ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಕಂಪ್ಯೂಟರ್, AC ಮಾಯ: ಅಧಿಕಾರಿಗಳೇ ಲೂಟಿ ಮಾಡಿದ್ರಾ?
ಗದಗ ಸೂರ್ಯ ನಗರದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಿಂದ ಲಕ್ಷಾಂತರ ಮೌಲ್ಯದ 20ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಮತ್ತು 6 ACಗಳು ನಾಪತ್ತೆಯಾಗಿವೆ. ಅಧಿಕಾರಿಗಳೇ ಇವುಗಳನ್ನು ಲೂಟಿ ಮಾಡಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಬಡ ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕೆ ತೀವ್ರ ಅಡಚಣೆಯಾಗಿದೆ. ಕೂಡಲೇ ತನಿಖೆ ನಡೆಸಿ, ಸ್ವತ್ತುಗಳನ್ನು ಮರಳಿ ತರುವಂತೆ ಆಗ್ರಹಿಸಲಾಗಿದೆ.
ಗದಗ, ಆ.6: ಜಿಲ್ಲೆಯ ಸೂರ್ಯ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸರ್ಕಾರಿ ಸ್ವತ್ತುಗಳು ಗಾಯಬ್ ಆಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಾಸ್ಟೆಲ್‌ನಲ್ಲಿ ಸೂಕ್ತ ಸ್ಥಿತಿಯಲ್ಲಿದ್ದ 20ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಹಾಗೂ 6 ಏರ್ ಕಂಡೀಷನರ್‌ಗಳು (AC) ನಾಪತ್ತೆಯಾಗಿದ್ದು, ಇಲಾಖೆಯ ಅಧಿಕಾರಿಗಳೇ ಇದನ್ನು ಲೂಟಿ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಬಡ ಮತ್ತು ದಲಿತ ವಿದ್ಯಾರ್ಥಿಗಳ ಡಿಜಿಟಲ್ ಶಿಕ್ಷಣಕ್ಕೆ ಅನುಕೂಲವಾಗಲೆಂದು ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ನಿರ್ಮಿಸಿತ್ತು. ಆದರೆ, ಈಗ ಲ್ಯಾಬ್‌ನಲ್ಲಿದ್ದ 20ಕ್ಕೂ ಹೆಚ್ಚು ಸುಸ್ಥಿತಿಯಲ್ಲಿದ್ದ ಕಂಪ್ಯೂಟರ್‌ಗಳು ಹಾಗೂ 6 ಎಸಿಗಳು ಮಾಯವಾಗಿವೆ. ಗದಗ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ‘ಹೇಳೋರಿಲ್ಲ ಕೇಳೋರಿಲ್ಲ’ ಎಂಬಂತಾಗಿದೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಿದ ವಸ್ತುಗಳನ್ನು ಸ್ವತಃ ಅಧಿಕಾರಿಗಳೇ ತೆಗೆದುಕೊಂಡು ಹೋಗಿ ಲೂಟಿ ಮಾಡಿದ್ದಾರೆ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ದೂರಿದ್ದಾರೆ. ಅಭ್ಯಾಸ ಮಾಡಲು ಹಾಗೂ ಆನ್‌ಲೈನ್ ಕಲಿಕೆಗೆ ಕಂಪ್ಯೂಟರ್‌ಗಳೇ ಇಲ್ಲದೆ ವಸತಿ ನಿಲಯದ ಬಡ ವಿದ್ಯಾರ್ಥಿಗಳು ತೀವ್ರ ಪರದಾಟ ನಡೆಸುತ್ತಿದ್ದು, ಅಧಿಕಾರಿಗಳ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆರೋಪಿ ಅಧಿಕಾರಿಗಳ ವಿರುದ್ಧ ತಕ್ಷಣವೇ ತನಿಖೆ ನಡೆಸಿ, ನಾಪತ್ತೆಯಾಗಿರುವ ಕಂಪ್ಯೂಟರ್ ಹಾಗೂ ಎಸಿಗಳನ್ನು ಮರಳಿ ಹಾಸ್ಟೆಲ್‌ಗೆ ತಂದು ಕೊಡುವಂತೆ ವಿದ್ಯಾರ್ಥಿಗಳು ಮತ್ತು ದಲಿತ ಸಂಘಟನೆಗಳು ಆಗ್ರಹಿಸಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

