ಮುರುಘಾಶ್ರೀ ಅಕ್ಷಮ್ಯ ಅಪರಾಧ, ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂದುಕೊಂಡಿರಲಿಲ್ಲ, ತಕ್ಕ ಶಿಕ್ಷೆಯಾಗಬೇಕು -ಬಿ.ಎಸ್.ಯಡಿಯೂರಪ್ಪ
bs yediyurappa: ಮುರುಘಾಶ್ರೀ ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ನಿರೀಕ್ಷೆ ಮಾಡಿರಲಿಲ್ಲ, ಚಿತ್ರದುರ್ಗ ಮುರುಘಾ ಮಠದ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಉಡುಪಿ: ಚಿತ್ರದುರ್ಗದ ಮುರುಘಾ ಶರಣರ (Shivamurthy Murugha Sharanaru) ವಿರುದ್ಧ ಪೋಕ್ಸೋ ಪ್ರಕರಣ ವಿಚಾರವನ್ನು ಪ್ರಸ್ತಾಪಿಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (bs yediyurappa) ಅವರು ಮುರುಘಾಶ್ರೀ ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ನಿರೀಕ್ಷೆ ಮಾಡಿರಲಿಲ್ಲ. ಇದನ್ನು ಎಲ್ಲರೂ ಖಂಡಿಸಬೇಕು. ಚಿತ್ರದುರ್ಗ ಮುರುಘಾ ಮಠದ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಇಂದು ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಉಡುಪಿಯಿಂದ ಶಿರಹಟ್ಟಿಗೆ ತೆರಳಿದ ಸಂದರ್ಭದಲ್ಲಿ ಉಡುಪಿಯ ಹೆಲಿಪ್ಯಾಡ್ ನಲ್ಲಿ ಬಿಎಸ್ವೈ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಎಸ್ವೈ ಜತೆ ಸಿಎಂ ಬೊಮ್ಮಾಯಿ ಮತ್ತು ಕಾರಜೋಳ ಸಹ ಶಿರಹಟ್ಟಿಗೆ ಪ್ರಯಾಣ ಮಾಡಿದರು.
ಸತೀಶ್ ಜಾರಕಿಹೊಳಿ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು:
ಇನ್ನು ಹಿಂದೂ ಧರ್ಮದ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಿಂದೂಗಳಿಗೆ ಅಪಮಾನ ಮಾಡುವ ರೀತಿ ಹೇಳಿಕೆ ಖಂಡನೀಯ. ಕಾಂಗ್ರೆಸ್ ನಾಯಕರು ಕೇವಲ ಖಂಡನೆ ಮಾಡಿದರೆ ಸಾಕಾಗಲ್ಲ. ಸತೀಶ್ ಜಾರಕಿಹೊಳಿ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು. ಹಗುರವಾಗಿ ಮಾತಾಡಿದ್ರೆ ದೊಡ್ಡವನಾಗುತ್ತೇನೆ ಅಂದುಕೊಂಡ್ರೆ ಭ್ರಮೆ. ಶಾಸಕ ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು. ಹಿಂದೂಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಚುನಾವಣೆ ಗೆದ್ದು ಖರ್ಗೆಗೆ ಗಿಫ್ಟ್ ನೀಡುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಯಡಿಯೂರಪ್ಪ ಟಾಂಗ್ ನೀಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನ ತಮ್ಮ ಜೇಬಿನಲ್ಲಿದ್ದಾರೆಂಬ ಭಾವನೆ ಮನಸ್ಸಲ್ಲಿದ್ದಂತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಸಿದ್ದರಾಮಯ್ಯರಿಂದ ಬಿಜೆಪಿ ಗೆಲುವನ್ನು ತಡೆಯಲು ಅಸಾಧ್ಯ ಎಂದು ಹೇಳಿದರು.
BJP ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಹಾಗೂ ಸಿಎಂ ಕರಾವಳಿ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ. ನಮಗೆ ಹಿಂದೆಂದೂ ಇಲ್ಲದ ಸ್ವಾಗತ ಸಿಕ್ಕಿದೆ. ಕರಾವಳಿ ಭಾಗದಲ್ಲಿ ಬಿಜೆಪಿಯ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ. ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
Published On - 11:53 am, Tue, 8 November 22