ಕೊಪ್ಪಳ: ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇನ್ನೇನು ಶಿವರಾತ್ರಿ ಹಬ್ಬ ಹತ್ತಿರ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆ ವಿವಿಧ ಹಣ್ಣುಗಳ ಮೇಳವನ್ನು ಆಯೋಜಿಸಿದೆ. ತೋಟಗಾರಿಕೆ ಇಲಾಖೆಯಲ್ಲಿ ಹಮ್ಮಿಕೊಂಡಿರುವ ಈ ಹಣ್ಣುಗಳ ಮೇಳದಲ್ಲಿ ವಿವಿಧ ಹಣ್ಣುಗಳಿದ್ದು, ಜನರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಗ್ರಾಹಕರಿಗೆ ಇಲ್ಲಿ ನೇರವಾಗಿ ಹಣ್ಣುಗಳನ್ನ ಮಾರಾಟ ಮಾಡಲಾಗುತ್ತದೆ, ಜತೆಗೆ ಹಣ್ಣುಗಳ ವಿವಿಧ ಉತ್ಪನ್ನಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ಹಣ್ಣುಗಳ ಮೇಳ ಆಯೋಜನೆ ಮಾಡಲಾಗಿದ್ದು, ಹಣ್ಣುಗಳ ಮೇಳದಲ್ಲಿ ದ್ರಾಕ್ಷಿ, ಅಂಜೂರ್, ಕರಬೂಜ, ಪೇರಲೆ, ಕಲ್ಲಂಗಡಿ, ಬಾಳೆ ಹಾಗೂ ಹಣ್ಣುಗಳ ವಿವಿಧ ಉತ್ಪನ್ನಗಳು ಗಮನ ಸೆಳೆಯುತ್ತಿವೆ.
ರೈತರೇ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡುತ್ತಿದ್ದು, ಜಿಲ್ಲೆಯಲ್ಲಿ ಬೆಳೆದ ಹಣ್ಣುಗಳನ್ನೇ ಮಾರಾಟ ಮಾಡಲಾಗುತ್ತಿದೆ. ಇಗಾಗಲೇ 30 ರೈತರು ಹಣ್ಣು ಮಾರಾಟಕ್ಕೆ ನೋಂದಣಿ ಮಾಡಿಸಿದ್ದು, ಮಧ್ಯವರ್ತಿಗಳೇ ಇಲ್ಲದೆ ರೈತರು ಇಲ್ಲಿ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಇದನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಹೇಳಿದ್ದಾರೆ.
ಹಣ್ಣುಗಳ ಮೇಳದಲ್ಲಿ ಹತ್ತು ವಿವಿಧ ಹಣ್ಣು ಮಾರಾಟ ಮಾಡಲಾಗುತ್ತಿದ್ದು, ಹಣ್ಣುಗಳಿಂದ ತಯಾರಾದ ಕೆಲ ಉತ್ಪನ್ನಗಳು, ಜೇನು ಉತ್ಪನ್ನ ಮತ್ತು ಪೇರಲೆ ಹಣ್ಣಿನಿಂದ ತಯಾರಾದ ಹತ್ತಕ್ಕೂ ಹೆಚ್ಚು ಉತ್ಪನ್ನಗಳು ಇಲ್ಲಿ ಸಿಗುತ್ತವೆ. ದ್ರಾಕ್ಷಿ ಹಣ್ಣಿನಿಂದ ತಯಾರಾದ ವೈನ್ ಕೂಡ ಇಲ್ಲಿ ಮಾರಾಟಕ್ಕೆ ಇಡಲಾಗಿದೆ.
ಇಷ್ಟು ದಿನ ಜಿಲ್ಲೆಯಲ್ಲಿ ಕೇವಲ ಒಂದು ಹಣ್ಣಿನ ಮೇಳ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಹತ್ತಕ್ಕೂ ಹೆಚ್ಚು ಹಣ್ಣುಗಳನ್ನು ಒಟ್ಟಿಗೆ ಮಾರಾಟಕ್ಕೆ ಇಡಲಾಗಿದೆ. ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ಮೇಳ ಆಯೋಜನೆ ಮಾಡಲಾಗಿದ್ದು, ಹಣ್ಣು ಖರೀದಿಗೆ ಬಂದವರು ಕೆಲ ಉತ್ಪನ್ನಗಳ ರುಚಿ ನೋಡುತ್ತಿದ್ದಾರೆ. ಅಲ್ಲದೇ, ಹಣ್ಣುಗಳ ಮೇಳದ ಕುರಿತು ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಆಯೋಜನೆ ಮಾಡಿರುವ ಹಣ್ಣು ಮೇಳಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇಂದಿನಿಂದ ಮೂರು ದಿನಗಳ ಕಾಲ ಹಣ್ಣು ಮೇಳ ನಡೆಯುತ್ತಿದ್ದು, ಒಂದೇ ಕಡೆ ವಿವಿಧ ತಳಿಯ ಹಣ್ಣುಗಳ ಸಿಗುತ್ತಿರುವುದು ನಿಜಕ್ಕೂ ಗ್ರಾಹಕರಿಗೆ ಖುಷಿ ತಂದಿದೆ.
ಇದನ್ನೂ ಓದಿ: India Toy Fair 2021: ಆಟಿಕೆ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಇದನ್ನೂ ಓದಿ: ಮೈಸೂರಲ್ಲಿ ಗೆಡ್ಡೆ-ಗೆಣಸು ಮೇಳ.. ಪೂರ್ವಜರು ಬಳಸುತ್ತಿದ್ದ ಆಹಾರ ಪದ್ಧತಿಯ ಪರಿಚಯ ಮಾಡಿಕೊಡುವ ಯತ್ನ !