AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದದ ಕೇಂದ್ರ ಬಿಂದುವಾದ ಗದಗ ಜಿಮ್ಸ್ ನಿರ್ದೇಶಕ ಹುದ್ದೆ

ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆ ಜಿಮ್ಸ್​ ನಿರ್ದೇಶಕರ ಹುದ್ದೆ ಈವಾಗ ವಿವಾದದ ಕೇಂದ್ರ ಬಿಂದುವಾಗಿದೆ. ಕೇವಲ ಎರಡು ತಿಂಗಳಲ್ಲಿ ಪ್ರಭಾರಿ ನಿರ್ದೇಶಕರನ್ನು ಎತ್ತಂಗಡಿ ಮಾಡಿ ತಾರಾತುರಿಯಲ್ಲಿ ಮತ್ತೊಬ್ಬರನ್ನು ನೇಮಿಸಲಾಗಿದೆ. ಈ ನೇಮಕಾತಿಯಲ್ಲಿ ದೊಡ್ಡ ಗೊಲ್ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ.

ವಿವಾದದ ಕೇಂದ್ರ ಬಿಂದುವಾದ ಗದಗ ಜಿಮ್ಸ್ ನಿರ್ದೇಶಕ ಹುದ್ದೆ
ವಿವಾದದ ಕೇಂದ್ರ ಬಿಂದುವಾದ ಗದಗ ಜಿಮ್ಸ್ ನಿರ್ದೇಶಕ ಹುದ್ದೆ
TV9 Web
| Edited By: |

Updated on:Nov 08, 2022 | 11:35 AM

Share

ಗದಗ: ಜಿಮ್ಸ್ ನಿರ್ದೇಶಕಿ ರೇಖಾ ಸೋನವಾನೆ ಅವರನ್ನು ಏಕಾಏಕಿ ಎತ್ತಂಗಡಿ ಮಾಡುವ ಮೂಲಕ ಸಂಸ್ಥೆಯ ನಿರ್ದೇಶಕ ಹುದ್ದೆ ವಿವಾದ ಕೇಂದ್ರಬಿಂದುವಾಗಿ ಪರಿಣಮವಿಸಿದೆ. ಕೇವಲ ಎರಡು ತಿಂಗಳಲ್ಲಿ ಎತ್ತಂಗಡಿ ಮಾಡಿದ ಸರ್ಕಾರ, ಆ ಸ್ಥಾನಕ್ಕೆ ಸೇವಾ ಅನುಭವ ಕಡಿಮೆ ಇರುವ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರನ್ನು ನೇಮಕ ಮಾಡಿರುವ ಆರೋಪ ಕೇಳಿಬಂದಿದ್ದು, ಸರ್ಕಾರದ ವರ್ಗಾವಣೆ ಆದೇಶಕ್ಕೆ ರೇಖಾ ಸೋನಾವನೆ ಅಸಮಾಧಾನ ವ್ಯಕ್ತಪಡೆಸಿದ್ದಾರೆ.

ನಗರದ ಪ್ರತಿಷ್ಠಿತ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಒಂದಲ್ಲಾ ಒಂದು ಅವಾಂತರಗಳ ಮೂಲಕ ಸದಾ ಸುದ್ದಿಯಲ್ಲಿರುತ್ತದೆ. ಈವಾಗ ನಿರ್ದೇಶಕ ಹುದ್ದೆ ಬದಲಾವಣೆ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಜಿಮ್ಸ್ ನಿರ್ದೇಶಕಿಯಾಗಿದ್ದ ಡಾ. ರೇಖಾ ಸೋನವಾನೆ ಅವರನ್ನು ಸರ್ಕಾರ ಕೇವಲ ಎರಡು ತಿಂಗಳಲ್ಲಿ ಎತ್ತಂಗಡಿ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಜಿಮ್ಸ್ ಆಸ್ಪತ್ರೆಯ ಪ್ರಭಾರಿ ನಿರ್ದೇಶಕಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಅಲ್ಲಿನ ಆಡಳಿತವನ್ನು ತಿಳಿಯಲು ಸ್ವಲ್ಪ ಕಾಲಾವಕಾಶ ಬೇಕು. ಆದರ ಆಡಳಿತದಲ್ಲಿ ಸುಧಾರಣೆ ತರಬೇಕು ಎನ್ನುವ ಹಂಬಲ ಹೊಂದಿದ್ದ ರೇಖಾ ಸೋನಾವನೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ಆದೇಶಕ್ಕೆ ಅಸಮಾಧಾನ ಹೊರಹಾಕಿದ ರೇಖಾ ಸೋನಾವನೆ, ಕೇವಲ ಎರಡು ತಿಂಗಳಲ್ಲಿ ನನ್ನನ್ನು ಸರ್ಕಾರ ವರ್ಗಾವಣೆ ಮಾಡಿದೆ. ಮಹಿಳೆಯಾಗಿ ಉನ್ನತ ಹುದ್ದೆ ಸಿಕ್ಕಿದ್ದಕ್ಕಾಗಿ ಏನೋ ಅಭಿವೃದ್ಧಿ ಕನಸು ಹೊಂದಿದ್ದೆ. ಆದರೆ ಸರ್ಕಾರ ದಿಢೀರ ಎತ್ತಂಗಡಿ ಮಾಡಿದೆ ಎಂದು ಹೇಳಿದ್ದಾರೆ. ಸರ್ಕಾರದ ಆದೇಶದ ಅನ್ವಯ ನಾನು ಮೆಡಿಕಲ್ ಸುಪರಿಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತೇನೆ. ಆದರೆ ಕೇವಲ ಎರಡು ತಿಂಗಳಲ್ಲಿ ಹುದ್ದೆಯನ್ನು ಬದಲಾವಣೆ ಮಾಡಿರುವುದರಿಂದ ಆಸ್ಪತ್ರೆಯ ಆಡಳಿತಕ್ಕೆ ಹಾಗೂ ರೋಗಿಗಳ ಮೇಲೆ‌ ಪರಿಣಾಮ ಬಿರುತ್ತದೆ ಎಂದರು.

ಜಿಮ್ಸ್ ನೂತನ ನಿರ್ದೇಶಕರ ಹುದ್ದೆಗೆ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರನ್ನು ಸರ್ಕಾರ ಪ್ರಭಾರಿ ನಿರ್ದೇಶಕ ಅಂತ ನೇಮಕ ಮಾಡಿದೆ. ಈ ಹಿಂದೆ ಇದ್ದ ನಿರ್ದೇಶಕಿ ಡಾ.ರೇಖಾ ಸೋನಾವನೆ ಅವರನ್ನು ಡಿಮೋಷನ್ ಮಾಡಿ ಜಿಮ್ಸ್ ಮೆಡಿಕಲ್ ಸುಪರಿಟೆಂಡೆಂಟ್ ಎಂದು ನೇಮಕ ಮಾಡಲಾಗಿದೆ. ಆದರೆ ಈವಾಗ ಪ್ರಭಾರಿ ನಿರ್ದೇಶಕರಾದ ಡಾ. ಬಸವರಾಜ್ ಬೊಮ್ಮನಹಳ್ಳಿ ಅವರು ಸೇವಾ ಅನುಭವ ಕಡಿಮೆಯಿದೆ ಎನ್ನುವ ಆರೋಪ ಕೇಳಿಬಂದಿದೆ.

ಬಸವರಾಜ್ ಬೊಮ್ಮನಹಳ್ಳಿ ಅವರು ಕೇವಲ 3 ವರ್ಷ 11 ತಿಂಗಳು ಅನುಭವ ಹೊಂದಿದ್ದಾರೆ. ಇದು ಕಾನೂನು ಬಾಹಿರ ಅನ್ನುವ ಆರೋಪ ಕೇಳಿಬಂದಿದೆ. ಆದರೆ ರೇಖಾ ಸೋನಾವನೆ ಅವರು 7 ವರ್ಷ ಸೇವಾ ಅನುಭವ ಹೊಂದಿದ್ದಾರೆ. ಆದರೆ ಸರ್ಕಾರ ಕಡಿಮೆ ಇರುವ ಬಸವರಾಜ್ ಅವರನ್ನು ನೇಮಕ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕ ಬಾಲರಾಜ್ ಅವರು ಸುದ್ದಿಗೋಷ್ಟಿ ನಡೆಸಿ ಹೇಳಿದ್ದಾರೆ.

ಪ್ರಭಾರಿ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ ಮಾತನಾಡಿ, ನಾನು ಕೂಡಾ ಅರ್ಹನೆ ಇದ್ದೇನೆ, ಸರ್ಕಾರ ನನ್ನನ್ನು ನೇಮಕ ಮಾಡಿದೆ. ಸರ್ಕಾರದ ಆದೇಶದಿಂದ ಕೆಲಸ ಆರಂಭ ಮಾಡಿದ್ದೇನೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಜಿಮ್ಸ್ ನಿರ್ದೇಶಕ ಹುದ್ದೆಯಲ್ಲಿ ದೊಡ್ಡದೊಂದು ಗೊಲ್ಮಾಲ್ ನಡೆದಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಸಾಕಷ್ಟು ಅವ್ಯವಸ್ಥೆ ಆಗರದಿಂದ ಸದಾ ಸುದ್ದಿಯಲ್ಲಿರುವ ಜಿಮ್ಸ್​ಗೆ ಪದೇ ಪದೇ ಈ ರೀತಿ ನಿರ್ದೇಶಕರನ್ನು ಬದಲಾಯಿಸಿದರೆ ಆಡಳಿತ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದೆ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವದನ್ನು ಕಾದು ನೋಡಬೇಕು.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Tue, 8 November 22