ವಿಚ್ಛೇದನಕ್ಕೆ ಅರ್ಜಿ ಹಾಕಿದ ಜೋಡಿಗಳಲ್ಲಿ ಮತ್ತೆ ಪ್ರೀತಿ; ಗದಗ ಲೋಕ ಅದಾಲತ್​ನಲ್ಲಿ ಪುನಃ ಒಂದಾದ ಎರಡು ಜೋಡಿ

| Updated By: guruganesh bhat

Updated on: Mar 28, 2021 | 12:13 PM

ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್​ನಲ್ಲಿ ಇಂತಹ ಹತ್ತು ಹಲವು ಪ್ರಕರಣಗಳಿಗೆ ಮುಕ್ತಿ ಸಿಕ್ಕಿದೆ. ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಎರಡು ಜೋಡಿಗಳು ಮತ್ತೊಮ್ಮೆ ಒಂದಾಗಿವೆ. ಅದರಂತೆ ಹಲವಾರು ವರ್ಷ ಕೋರ್ಟ್​ಗೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದ ಜನರು ಸಹ ಇಂದು ನಿಟ್ಟುಸಿರುಬಿಟ್ಟಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಹಾಕಿದ ಜೋಡಿಗಳಲ್ಲಿ ಮತ್ತೆ ಪ್ರೀತಿ; ಗದಗ ಲೋಕ ಅದಾಲತ್​ನಲ್ಲಿ ಪುನಃ ಒಂದಾದ ಎರಡು ಜೋಡಿ
ಗದಗ ಜಿಲ್ಲಾ ನ್ಯಾಯಾಲಯ
Follow us on

ಗದಗ: ಹಿಂದೊಮ್ಮೆ ಸಪ್ತಪದಿ ತುಳಿದು, ಏಳೇಳು ಜನುಮದಲ್ಲೂ ಜತೆಯಾಗಿರೋಣ ಎಂದು ಈ ಜೋಡಿ ಅಗ್ನಿಸಾಕ್ಷಿಯಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ ಮದುವೆಯಾಗಿ ಹೊಸತರಲ್ಲಿಯೇ ಬೇರೆ ಬೇರೆಯಾದರು. ಗಂಡ ಬೇಡ ಅಂತ ಹೆಂಡತಿ, ಹೆಂಡತಿ ಬೇಡ ಅಂತ ಗಂಡ, ಹೀಗೆ ಎರಡು ಜೋಡಿಗಳು ಕೋರ್ಟ್ ಮೊರೆ ಹೋಗಿ ಡೈವರ್ಸ್​ಗೆ ಅಪ್ಲೈ ಮಾಡಿದ್ದರು. ಆದರೆ ಅದೇ ಜೋಡಿಗಳು ಈಗ ಮತ್ತೆ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ. ನಾನೊಂದು ತೀರ ನೀನೊಂದು ತೀರ ಅಂದವರು ಈಗ ನಾನು ನೀನು ಹಾಲು ಜೇನು ಅಂತಿದ್ದಾರೆ.

ಅವರು ಮದುವೆಯಾಗಿ ನೂರಾರು ಕಾಲ ಸುಖವಾಗಿ ಜೀವನ ಮಾಡಬೇಕಾಗಿತ್ತು. ಆದರೆ ವಿಧಿ ಆಟದಿಂದ ಬೇರೆ ಬೇರೆಯಾಗಿದ್ದರು. ಅಷ್ಟೇ ಅಲ್ಲ ಗಂಡನ ಮೇಲೆ ಹೆಂಡತಿ ಕೇಸ್ ಹಾಕಿದ್ರೆ, ಹೆಂಡತಿ ಮೇಲೆ ಗಂಡ ಕೇಸ್ ಹಾಕಿದ್ರು. ಹೀಗಾಗಿ ಇವರ ಮುದ್ದಾದ ಮಕ್ಕಳು ತಂದೆ ತಾಯಿ ಇದ್ದರೂ ಅನಾಥರಂತೆ ವಾಸವಾಗಿದ್ದರು. ಇನ್ನು ಕಳೆದ ಕೆಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಾ ಇದ್ದರು.

ಆದರೆ ಗದಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್​ನಲ್ಲಿ ಮತ್ತೆ ಈ ಜೋಡಿಗಳು ಒಂದಾಗಿವೆ. ಗದಗ ಜಿಲ್ಲೆಯ ರವಿಕುಮಾರ್ ಸೊಪ್ತಿಮಠ ಹಾಗೂ ಕೊಪ್ಪಳ ಮೂಲದ ಪೂಜಾ ಎಂಬುವವರು 2014 ರಲ್ಲಿ ಮದುವೆಯಾಗಿದ್ದರು. ಕೆಲವು ವರ್ಷಗಳ ಕಾಲ ಚೆನ್ನಾಗಿ ಜೀವನ ನಡೆಸಿದ್ದರು. ಆದರೆ ಎರಡು ಮಕ್ಕಳಾದ ಮೇಲೆ ಕೌಟುಂಬಿಕ ಕಲಹ ಉಂಟಾಗಿತ್ತು. ಮನೆಯಲ್ಲಿ ಅತ್ತೆ ಹಾಗೂ ನಾದಿನಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಗಂಡ ರವಿಕುಮಾರ್ ಅವರನ್ನು ಬಿಟ್ಟು ತವರುಮನೆಗೆ ಬಂದಿದ್ದಳು.

ಗದಗ ಜಿಲ್ಲೆಯ ರವಿಕುಮಾರ್ ಸೊಪ್ತಿಮಠ ಹಾಗೂ ಕೊಪ್ಪಳ ಮೂಲದ ಪೂಜಾ ಮತ್ತೆ ಒಂದಾದ ಕ್ಷಣ

ಕಳೆದ ಮೂರು ವರ್ಷಗಳಿಂದ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಂಡ- ಹೆಂಡತಿ ಮತ್ತೆ ಒಂದಾಗಿ ಬಾಳುತ್ತೇವೆ ಎಂದು ಹೇಳಿದ ಮೇಲೆ, ಮೆಗಾ ಲೋಕ ಅದಾಲತ್​ನಲ್ಲಿ ಒಂದಾಗಿದ್ದಾರೆ. ಇನ್ಮುಂದೆ ಚೆನ್ನಾಗಿ ಬಾಳುತ್ತೇವೆ ಎಂದು ಹೇಳಿದ್ದಾರೆ.

ವಿಚ್ಛೇದನಕ್ಕೆ ಅಲೆದಾಡುತ್ತಿದ್ದ ಜೋಡಿಯಲ್ಲಿ ಮತ್ತೆ ಪ್ರೀತಿ
ಮೆಗಾ ಲೋಕ ಅದಾಲತ್​ನಲ್ಲಿ ಇಂತಹುದೇ ಇನ್ನೊಂದು ಅನನ್ಯ ಘಟನೆ ನಡೆದಿದೆ.  ಗದಗ ಜಿಲ್ಲೆಯ ಅಶೋಕ ಮಲ್ಲಸಮುದ್ರ ಹಾಗೂ ಸುಧಾ ಎನ್ನುವವರು, ಕಳೆದ 16 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ 10 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಇದ್ದರು. ಇವರ ಜಗಳದಲ್ಲಿ ಎರಡು ಗಂಡು ಮಕ್ಕಳು ಅನಾಥರಂತೆ ವಾಸವಾಗಿದ್ದರು. ಸುಧಾ ಅವರೆ ಗಂಡನ ಮನೆಯಿಂದ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದಾರೆ ಎಂದು ಅಶೋಕ ದೂರು ನೀಡಿದ್ದರು. ಹಾಗೇ ಸುಧಾ ಕೂಡಾ ಗಂಡನ ವಿರುದ್ಧ ದೂರು ನೀಡಿದ್ದರು.

ಕಳೆದ ಹಲವಾರು ವರ್ಷಗಳಿಂದ ಕೋರ್ಟ್ ಕೇಸ್ ನಡೆಯುತ್ತಿತ್ತು. ಆದರೆ ಮೆಗಾ ಲೋಕ ಅದಾಲತ್​ನ ನ್ಯಾಯಾಧೀಶರ ಸಮ್ಮುಖದಲ್ಲಿ ಅಶೋಕ ಮತ್ತು ಸುಧಾ ಮತ್ತೊಮ್ಮೆ ಹಾರ ಬದಲಾಯಿಸಿ, ಒಂದಾಗಿದ್ದಾರೆ. ವಿಚ್ಛೇದನಕ್ಕೆ ಬಂದ ಜೋಡಿಗಳ ಮನವೊಲಿಸಿ ಮತ್ತೆ ಪ್ರೀತಿಯ ಬೆಸುಗೆ ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದಾರೆ.

ಅಶೋಕ ಮಲ್ಲಸಮುದ್ರ ಹಾಗೂ ಸುಧಾ ಮತ್ತೆ ಒಂದಾದ ಕ್ಷಣ

ಒಟ್ಟಿನಲ್ಲಿ ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್​ನಲ್ಲಿ ಇಂತಹ ಹತ್ತು ಹಲವು ಪ್ರಕರಣಗಳಿಗೆ ಮುಕ್ತಿ ಸಿಕ್ಕಿದೆ. ಸಿಟ್ಟಿನ ಕೈಯಲ್ಲಿ ಬುದ್ಧಿಕೊಟ್ಟು ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಎರಡು ಜೋಡಿಗಳು ಮತ್ತೊಮ್ಮೆ ಒಂದಾಗಿವೆ. ಅದರಂತೆ ಹಲವಾರು ವರ್ಷ ಕೋರ್ಟ್​ಗೆ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದ ಜನರು ಸಹ ಇಂದು ನಿಟ್ಟುಸಿರುಬಿಟ್ಟಿದ್ದಾರೆ.

ಇದನ್ನೂ ಓದಿ:

ಸಂಗಾತಿಯ ಮಾನಹಾನಿ ಮಾಡುವುದು, ಗೌರವಕ್ಕೆ ಧಕ್ಕೆ ತರುವುದು ಮಾನಸಿಕ ಕ್ರೌರ್ಯ: ಸೇನಾಧಿಕಾರಿ ವಿಚ್ಛೇದನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಉಲ್ಲೇಖ​

ವಿಚ್ಛೇದಿತ ಮಗಳ ಹಕ್ಕುಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ