Coronavirus | ಕೊವಿಡ್-19 ಸೋಂಕು ಪತ್ತೆ ಹಚ್ಚಲು ನಾಯಿಗಳಿಗೆ ತರಬೇತಿ ನೀಡಿದ ಭಾರತೀಯ ಸೇನೆ
Indian Army: ಕೋವಿಡ್-19 ಸೋಂಕು ಪತ್ತೆ ತರಬೇತಿಗೆ ಭಾರತೀಯ ಸೇನೆಯು ಶ್ವಾನಗಳಿಗೆ ತರಬೇತಿ ನೀಡಿದೆ. ಕಾಕರ್ ಸ್ಪಾನಿಯಲ್ ಮತ್ತು ತಮಿಳುನಾಡಿನ ಚಿಪ್ಪಿಪಾರೈ ತಳಿಗೆ ಸೇರಿದ ಈ ನಾಯಿಗಳು ಬಯೋಮಾರ್ಕರ್ಗಳ ಮೂಲಕ ಸೋಂಕಿತರನ್ನು ಪತ್ತೆಹಚ್ಚುತ್ತವೆ.
ದೆಹಲಿ: ಭಾರತದ ಗಡಿ ಕಾಯುವಲ್ಲಿ ಶ್ವಾನಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಭಾರತೀಯ ಸೇನೆ ಕೆಲವು ಆಯ್ದ, ದೇಶೀಯ ತಳಿಗಳಿಗೆ ತರಬೇತಿ ನೀಡುತ್ತಿದೆ. ಆದರೆ ಹೊಸದಾಗಿ, ದೇಶದಲ್ಲೇ ಮೊದಲ ಬಾರಿಗೆ ಭಾರತೀಯ ಸೇನೆ ಮೂರು ಶ್ವಾನಗಳಿಗೆ ಕೊರೊನಾ ಸೋಂಕು ಪತ್ತೆ ಹಚ್ಚುವ ತರಬೇತಿಯನ್ನು ನೀಡಿದೆ. ಸದ್ಯ ಕೊರೊನಾ ನಿರ್ಣಯ ತಂತ್ರಗಳಿಂದ ರೋಗ ಪತ್ತೆಗೆ ವಿಳಂಬವಾಗುತ್ತಿರುವುದರಿಂದ ಸೇನೆ ಈ ಹೆಜ್ಜೆ ಇಟ್ಟಿದೆ. ಈಗ ಮೂರು ಶ್ವಾನಗಳು ಸಿದ್ಧವಾಗಿದ್ದು, ಇವುಗಳಿಗೆ ಮನುಷ್ಯನ ಮೂತ್ರ ಮತ್ತು ಬೆವರಿನ ಮಾದರಿ ವಾಸನೆಯ ಮೂಲಕವೇ ಸೋಂಕನ್ನು ಪತ್ತೆ ಹಚ್ಚುವ ತರಬೇತಿ ನೀಡುತ್ತಿರುವುದಾಗಿ ಹಿರಿಯ ಸೇನಾ ಅಧಿಕಾರಿ ತಿಳಿಸಿದ್ದಾರೆ.
ಈ ತರಬೇತಿಗೆ ಎರಡು ವರ್ಷ ವಯಸ್ಸಿನ ಕಾಸ್ಪರ್, ಒಂದು ವರ್ಷದ ಜಯಾ, ಮಣಿ ಎಂಬ ನಾಯಿಗಳನ್ನು ಭಾರತೀಯ ಸೇನೆ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ ಕಾಸ್ಪರ್, ಕಾಕರ್ ಸ್ಪಾನಿಯಲ್ ತಳಿಯ ಶ್ವಾನ. ತಮಿಳುನಾಡಿನ ಚಿಪ್ಪಿಪಾರೈ ತಳಿಗೆ (ಉದ್ದನೆಯ ಕಾಲುಗಳನ್ನು ಹೊಂದಿದ್ದು, ಸಪೂರ ಇರುತ್ತವೆ) ಸೇರಿದವು ಜಯಾ, ಮಣಿ. ಜಯಾ ಮತ್ತು ಕಾಸ್ಪರ್ ಶ್ವಾನಗಳಿಗೆ ತರಬೇತಿ ಮುಗಿದಿದ್ದು, ಮಣಿಗೆ ಇನ್ನೂ ಟ್ರೇನಿಂಗ್ ನಡೆಯುತ್ತಿದೆ. ಕೊವಿಡ್-19 ಪಾಸಿಟಿವ್ ರೋಗಿಗಳ ಬೆವರು ಮತ್ತು ಮೂತ್ರದಿಂದ ಹೊಮ್ಮುವ ನಿರ್ದಿಷ್ಟ ಬಯೋಮಾರ್ಕರ್ ಪರಿಗಣಿಸಿ ತರಬೇತಿ ನೀಡಲಾಗುತ್ತಿದೆ. ತರಬೇತಿ ಪೂರ್ಣಗೊಂಡ ಜಯಾ ಹಾಗೂ ಕಾಸ್ಪರ್ ಶ್ವಾನಗಳನ್ನು ದೆಹಲಿಯ ಟ್ರಾನ್ಸಿಟ್ ಶಿಬಿರಗಳಲ್ಲಿ ನಿಯೋಜಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 806 ಜನರ ಮಾದರಿಗಳನ್ನು ಪರಿಶೀಲಿಸಿವೆ. ಅವರಲ್ಲಿ 18 ಮಂದಿಯಲ್ಲಿ ಕೊರೊನಾ ಇರುವುದನ್ನು ಪತ್ತೆ ಹಚ್ಚಿವೆ ಎಂದೂ ಸೇನಾ ಮೂಲಗಳು ತಿಳಿಸಿವೆ.
ಯಾವ ಮಾದರಿಯಲ್ಲಿ ಕೊರೊನಾ ಸೋಂಕು ಇದೆ ಎಂದು ಗೊತ್ತಾಗುತ್ತದೆಯೋ, ಆ ಮಾದರಿಯ ಎದುರು ಶ್ವಾನಗಳು ಮೌನವಾಗಿ, ಏನೂ ಸದ್ದು ಮಾಡದೆ ಕುಳಿತುಕೊಳ್ಳುತ್ತವೆ. ಒಟ್ಟಾರೆ ಏಳು ನಾಯಿಗಳನ್ನು ಈ ತರಬೇತಿಗೆ ಸಜ್ಜುಗೊಳಿಸಲಾಗುತ್ತಿದ್ದು, ಆದಷ್ಟು ಹಂಗಾಮಿ ಕ್ಯಾಂಪ್ಗಳಲ್ಲಿ ಇವುಗಳನ್ನು ನಿಯೋಜಿಸಲು ಸೇನೆ ಯೋಚಿಸಿದೆ.
ವಿಶ್ವದಾದ್ಯಂತ ರೋಗಗಳ ಪತ್ತೆಯಲ್ಲಿ ನಾಯಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಹಲವು ದೇಶಗಳು ಕ್ಯಾನ್ಸರ್, ಮಲೇರಿಯಾ, ಮಧುಮೇಹದಂತ ಕಾಯಿಲೆಗಳನ್ನು ಪತ್ತೆ ಹಚ್ಚಲು ಶ್ವಾನಗಳನ್ನು ಬಳಸಿಕೊಳ್ಳುತ್ತಿವೆ. ನಾಯಿಗಳು ರೋಗ ಪತ್ತೆಯನ್ನು ಹೇಗೆ ಮಾಡಬಲ್ಲವು ಎಂಬುದರ ಬಗ್ಗೆ ಸಂಶೋಧನೆಗಳೂ ನಡೆಯುತ್ತಿವೆ ಎಂದು ಲೆಫ್ಟಿನಂಟ್ ಕರ್ನಲ್ ಸುರಿಂದರ್ ಸೈನಿ ತಿಳಿಸಿದ್ದಾರೆ.