ಉಚಿತ ಪ್ರಯಾಣದ ಗ್ಯಾರಂಟಿ ಬಗ್ಗೆ ಮಹಿಳೆಯರು, ಕಂಡಕ್ಟರ್​ಗಳ ಮಧ್ಯೆ ವಾಗ್ವಾದ; ಸಿಎಂಗೆ ಪತ್ರ ಬರೆದ ಕೆಎಸ್​ಆರ್​ಟಿಸಿ

ಮಹಿಳೆಯರು ಮತ್ತು ಕಂಡಕ್ಟರ್​ಗಳ ಮಧ್ಯೆ ವಾಗ್ವಾದ ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಭರವಸೆ ಈಡೇರಿಸುವಂತೆ ಒತ್ತಾಯಿಸಿದೆ.

ಉಚಿತ ಪ್ರಯಾಣದ ಗ್ಯಾರಂಟಿ ಬಗ್ಗೆ ಮಹಿಳೆಯರು, ಕಂಡಕ್ಟರ್​ಗಳ ಮಧ್ಯೆ ವಾಗ್ವಾದ; ಸಿಎಂಗೆ ಪತ್ರ ಬರೆದ ಕೆಎಸ್​ಆರ್​ಟಿಸಿ
ಕೆಎಸ್​ಆರ್​ಟಿಸಿ

Updated on: May 25, 2023 | 7:03 PM

ಮುಖ್ಯಾಂಶಗಳು

  • ಕೆಎಸ್​ಆರ್​ಟಿಸಿ ಬಸ್​​ಗಳಲ್ಲಿ ಟಿಕೆಟ್ ಪಾವತಿಸಲು ಮಹಿಳೆಯರ ಹಿಂದೇಟು
  • ಕಂಡಕ್ಟರ್​ಗೆ ತಲೆನೋವಾದ ಮಹಿಳಾ ಪ್ರಯಾಣಿಕರು
  • ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಕೆಎಸ್​ಆರ್​ಟಿಸಿ

ಬೆಂಗಳೂರು: ಜನರು ವಿದ್ಯುತ್ ಬಿಲ್ ಪಾವತಿಸಲು ನಿರಾಕರಿಸುತ್ತಿರುವ ನಿದರ್ಶನಗಳ ನಡುವೆ, ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂಬ ಕಾಂಗ್ರೆಸ್ (Congress) ಸರ್ಕಾರದ ಚುನಾವಣಾ ಭರವಸೆಯನ್ನು ಉಲ್ಲೇಖಿಸಿ ಸರ್ಕಾರಿ ಬಸ್‌ಗಳಲ್ಲಿ ಸ್ತ್ರೀಯರು ಟಿಕೆಟ್ ವಿಚಾರವಾಗಿ ಕಂಡಕ್ಟರ್‌ಗಳೊಂದಿಗೆ ವಾಗ್ವಾದ ನಡೆಸುತ್ತಿರುವ ವಿದ್ಯಮಾನಗಳು ವರದಿಯಾಗುತ್ತಿದೆ. ಇಂತಹ ಘಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಸಿಬ್ಬಂದಿ ಮತ್ತು ಕಾರ್ಮಿಕರ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಭರವಸೆ ಈಡೇರಿಸುವಂತೆ ಒತ್ತಾಯಿಸಿದೆ.

‘ಟಿಕೆಟ್ ದರವನ್ನು ಪಾವತಿಸದೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುವಂತೆ ಮಹಿಳಾ ಪ್ರಯಾಣಿಕರು ಕಂಡಕ್ಟರ್‌ಗಳನ್ನು ಒತ್ತಾಯಿಸುತ್ತಿದ್ದಾರೆ. ಬಸ್ ಪ್ರಯಾಣದ ವೇಳೆ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ಹಲವು ಬಾರಿ ವಾಗ್ವಾದಗಳು ನಡೆದಿವೆ. ಇದು ಒಳ್ಳೆಯ ಲಕ್ಷಣವಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣದ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಸಾರಿಗೆ ನಿಗಮಗಳಿಗೆ ನಿರ್ದೇಶನ ನೀಡುವಂತೆ ನಾವು ವಿನಂತಿಸುತ್ತೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಷ್ಟವನ್ನು ಕೂಡ ಅಂದಾಜಿಸಿ ಎಲ್ಲ ನಿಗಮಗಳಿಗೆ ಮುಂಚಿತವಾಗಿ ಪರಿಹಾರ ನೀಡುವಂತೆಯೂ ಒಕ್ಕೂಟ ಸರ್ಕಾರವನ್ನು ಕೋರಿದೆ.

‘ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಜಾರಿಗೆ ತರುವುದಕ್ಕಾಗಿ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆಯನ್ನು ಸರಿಯಾಗಿ ಅಂದಾಜು ಮಾಡಲು ಮತ್ತು ನಿಗಮಗಳಿಗೆ ಮುಂಗಡವಾಗಿ ವೆಚ್ಚವನ್ನು ಮಂಜೂರು ಮಾಡುವಂತೆ ನಾವು ನಿಮ್ಮನ್ನು ಕೋರುತ್ತೇವೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: ಜನರು ಗ್ಯಾರಂಟಿಗಳಿಗೆ ಕಾಯುತ್ತಿದ್ದರೆ, ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ದೆಹಲಿ ಸುತ್ತುತ್ತಿದ್ದಾರೆ; ಬಿಜೆಪಿ ಕಿಡಿ

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಮೇ 20ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡುವ ‘ಶಕ್ತಿ’ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ವಿವರವಾದ ಮಾರ್ಗಸೂಚಿಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಸಂಪುಟ ಸಭೆಯ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಎಂದಿದ್ದರು.

200 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಎಲ್ಲ ಐದು ಗ್ಯಾರಂಟಿಗಳನ್ನು ಎರಡನೇ ಸಂಪುಟ ಸಭೆಯ ನಂತರ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಸಂಪುಟ ವಿಸ್ತರಣೆ ಬಳಿಕ ಮುಂದಿನ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us