
ಬೆಂಗಳೂರು, ಮೇ 27: ಇಂಧನ ದರ ಏರಿಕೆಯ ಬಿಸಿ ಇದೀಗ ಲೆದರ್ (Leather) ವಸ್ತುಗಳಿಗೂ ತಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ನಿರಂತರ ಏರಿಕೆ ಬೆನ್ನಲ್ಲೇ ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಲೆದರ್ ಶೂ, ಬೆಲ್ಟ್ ಹಾಗೂ ಶಾಲಾ ಬ್ಯಾಗ್ ಬೆಲೆ ಕೂಡ ಏರಿಕೆ ಆಗಿದೆ. ಶಾಲೆ ಆರಂಭದ ಹೊತ್ತಲ್ಲೇ ಹೀಗೆ ಏರಿಕೆ ಆಗುತ್ತಿರುವುದು ಸದ್ಯ ಪೋಷಕರಿಗೆ ಶಾಕ್ ಎದುರಾಗಿದ್ದು, ಮಧ್ಯಮ ವರ್ಗದ ಜನರಿಗೆ ಇದು ಮತ್ತೆ ಹೊರೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Petrol Diesel Prices Hike: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಬೆಂಗಳೂರಿನಲ್ಲಿ ಇಂಧನ ದರದ ಚಾರ್ಟ್ ಇಲ್ಲಿದೆ
ಈಗಾಗಲೇ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಕಾರ್ಮಿಕರ ವೆಚ್ಚ ಹೆಚ್ಚಳದಿಂದ ತತ್ತರಿಸಿರುವ ವ್ಯಾಪಾರಿಗಳಿಗೆ ಇಂಧನ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳ ಕಾರ್ಖಾನೆಗಳಲ್ಲಿ ತಯಾರಾಗುವ ಲೆದರ್ ವಸ್ತುಗಳು ಬೆಂಗಳೂರಿನಂತಹ ನಗರಗಳಿಗೆ ರವಾನಿಸಲು ಲಾರಿಗಳು ಹಾಗೂ ಸರಕು ಸಾಗಣೆ ವಾಹನಗಳನ್ನೇ ಬಳಸುವುದು ಅನಿವಾರ್ಯವಾಗಿದೆ. ಆದರೆ ಡೀಸೆಲ್ ದರ ಏರಿಕೆಯಿಂದ ಸಾರಿಗೆ ವೆಚ್ಚವೂ ಹೆಚ್ಚಾಗಿದ್ದು, ಉತ್ಪನ್ನಗಳ ಅಂತಿಮ ಬೆಲೆ ಮೇಲೆ ನೇರ ಪರಿಣಾಮ ಬೀರುತ್ತಿದೆ.
ವ್ಯಾಪಾರಿಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಿಂದಲೇ ಸಾರಿಗೆ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಹಳೆಯ ದರದಲ್ಲೇ ಬ್ಯಾಗ್ ಮತ್ತು ಶೂಗಳನ್ನು ಮಾರಾಟ ಮಾಡುವುದು ಕಷ್ಟ. ಹೊಸ ಸ್ಟಾಕ್‌ಗಳಿಗೆ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಕೆಲವು ಮಾದರಿಯ ಲೆದರ್ ಐಟಮ್ಸ್ಗಳಿಗೆ 5 ರಿಂದ 15 ಶೇಕಡ ಹಾಗೂ ಶೂಗಳಿಗೆ 10 ರಿಂದ 15 ಶೇಕಡ ತನಕ ಬೆಲೆ ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ಇಂಧನ ದರ ಸ್ಥಿರವಾಗದಿದ್ದರೆ ಇನ್ನಷ್ಟು ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: ಗ್ರಾಹಕರಿಗೆ ಶೀಘ್ರ ಮತ್ತೊಂದು ದರ ಏರಿಕೆ ಬರೆ: ಸರಕು ಸಾಗಾಟ ವಾಹನಗಳ ಬಾಡಿಗೆ ದರ ಶೇ.10ರಷ್ಟು ಹೆಚ್ಚಳ ಸಾಧ್ಯತೆ
ಶಾಲೆಗಳು ಆರಂಭವಾಗುವ ಹೊತ್ತಿನಲ್ಲಿ ಪೋಷಕರು ಈಗಾಗಲೇ ಪುಸ್ತಕ, ಯೂನಿಫಾರ್ಮ್, ಶುಲ್ಕ ಸೇರಿದಂತೆ ಹಲವು ಖರ್ಚುಗಳು ಮಾಡಿದ್ದಾರೆ. ಈ ನಡುವೆ ಬ್ಯಾಗ್ ಮತ್ತು ಶೂಗಳ ಬೆಲೆ ಏರಿಕೆ ಆದರೆ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ತಂದೊಡ್ಡಿದೆ.
ವರದಿ: ನಟರಾಜ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.