ಗದಗ: ಆ ಕ್ಷೇತ್ರದ ಶಾಸಕರ ಲೆಟರ್ ಹೆಡ್ ಯಾರು ಬೇಕಾದ್ರೂ, ಹೇಗೆ ಬೇಕಾದ್ರೂ ಉಪಯೋಗಿಸಿಕೊಳ್ಳಬಹುದಂತೆ. ಸರ್ಕಾರದ ಇಲಾಖೆಗಳಿಗೆ ಶಾಸಕರ ನಕಲಿ ಸಹಿ ಮಾಡಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಅನ್ನೋ ಗಂಭೀರ ಆರೋಪ ಕಾಂಗ್ರೆಸ್ ಸದಸ್ಯರು ಮಾಡಿದ್ದಾರೆ. ಎಸ್.ಎಫ್.ಸಿ ಅನುದಾನದ ಕ್ರಿಯಾ ಯೋಜನೆ ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಬರೆದ ಶಾಸಕರ ಪತ್ರಕ್ಕೆ ನಕಲಿ ಸಹಿ ಮಾಡಲಾಗಿದೆ ಅಂತ ಆರೋಪಿಸಿದ್ದಾರೆ. ಆದ್ರೆ, ಲೆಟರ್ ಹೆಡ್ಗಳಲ್ಲಿ ಶಾಸಕರ ಡಿಫರೆಂಟ್ ಡಿಫರೆಂಟ್ ಸಹಿಗಳು ಆರೋಪಕ್ಕೆ ಪುಷ್ಠಿ ನೀಡ್ತಾಯಿದೆ. ಈ ಬಗ್ಗೆ ಶಾಸಕರು ಐಜಿ ಗಮನಕ್ಕೆ ತಂದಿದ್ದಾರಂತೆ. ಅಷ್ಟಕ್ಕೂ ನಕಲಿ ಸಹಿ ಮಾಡಿದ್ದಾದ್ರೂ ಯಾರೂ ಅನ್ನೋದೇ ನಿಗೂಢವಾಗಿದೆ.
ಗದಗ ಜಿಲ್ಲೆಯ ಮುಂಡರಗಿ ಪುರಸಭೆಯಲ್ಲಿ ಶಾಸಕರ ನಕಲಿ ಸಹಿ ವಿವಾದ ಜಟಾಪಟಿ ಜೋರಾಗಿದೆ. ಕಾಂಗ್ರೆಸ್ ಸದಸ್ಯರು, ಪಟ್ಟಣ ಪಂಚಾಯತ್ ಅಧ್ಯಕ್ಷೆ ವಿರುದ್ಧ ಶಾಸಕರ ನಕಲಿ ಸಹಿ ಆರೋಪ ಪ್ರತ್ಯಾರೋಪ ನಡೆದಿದೆ. ಕಾಂಗ್ರೆಸ್ ಸದಸ್ಯನ ವಿರುದ್ಧ ಪುರಸಭೆ ಅಧ್ಯಕ್ಷೆ ಫುಲ್ ಗರಂ ಆಗಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಲೆಟರ್ ಹೆಡ್ ಗಳು ಕ್ಷೇತ್ರದಲ್ಲಿ ಬಿಕರಿಯಾಗಿವೆ ಅಂತ ಕಾಂಗ್ರೆಸ್ ಸದಸ್ಯರು ತೀವ್ರ ವಾಗ್ದಾಳಿ ಮಾಡಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಶಾಸಕರ ನಕಲಿ ಸಹಿ ಮಾಡಿ ಪುರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ತಾಯಿದ್ದಾರೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಮುಂಡರಗಿ ಪುರಸಭೆಯ 2021-22 ಎಸ್.ಎಫ್.ಸಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಎಸ್ಎಫ್ಸಿ ಅನುದಾನದಲ್ಲಿ ಉಳಿತಾಯವಾದ 3.75 ಕ್ರಿಯಾ ಯೋಜನೆ ತಯಾರಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಶಾಸಕರ ಪತ್ರಕ್ಕೆ ನಕಲಿ ಸಹಿ ಮಾಡಿ ನೀಡಿದ್ದಾರೆ ಅಂತ ಕಾಂಗ್ರೆಸ್ ಸದಸ್ಯ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಅಷ್ಟೇ ಅಲ್ಲ ಶಾಸಕರ ಡಿಫರೆಂಟ್ ಡಿಫರೆಂಟ್ ಸಹಿಯುಳ್ಳ ವಿವಿಧ ಲೆಟರ್ ಹೆಡ್ ಗಳು ಸಮೇತ ಆರೋಪ ಮಾಡಿದ್ದಾರೆ. ಮೇಲ್ನೋಟಕ್ಕೆ ಶಾಸಕರ ಪತ್ರಗಳು ನೋಡಿ ಆರೋಪಕ್ಕೆ ಸಾಕಷ್ಟು ಪುಷ್ಠಿ ಸಿಕ್ಕಿದೆ. ನಮ್ಮ ಶಾಸಕರು ಅಮಾಯಕರು ಹೀಗಾಗಿ ಅಧಿಕಾರಿಗಳು, ಸದಸ್ಯರು ಶಾಸಕರ ನಕಲಿ ಸಹಿ ದುರುಪಯೋಗ ಮಾಡಿಕೊಳ್ತಾಯಿದ್ದಾರೆ ಅಂತ ಕಾಂಗ್ರೆಸ್ ಸದಸ್ಯ ನಾಗರಾಜ್ ಆರೋಪಿಸಿದ್ದಾರೆ. ಶಾಸಕರ ಸಹಿ ಕುರಿತು ತನಿಖೆಯಾಗಬೇಕು ಅಂತ ಕಾಂಗ್ರೆಸ್ ಸದಸ್ಯ ನಾಗರಾಜ್ ಒತ್ತಾಯಿಸಿದ್ದಾರೆ. ಇದನ್ನೂ ಓದಿ: Garbhageete: 4 ತಿಂಗಳ ಗರ್ಭಿಣಿಯರ ಆಹಾರ ಪದ್ಧತಿ ಹೇಗಿರಬೇಕು? ತಜ್ಞರು ಏನಂತಾರೆ?
ಆರೋಪ ತಳ್ಳಿ ಹಾಕಿದ ಶಾಸಕ
ಗದಗ ಜಿಲ್ಲೆಯಲ್ಲಿ ಈಗ ಶಾಸಕ ರಾಮಣ್ಣ ಲಮಾಣಿ ನಕಲಿ ಸಹಿ ಆರೋಪ ವಿಷಯ ತೀವ್ರ ಚರ್ಚೆ ನಡೆದಿದೆ. ಶಾಸಕರ ಒಂದೊಂದು ಲೆಡರ್ ಹೆಡ್ ನಲ್ಲಿ ಸಹಿಗಳ ವ್ಯತ್ಯಾಸ ಕಂಡು ಬರ್ತಾಯಿವೆ. ಪಾಪ ನಮ್ಮ ಶಾಸಕರು ಅಮಾಯಕರು ಕೆಲವರು ದುರುಪಯೋಗ ಮಾಡಿಕೊಳ್ತಾಯಿದ್ದಾರೆ ಅಂತಿದ್ದಾರೆ. ಆದ್ರೆ, ಶಾಸಕರ ನಕಲಿ ಸಹಿ ಬಗ್ಗೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವ್ರನ್ನು ಕೇಳಿದ್ರೆ ನನ್ನ ಸಹಿ ನಕಲಿಯಾಗಿಲ್ಲ. ನಾನೇ ಸಹಿ ಮಾಡಿದ್ದು ಅಂತ ಹೇಳ್ತಾರೆ. ನನ್ನ ಸಹಿ ಮಾಡಲು ನನ್ನ ಮಗ ಲಕ್ಷ್ಮಣ ಸಾಕಷ್ಟು ಪ್ರಯತ್ನ ಮಾಡಿದ್ರೂ ಸಾಧ್ಯವಾಗಿಲ್ಲ ಅಂತ ಶಾಸಕ ರಾಮಣ್ಣ ಲಮಾಣಿ ಅವ್ರೇ ಹೇಳಿದ್ದಾರೆ. ನನ್ನ ಸಹಿ ಬೇರೆಯವರಿಗೆ ಮಾಡಲು ಆಗೋದಿಲ್ಲ. ಈ ಬಗ್ಗೆ ಬೆಳಗಾವಿ ಐಜಿ ಅವರ ಗಮನಕ್ಕೂ ತರಲಾಗಿದೆ ಅಂತ ಹೇಳಿ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಇನ್ನೂ ಕಾಂಗ್ರೆಸ್ ಸದಸ್ಯರು ಮುಂಡರಗಿ ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಹಾಗೂ ಅಧ್ಯಕ್ಷೆ ಪತಿ ಅಂದಪ್ಪ ವಿರುದ್ಧ ನಕಲಿ ಸಹಿ ಆರೋಪ ಮಾಡಿದ್ದಾರೆ. ಇದು ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಕಾಂಗ್ರೆಸ್ ಸದಸ್ಯ ನಾಗರಾಜ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗರಾಜ್ ಆರೋಪ ಸತ್ಯಕ್ಕೆ ದೂರವಾಗಿದೆ. ಅವರೇ ನಕಲಿ ಸಹಿ ಮಾಡಿರಬಹುದು ಈಗಾಗಲೇ ಶಾಸಕರು ನನ್ನ ಸಹಿ ಅಂತ ಹೇಳಿದ್ದಾರೆ. ಕಾಂಗ್ರೆಸ್ ಸದಸ್ಯ ನಾಗರಾಜ್ ಬೇರೆಯವ್ರ ಮೆನೆಯ ಉತಾರದಲ್ಲಿ ತನ್ನ ಹೆಸರು ಸೇರಿಸಲು ಪುರಸಭೆ ಅಧಿಕಾರಿಗಳಿಗೆ ಪತ್ರ ಬರೆದಿದ್ರು. ಆದ್ರೆ ಬೇರೆಯವ್ರ ಆಸ್ತಿಯಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಹೆಸರು ಸೇರಿಸಲು ಹೇಗೆ ಸಾಧ್ಯ. ಬಾಡಿಗೆ ನೀಡಿದವ್ರ ಆಸ್ತಿ ಕಬಳಿಸಲು ಯತ್ನ ಮಾಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ವಿನಾಕಾರಣ ಕಾಂಗ್ರೆಸ್ ಸದಸ್ಯ ನಾಗರಾಜ್ ಸುಳ್ಳು ಆರೋಪ ಮಾಡ್ತಾಯಿದ್ದಾರೆ ಅಂತ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಆರೋಪ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ವಸತಿ ನಿಗಮದ ನೂಡಲ್ ಅಧಿಕಾರಿ ಆತ್ಮಹತ್ಯೆಗೆ ಟ್ವಿಸ್ಟ್; ಆತ್ಮಹತ್ಯೆಗೆ ಅಸಲಿ ಕಾರಣ ಏನು ಗೊತ್ತಾ?
ಶಾಸಕರ ಅಮಾಯಕತೆ ದುರುಪಯೋಗ ಪಡೆದುಕೊಂಡು ಯಾರಾದ್ರೂ ನಕಲಿ ಸಹಿ ಮಾಡಿದ್ದಾರಾ ಅನ್ನೋ ಪ್ರಶ್ನೆ ಕಾಡ್ತಾಯಿದೆ. ಆದ್ರೆ, ಶಾಸಕರ ಬೇರೆ ಬೇರೆ ಸಹಿಗಳು ಸಾಕಷ್ಟು ಗೊಂದಲಕ್ಕೀಡು ಮಾಡಿದೆ. ಶಾಸಕರು ತಮ್ಮ ಸಹಿ ಜಾಗೃತಿ ವಹಿಸಬೇಕಿದೆ. ಇಲ್ಲವಾದ್ರೆ, ಅವರ ಸಹಿ ದುರ್ಬಳಕೆ ಆಗೋದರಲ್ಲಿ ಯಾವುದೇ ಸಂದೇಹವಿಲ್ಲ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ