India Toy Fair 2021: ಆಟಿಕೆ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
PM Narendra Modi: ದೇಶದ ಎಲ್ಲ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿನ 1,000ಕ್ಕಿಂತಲೂ ಹೆಚ್ಚು ಪ್ರದರ್ಶನಕಾರರು ತಾವು ತಯಾರಿಸದ ಆಟಿಕೆಗಳನ್ನು ಆನ್ಲೈನ್ನಲ್ಲಿ ಪ್ರದರ್ಶಿಸಲಿದ್ದಾರೆ. ಇಲ್ಲಿ ಪ್ರದರ್ಶಿತವಾಗುವ ಎಲ್ಲ ಆಟಿಕೆಗಳು ಭಾರತದಲ್ಲಿ ತಯಾರಿಸಿದವುಗಳಾಗಿವೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಆಟಿಕೆ ಮೇಳಕ್ಕೆ (India Toy Fair 2021 ) ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಆಟಿಕೆ ಮೇಳ ಉದ್ಘಾಟಿಸಿ ಮಾತನಾಡಿದ ಮೋದಿ ಆಟಿಕೆಗಳು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಮಕ್ಕಳು ಆಟಿಕೆಗಳಲ್ಲಿಯೂ ಜೀವಂತಿಕೆಯನ್ನು ಹುಡುಕುತ್ತಿರುತ್ತಾರೆ ಎಂದಿದ್ದಾರೆ. ಆಟಿಕೆ ತಯಾರಿಕಾ ವಲಯಕ್ಕೆ ಸಂಬಂಧಿಸಿವರನ್ನು ಒಗ್ಗೂಡಿಸುವ ಕಾರ್ಯಕ್ರಮ ಇದಾಗಿದ್ದು, ಆಟಿಕೆ ಉದ್ಯಮದ ಬೆಳವಣಿಗೆಯನ್ನು ಪ್ರೋತ್ಸಾಹ ನೀಡುವ ಪ್ರಯತ್ನ ಇದಾಗಿದೆ.
ವಿವಿಧ ರಾಜ್ಯಗಳ ಆಟಿಕೆ ಉದ್ಯಮಿ, ತಯಾರಕರಲ್ಲಿ ವಿಡಿಯೊ ಸಂವಾದದ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮೊಂದಿಗೆ ಮಾತನಾಡಿದಾಗ ನಮ್ಮ ಆಟಿಕೆ ಉದ್ಯಮ ಎಷ್ಟು ಸುದೃಢವಾಗಿದೆ ಎಂಬುದು ತಿಳಿಯಿತು. ಈ ಆಟಿಕೆ ಮೇಳ ಕೇವಲ ಮಾರಾಟದ ಮೇಳ ಅಲ್ಲ. ಇದು ಆಟಿಕೆ ಉದ್ಯಮದ ಉತ್ತೇಜನಕ್ಕಾಗಿರುವ ಕಾರ್ಯಕ್ರಮವಾಗಿದೆ. ನೀವು ಆಟಿಕೆ ವಿನ್ಯಾಸ, ಟೆಕ್ನಾಲಜಿ, ಮಾರ್ಕೆಟಿಂಗ್, ಪ್ಯಾಕಿಂಗ್ ಬಗ್ಗೆ ಚರ್ಚೆ ಮಾಡಬಹುದು ಎಂದಿದ್ದಾರೆ. ಭಾರತದಲ್ಲಿನ ಆಟಗಳನ್ನು ಹೊರಗಿನ ದೇಶದವರು ಅಳವಡಿಸಿಕೊಂಡಿದ್ದಾರೆ. ಪ್ರಾಚೀನ ಮಂದಿರಗಳಲ್ಲಿಯೂ ನಮ್ಮ ಆಟದ ರೀತಿಯನ್ನು ಬಿಂಬಿಸುವ ಶಿಲ್ಪಗಳನ್ನು ಕಾಣಬಹುದು. ಆಟ ಮತ್ತು ಆಟಿಕೆಯು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮಕ್ಕಳ ಜ್ಞಾನ ವಿಕಸನಕ್ಕಾಗಿರುವ ಆಟಿಕೆಗಳನ್ನು ತಯಾರಿಸಬೇಕು. ಮರುಬಳಕೆ ಮತ್ತು ಪುನರ್ ಬಳಕೆ ಭಾರತದ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿದೆಯೋ ಅದೇ ರೀತಿ ಆಟಿಕೆಗಳಲ್ಲಿಯೂ ಇದು ಬಳಕೆಯಾಗಿದೆ.
ಕರ್ನಾಟಕದ ಚನ್ನಪಟ್ಟಣ ಬೊಂಬೆ, ಅಸ್ಸಾಂನ ಟೆರಾಕೊಟ ಆಟಿಕೆ, ವಾರಣಾಸಿಯ ಮರದ ಬೊಂಬೆ ಎಲ್ಲವೂ ಭಿನ್ನವಾಗಿದೆ. ಇವುಗಳು ಸೃಜನಾತ್ಮಕವಾಗಿದ್ದು, ಪ್ರಾಕೃತಿಕ ವಸ್ತುಗಳಿಂದ ನಿರ್ಮಿತವಾಗಿವೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪುನರ್ ಬಳಕೆ ಆಗುವ ವಸ್ತುಗಳನ್ನೇ ಆಟಿಕೆಗಳಿಗೆ ಬಳಸಿ ಎಂದು ಮೋದಿ ಹೇಳಿದ್ದಾರೆ .
ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಆಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸರ್ಕಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಭಾರತದ ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಮೋದಿ ಮಾತನಾಡಿದ್ದರು.
ಆಟಿಕೆ ಮೇಳ ಯಾವಾಗ? ಹೇಗಿರಲಿದೆ? 2021 ಫೆಬ್ರವರಿ 27ರಿಂದ ಮಾರ್ಚ್ 2ರವರೆಗೆ ಆಟಿಕೆ ಮೇಳ ನಡೆಯಲಿದೆ. ಆಟಿಕೆ ತಯಾರಿಕೆ ಕ್ಷೇತ್ರದಲ್ಲಿ ತೊಡಗಿರುವವರು, ಮಾರಾಟಗಾರರು, ವಿನ್ಯಾಸಕಾರರು, ವಿದ್ಯಾರ್ಥಿಗಳು, ಶಿಕ್ಷಕರು ಇವರೆಲ್ಲರನ್ನೂ ಒಗ್ಗೂಡಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಆಟಿಕೆ ಉದ್ಯಮದ ಒಟ್ಟಾರೆ ಅಭಿವೃದ್ಧಿಗೆ ಸುಸ್ಥಿರ ಸಂಪರ್ಕಗಳನ್ನು ರಚಿಸಲು ಮತ್ತು ಸಂವಾದವನ್ನು ಉತ್ತೇಜಿಸಲು ವರ್ಚುವಲ್ ವೇದಿಕೆಯಾಗಿದೆ ಈ ಮೇಳ.
Speaking at The India Toy Fair 2021. Watch. https://t.co/2mlOE6eQir
— Narendra Modi (@narendramodi) February 27, 2021
ದೇಶದ ಎಲ್ಲ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಲ್ಲಿನ 1,000ಕ್ಕಿಂತಲೂ ಹೆಚ್ಚು ಪ್ರದರ್ಶನಕಾರರು ತಾವು ತಯಾರಿಸಿದ ಆಟಿಕೆಗಳನ್ನು ಆನ್ಲೈನ್ನಲ್ಲಿ ಪ್ರದರ್ಶಿಸಲಿದ್ದಾರೆ. ಇಲ್ಲಿ ಪ್ರದರ್ಶಿತವಾಗುವ ಎಲ್ಲ ಆಟಿಕೆಗಳು ಭಾರತದಲ್ಲಿ ತಯಾರಿಸಿದವುಗಳಾಗಿವೆ. ಭಾರತದ ಸಾಂಪ್ರದಾಯಿಕ ಆಟಿಕೆಗಳು, ಎಲೆಕ್ಟ್ರಾನಿಕ್ ಆಟಿಕೆ, ದುಬಾರಿ ಆಟಿಕೆಗಳು, ಪಜಲ್ ಮತ್ತು ಗೇಮ್ಸ್ ಸೇರಿದಂತೆ ನವೀನ ಆಟಿಕೆಗಳು ಕೂಡಾ ಮೇಳದಲ್ಲಿ ಇರಲಿವೆ. ಆಟಿಕೆಗಳ ಮಾರಾಟ ಸೇರಿದಂತೆ ತಜ್ಞರ ಚರ್ಚೆ, ಭಾರತದ ಆಟಿಕೆ ಉದ್ಯಮಗಳನ್ನು ಬಲಗೊಳಿಸಲು ವೆಬಿನಾರ್ಗಳನ್ನು ಆಯೋಜಿಸಲಾಗಿದೆ.
ಈ ವೇದಿಕೆ ಮೂಲಕ ಆಟಿಕೆ ಉದ್ಯಮದಲ್ಲಿ ತೊಡಗಿರುವ ಎಲ್ಲರೂ ಒಂದಾಗಿ ಈ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಫ್ತು ಉತ್ತೇಜಿಸುವ ಮೂಲಕ ಭಾರತವನ್ನು ಮುಂದಿನ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ಹೇಗೆ ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಸರ್ಕಾರ ಹೇಳಿದೆ.
India Toy Fair 2021ನಲ್ಲಿ ಭಾಗವಹಿಸುವುದು ಹೇಗೆ?
www.theindiatoyfair.in ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಆಟಿಕೆ ಮೇಳದಲ್ಲಿ ಭಾಗವಹಿಸಬಹುದು.
ಇದನ್ನೂ ಓದಿ: ಭಾರತ ಆಟಿಕೆಗಳ ತಯಾರಿಕಾ ಹಬ್ ಆಗಬೇಕು, ಚನ್ನಪಟ್ಟಣದ ಗೊಂಬೆಗಳು ಮಾದರಿಯಾಗಬೇಕು: ಪ್ರಧಾನಿ ಮೋದಿ
Published On - 11:26 am, Sat, 27 February 21