ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಸಂಚಾರ ನಿರ್ಬಂಧ ಮಾರ್ಚ್ 31ರವರೆಗೆ ಮುಂದೂಡಿಕೆ
ಅಂತಾರಾಷ್ಟ್ರೀಯ ಕಾರ್ಗೋ (ಸರಕು) ವಿಮಾನಗಳಿಗೆ ಮತ್ತು DGCAಯಿಂದ ಅನುಮೋದನೆ ಪಡೆದ ವಿಮಾನಗಳ ಹಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದೂ ಪ್ರಾಧಿಕಾರ ತಿಳಿಸಿದ್ದು, ಈ ನಿರ್ಬಂಧದ ಮಧ್ಯೆ ವಂದೇ ಭಾರತ್ ಮಿಷನ್ನಡಿ ವಿಶೇಷ ವಿಮಾನಗಳು ಸಂಚರಿಸಲಿವೆ ಎಂದೂ ಮಾಹಿತಿ ನೀಡಿದೆ.
ಮುಂಬೈ: ದೇಶದಲ್ಲಿ ಕೊರೊನಾ 2ನೇ ಅಲೆ ಅಬ್ಬರ ಕೆಲವು ರಾಜ್ಯಗಳಲ್ಲಿ ಹೆಚ್ಚಾಗಿರುವ ಬೆನ್ನಲ್ಲೇ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ನಿರ್ಬಂಧವನ್ನು ಮಾರ್ಚ್ 31ರವರೆಗೆ ಮುಂದುವರಿಸಿದೆ. ಕಳೆದ ವರ್ಷದಿಂದಲೂ ಕೊವಿಡ್-19 ಕಾರಣದಿಂದ, ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಸದ್ಯ ಮಾರ್ಚ್ 31ರವರೆಗೆ ವಾಣಿಜ್ಯ ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದ್ದರೂ, ಪರಿಸ್ಥಿತಿ ನೋಡಿಕೊಂಡು ಕೆಲವು ಆಯ್ದ ಮಾರ್ಗಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದೂ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ತಿಳಿಸಿದೆ.
ಇನ್ನು ಅಂತಾರಾಷ್ಟ್ರೀಯ ಕಾರ್ಗೋ (ಸರಕು) ವಿಮಾನಗಳಿಗೆ ಮತ್ತು DGCAಯಿಂದ ಅನುಮೋದನೆ ಪಡೆದ ವಿಮಾನಗಳ ಹಾರಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದೂ ಪ್ರಾಧಿಕಾರ ತಿಳಿಸಿದ್ದು, ಈ ನಿರ್ಬಂಧದ ಮಧ್ಯೆ ವಂದೇ ಭಾರತ್ ಮಿಷನ್ನಡಿ ವಿಶೇಷ ವಿಮಾನಗಳು ಸಂಚರಿಸಲಿವೆ ಎಂದೂ ಮಾಹಿತಿ ನೀಡಿದೆ. ಈ ವಂದೇ ಭಾರತ್ ಮಿಷನ್ನಡಿ ಕಳೆದ ಮೇ ತಿಂಗಳಿಂದ ಅಂತಾರಾಷ್ಟ್ರೀಯ ವಿಮಾನಗಳು ಸಂಚರಿಸುತ್ತಿದ್ದು, ಕೊವಿಡ್-19 ಲಾಕ್ಡೌನ್ನಿಂದ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೋಗಲು ಸಾಧ್ಯವಾಗದೆ ಇರುವವರ, ಯಾವುದೋ ದೇಶದಲ್ಲಿ ಸಿಲುಕಿದವರಿಗೆ ಸೇವೆ ಒದಗಿಸುತ್ತಿದೆ. ಇನ್ನು ಭಾರತ, ಅಮೆರಿಕ, ಯುಕೆ, ಯುಎಇ, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ಸೇರಿ ಕೆಲವು ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದ್ದು, ಅದರ ಅನ್ವಯ ಎರಡು ದೇಶಗಳ ವಿಮಾನಗಳು, ಈ ಎರಡು ದೇಶಗಳ ವಾಯುಮಾರ್ಗದಲ್ಲಿ ಸಂಚರಿಸಬಹುದಾಗಿದೆ.
ದೇಶದಲ್ಲಿ 2ನೇ ಹಂತದ ಕೊರೊನಾ ಲಸಿಕೆ ವಿತರಣೆ ಮಾರ್ಚ್ 1ರಿಂದ ಪ್ರಾರಂಭವಾಗಲಿದ್ದು, ಇನ್ನೊಂದು ಕಡೆ ಕೆಲವು ರಾಜ್ಯಗಳಲ್ಲಿ ಎರಡನೇ ಅಲೆ ಹೆಚ್ಚಾಗಿದೆ. ಹಾಗೇ ರೂಪಾಂತರಿ ಕೊರೊನಾದ ಹಾವಳಿಯೂ ಇದೆ. ಲಸಿಕೆ ಬಂದರೂ ಕೊರೊನಾ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯಬೇಡಿ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Coronavirus | ಕೊವಿಡ್-19 ಸೋಂಕು ಪತ್ತೆ ಹಚ್ಚಲು ನಾಯಿಗಳಿಗೆ ತರಬೇತಿ ನೀಡಿದ ಭಾರತೀಯ ಸೇನೆ
ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಹೊಸ ಕೊವಿಡ್ ಮಾರ್ಗಸೂಚಿ ಬಿಡುಗಡೆ; ನೀವು ತಿಳಿದಿರಬೇಕಾದ ವಿಚಾರಗಳು ಇಲ್ಲಿದೆ