ತಾಳಿ ಕಟ್ಟದೆ ಬಸವ ತತ್ವದ ಅಡಿಯಲ್ಲಿ ಮಠಾಧೀಶರ ಸಮ್ಮುಖದಲ್ಲಿ ನಡೆದ ವಿಶಿಷ್ಟ ಮದುವೆ
ಗದಗನ ಖಾಸಗಿ ಮಂಗಲ್ ಕಾರ್ಯಾಲಯದಲ್ಲಿ ಜೂನ್ 12 ರಂದು ವಿಶಿಷ್ಠ ಮದುವೆ ನಡೆದಿದ್ದು, ತಾಳಿ ಕಟ್ಟುವ ಸಂಪ್ರದಾಯ ಇಲ್ಲದೆ ಮಠಾಧೀಶರ ಸಮ್ಮುಖದಲ್ಲಿ ಬಸವ ತತ್ವದ ಅಡಿಯಲ್ಲಿ ಮದುವೆ ನಡೆದಿದೆ.
ಗದಗ: ಗದಗನ (Gadag) ಖಾಸಗಿ ಮಂಗಲ್ ಕಾರ್ಯಾಲಯದಲ್ಲಿ ಜೂನ್ 12 ರಂದು ವಿಶಿಷ್ಠ ಮದುವೆ ನಡೆದಿದ್ದು, ತಾಳಿ ಕಟ್ಟುವ ಸಂಪ್ರದಾಯ ಇಲ್ಲದೆ ಮಠಾಧೀಶರ ಸಮ್ಮುಖದಲ್ಲಿ ಬಸವ (Basavanna) ತತ್ವದ ಅಡಿಯಲ್ಲಿ ಮದುವೆ (Marriage) ನಡೆದಿದೆ. ತಾಳಿ, ಕಂಕಣ ಇಲ್ಲದೆ ಗಂಡು ಹೆಣ್ಣು ಪರಸ್ಪರ ಷಟಸ್ಥಲ ಚಿಹ್ನೆ ಬದಲಾವಣೆ ಮಾಡುವ ಮೂಲಕ ಮದುವೆಯಾಗಿದ್ದಾರೆ. ಮದುಮಗ ಆಕಾಶ್ ಬರಗುಂಡಿ, ಮದುಮಗಳು ಸುಷ್ಮಾ ಗೌಡರ ಜೋಡಿಯ ವಿಶೇಷ ಕಲ್ಯಾಣೋತ್ಸವ ನೆರವೇರಿದೆ. ತಾಳಿ ವಿರೋಧಿಸಿ ಷಟಸ್ಥಲ್ಲ ಷಟಸ್ಥಲ ಚಿಹ್ನೆಯಲ್ಲಿ ಓಂನಮ ಶಿವಾಯ ಅಂತ ಬರೆದ ಮುದ್ರೆಯ ಸರ ಪರಸ್ಪರ ಹಾಕುವ ಮೂಲಕ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶೈವ ಪದ್ಧತಿ ವಿರುದ್ಧವಾಗಿ ನಡೆದ ಮದುವೆಯಲ್ಲಿ ಓಂ ನಮ ಶಿವಾ, ಬಸವ ಜಪ ಮಾಡಿದ್ದಾರೆ.
ಮದುವೆ ವಿಶೇಷತೆ ಅಂದರೆ ಹೆಣ್ಣು ಗಂಡೆಂಬ ಭೇದ ಮರೆತು ಬಸವಣ್ಣವರ ಸಮಾನತೆ ತತ್ವದ ಅಡಿಯಲ್ಲಿ ಷಟಸ್ಥಲ ಮಾರ್ಗದ ಅನುಗುಣದಲ್ಲಿ ಮದುವೆ ನಡೆದಿದೆ. ಈ ಮದುವೆಯಲ್ಲಿ ತಾಳಿ ವಿರೋಧಿಸಲಾಗಿದೆ. ಹೀಗಾಗಿ ಕರಿಮಣಿಯ ತಾಳಿಗೆ ಈ ಮದುವೆಯಲ್ಲಿ ಅವಕಾಶ ನೀಡಿಲ್ಲ. ಷಟಸ್ಥಲ್ ಮುದ್ರೆಯಲ್ಲಿ ಇಷ್ಟ ಲಿಂಗವಿದೆ. ಶ್ರೀಗುರು ಬಸವ ಅಂತ ಬರೆಯಲಾಗಿದೆ. ಈ ಷಟಸ್ಥಲ ಮುದ್ರೆಯ ಸರವನ್ನು ವರ ವಧು ಪರಸ್ಪರ ಹಾಕುವ ಮೂಲಕ ನವಜೀವನಕ್ಕೆ ದಂಪತಿಗಳು ಕಾಲಿಟ್ಟರು.
ಬಸವತತ್ವದ ಮದುವೆಯಲ್ಲಿ ಇಳಕಲ್ ಮಠದ ಗುರುಮಹಾಂತ ಶ್ರೀಗಳು, ಶಿರೂರ ಮಠದ ಡಾ. ಬಸವಲಿಂಗ ದೇವರು, ಲಿಂಗಸೂರಿನ ಸಿದ್ದಲಿಂಗ ಶ್ರೀಗಳು ಸೇರಿದಂತೆ ನಾಡಿನ ಹಲವು ಮಠಾಧೀಶರು ಈ ವಿಶೇಷ ಮದುವೆಗೆ ಸಾಕ್ಷಿಯಾಗಿದ್ದರು. ನವದಂಪತಿಗಳು ಭಾರತದ ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ಬುದ್ದ ಬಸವ ಅಂಬೇಡ್ಕರ್ ತತ್ವ ಚಿಂತಕರು, ಬಸವ ಧರ್ಮ ಪ್ರವರ್ತಕರು, ಲಿಂಗಾಯತ ಧರ್ಮಗಳ ಲೇಖಕರು, ಲಿಂಗಾಯತ ವಿರಕ್ತ ಮಠಾಧೀಶರ ನೇತೃತ್ವದಲ್ಲಿ ನವ ದಂಪತಿಗಳಿಗೆ ಭಾರತ ಸಂವಿಧಾನ ಪೀಠಿಕೆ ಪಠಣ ಮಾಡಿಸಲಾಯಿತು. ಬಸವಾದಿ ಶರಣರ ವಚನ ಘೋಷಗಳೊಂದಿಗೆ ನವಜೋಡಿಗಳಿಗೆ ಪುಷ್ಪ ಹಾಕುವ ಮೂಲಕ ಹರಿಸಿ ಹಾರೈಸಿದರು.
ಅರಿಷಿಣ ಕೊಂಬು, ವಿಳ್ಯದೆಲೆಯ ಕಂಕಣ ಬದಲಿಗೆ ಪರಸ್ಪರರು ರುದ್ರಾಕ್ಷಿ ಕಂಕಣ ಕಟ್ಟಿಕೊಂಡರು, ವಿಭೂತಿಯನ್ನು ಧರಿಸಿಕೊಂಡು ಅವುಗಳಿಗೆ ಸಂಬಂಧಿಸಿದ ವಚನಗಳನ್ನು ಹೇಳುತ್ತ ಹಸೆಮಣೆ ಏರಿದ್ದಾರೆ. ದಾಂಪತ್ಯ ಬಂಧನದ ವಿಧಿ ವಿಧಾನಗಳನ್ನು ಶರಣ ತತ್ವದಲ್ಲಿ ಪಾಲಿಸಲು ನವ ಜೋಡಿಗೆ ಸಿಂಧನೂರಿನ ವೀರಭದ್ರಪ್ಪ ಕುರಕುಂದಿ ವಚನ ಪ್ರತಿಜ್ಞೆ ಭೋಧಿಸಿದರು. ಲಿಂಗ ತಾರತಮ್ಯ ನಿವಾರಣೆಗಾಗಿ ವರ ಆಕಾಶನಿಗೆ ವಧು ಸುಷ್ಮಾ ಮಾಂಗಲ್ಯ ಹಾಕಿದರೆ, ವಧು ಸುಷ್ಮಾಗೆ ಆಕಾಶ್ ಷಟಸ್ಥಲ ಮಾಂಗಲ್ಯ ಹಾಕಿದರು. ವರನ ಹಾಗೂ ವಧುವಿನ ಮಾಂಗಲ್ಯ ಸರದಲ್ಲಿ ಷಟಸ್ಥಲ ಹಾಗೂ ಇಷ್ಟ ಲಿಂಗದ ಕುರುಹುಗಳು ಇವೆ. ಬಸವತತ್ವದ ಮದುವೆಗೆ ಯುವ ಜೋಡಿಗಳು ಸಂಪೂರ್ಣ ಒಪ್ಪಿಗೆ ನೀಡಿದ್ದು, ನಾವೂ ಕೂಡ ಬಸವತತ್ವದ ಅಡಿಯಲ್ಲಿ ಜೀವನ ಸಾಗಿಸುತ್ತೇವೆ ಎಂದಿದ್ದಾರೆ.
ರಾಜ್ಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:34 pm, Tue, 14 June 22