳನ್ನು ಅಗಲಿರುವ ಹಿರಿಯ ರೈತ ಮುಖಂಡ ಬಾಬಾಗೌಡ ಪಾಟೀಲ್ 15 ದಿನದಿಂದ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೈತ ಪರ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿದ್ದ ಬಾಬಾಗೌಡ ಪಾಟೀಲ್. 1986ರಲ್ಲಿ ಕಿತ್ತೂರು, ಧಾರವಾಡ ಗ್ರಾಮೀಣ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿ ಎರಡೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅಲ್ಲದೆ 1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಚಿಕ್ಕ ಬಾಗೇವಾಡಿ ಗ್ರಾಮದಲ್ಲಿ ರೈತ ಕುಟುಂಬದ ರುದ್ರಗೌಡ ಮತ್ತು ಗಂಗಮ್ಮನವರ ಮಗನಾಗಿ 1945 ರ ಜನವರಿ 26ರಂದು ಜನಿಸಿದರು. ಸ್ವತಃ ಕೃಷಿಕರಾಗಿದ್ದರಿಂದ ರೈತರ ಕಷ್ಟಗಳ ಬಗ್ಗೆ ಬಾಬಾಗೌಡ ಅರಿತಿದ್ದರು. ಹೀಗಾಗಿ ರೈತರ ಏಳಿಗೆಗಾಗಿ ಹೋರಾಟಕ್ಕೆ ಮುಂದಾಗಿದ್ದು, ಕೊನೆಗೆ ರೈತರ ನೋವು ಆಲಿಸುವ ರೈತ ಮುಖಂಡರಾದರು. ಹೀಗಾಗಿ ಇವರನ್ನು ಹಸಿರು ಶಾಲಿನ ಗೌಡರು ಎಂದು ಕರೆಯುತ್ತಿದ್ದರು.
ಇದನ್ನೂ ಓದಿ:
ಕಾಲು ಮುರಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ವಕೀಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಕೊರೋನಾ ತಗುಲಿ ವಿಧಿವಶ
Meghana Raj: ಮೇಘನಾ ರಾಜ್ ಮನೆಯಲ್ಲಿ ಮತ್ತೆ ಶೋಕ; ಕುಟುಂಬದ ಸದಸ್ಯನಂತಿದ್ದ ಬ್ರುನೋ ಸಾವು
Published On - 12:12 pm, Fri, 21 May 21