ಗದಗ ಜಿಲ್ಲೆಯಲ್ಲಿ ಹೆಚ್ಚಾದ ಡಕೋಟಾ ಬಸ್​ಗಳ ಹಾವಳಿ: ಕೈಕಟ್ಟಿ ಕುಳಿತ ಸಾರಿಗೆ ಇಲಾಖೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 23, 2022 | 3:36 PM

ಗದಗ ಜಿಲ್ಲೆಯಲ್ಲಿ ಡಕೋಟಾ ಬಸ್​ಗಳ ಹಾವಳಿ ಹೆಚ್ಚಾಗಿದೆ. ‌ಸಾರಿಗೆ ಸಂಸ್ಥೆಯ ಬಸ್​ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ, 8ಲಕ್ಷ ಕಿಲೋಮೀಟರ್ ಓಡಿದರೆ ಗುಜರಿಗೆ ಸೇರಬೇಕು. ಆದರೆ ಇಲ್ಲಿ ಮಾತ್ರ 8 ಲಕ್ಷ ದಾಟಿ 15 ಲಕ್ಷ ಓಡಿದ ನೂರಾರು ಬಸ್​ಗಳು ಓಡಾಡುತ್ತಿವೆ.

ಗದಗ ಜಿಲ್ಲೆಯಲ್ಲಿ ಹೆಚ್ಚಾದ ಡಕೋಟಾ ಬಸ್​ಗಳ ಹಾವಳಿ: ಕೈಕಟ್ಟಿ ಕುಳಿತ ಸಾರಿಗೆ ಇಲಾಖೆ
ಗದಗ
Follow us on

ಗದಗ: ಜಿಲ್ಲೆಯಲ್ಲಿ ಡಕೋಟಾ ಬಸ್​ಗಳ ಹಾವಳಿ ಜೋರಾಗಿದೆ. ಗದಗ(Gadag) ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಬಸ್​ಗಳು ಉರುಳಿ ಬೀಳುತ್ತಿವೆ. ವಾರದ ಹಿಂದೆ ಹುಯಿಲಗೋಳ ಗ್ರಾಮದ ಬಳಿ ಪಾಟಾ ಕಟ್ ಆಗಿ ಬಸ್​ ಕಂದಕಕ್ಕೆ ಉರುಳಿ 30ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡು ಇವತ್ತಿಗೂ ಆಸ್ಪತ್ರೆಯಲ್ಲಿ ಒದ್ದಾಡುತ್ತಿದ್ದಾರೆ. ಇದಾದ ಮಾರನೇ ದಿನ (.20) ರಂದು ಶಿರಹಟ್ಟಿ ತಾಲೂಕಿನ ಹೊಸೂರು ಗ್ರಾಮದ ಬಳಿ ಎಕ್ಸಲ್ ಕಟ್ ಆಗಿ ರಸ್ತೆ ಪಕ್ಕದ ತಗ್ಗಿಗೆ ವಾಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಹೀಗಾಗಿ ಸಾರಿಗೆ ಸಂಸ್ಥೆ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಬಡ ಜನರು ಹಾಗೂ ಮದ್ಯಮ ವರ್ಗದ ಜನರು ಹೆಚ್ಚಾಗಿ ಸಂಚಾರ ಮಾಡುವುದು ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ. ಆದರೆ ಸಾರಿಗೆ ಸಂಸ್ಥೆ ಬಡ ಹಾಗೂ ಮದ್ಯಮ ವರ್ಗದ ಜನರ ಜೀವಕ್ಕೆ ಬೆಲೆ ಇಲ್ಲದ ಹಾಗೇ, ಡಕೋಟಾ ಬಸ್​ಗಳನ್ನು ರಸ್ತೆಗೆ ಇಳಿಸುತ್ತಿದೆ. ಸಾರಿಗೆ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಗದಗ ಜಿಲ್ಲೆಯಲ್ಲಿ ಒಟ್ಟು 533 ಬಸ್​ಗಳು ಇವೆ. ಇವುಗಳಲ್ಲಿ ಬರೋಬ್ಬರಿ 304 ಬಸ್​ಗಳು 10-15 ಲಕ್ಷ ಕಿಲೋಮೀಟರ್ ಓಡಿವೆ. ಆದರೆ ಈ ಬಸ್​ಗಳು ನಾವು ರೀ ಕಂಡಿಷನ್ ಮಾಡಿ ಓಡಿಸುತ್ತಿದ್ದೇವೆ. ಯಾವುದೇ ಸಮಸ್ಯೆ ಇಲ್ಲ. ಆದರೂ ಹದಗೆಟ್ಟ ರಸ್ತೆಗಳಿಂದ ಎಕ್ಸಲ್, ಪಾಟಾ ಕಟ್ ಆಗಿ ಅಪಘಾತ ಆಗುತ್ತಾ ಇದೆ ಎಂದು ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಹೇಳಿದ್ದಾರೆ. ಜೊತೆಗೆ ಹೊಸ ಬಸ್​ಗಳ ಅವಶ್ಯಕತೆ ಇದ್ದು, ಈಗಾಗಲೇ ಹೊಸ ಬಸ್​ಗಳ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯು ಅವ್ಯವಸ್ಥೆಯ ಆಗರವಾಗಿದೆ. ಕಿಟಕಿಗೆ ಗ್ಲಾಸ್ ಇಲ್ಲ. ಕೆಲ ಬಸ್ ಗಳಿಗೆ ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಬಸ್ ನಿಲ್ದಾಣದಲ್ಲಿ ಬಸ್ ಪಾರ್ಕ್ ಮಾಡಿದರೆ ಟಾಯರ್​ಗಳಿಗೆ ಕಲ್ಲು ಇಡಬೇಕಾದ ಪರಿಸ್ಥಿತಿ ಇದೆ. 300ಕ್ಕೂ ಅಧಿಕ ಬಸ್​ಗಳು ಮಿತಿಮೀರಿ 10ಲಕ್ಷಕ್ಕೂ ಅಧಿಕ ಓಡಿದ್ದಾವೆ. ಹೀಗಾಗಿ ಸಾಕಷ್ಟು ಬಸ್​ಗಳ ಕಂಡಿಷನ್​ಗಳು ಸರಿಯಿಲ್ಲವಂತೆ. ಇಂತಹ ಕಂಡಿಷನ್ ಇಲ್ಲದ ಬಸ್​ಗಳು ರಸ್ತೆಗೆ ಇಳಿಸಲು ನಿರಾಕರಣೆ ಮಾಡುವಂತಿಲ್ಲ. ಏನಾದರೂ ಅವಘಡ, ಸಮಸ್ಯೆ ಆದರೇ ನಮ್ಮನ್ನೇ ಹೊಣೆ ಮಾಡುತ್ತಾರೆ ಎಂದು ಚಾಲಕರು ಆರೋಪ ಮಾಡಿದ್ದಾರೆ. ಆದರೆ ಅಧಿಕೃತವಾಗಿ ಮಾತನಾಡಲು ಚಾಲಕರು ಮುಂದೆ ಬರುತ್ತಿಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಪದೇ ಪದೇ ಡಕೋಟಾ ಬಸ್​ಗಳು ಅಪಘಾತಕ್ಕೀಡಾಗಿ ಪ್ರಯಾಣಿಕರು ಆಸ್ಪತ್ರೆಗೆ ಸೇರುತ್ತಿದ್ದಾರೆ.

ಇದನ್ನೂ ಓದಿ:ಗದಗ: ನಕಲಿ ಠರಾವು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಲೂಟಿಗೆ ಪ್ಲಾನ್​; ಆರೋಪ ಹೊತ್ತ ನಗರಸಭೆ ಪೌರಾಯುಕ್ತರು, ಅಧ್ಯಕ್ಷರ ಮೇಲೆ ತನಿಖೆ

ಸರ್ಕಾರ ಕಲ್ಯಾಣ ಕರ್ನಾಟಕಕ್ಕೆ 600 ಹೊಸ ಬಸ್ ಕೊಟ್ಟಿದೆ. ಆದರೆ ಕಿತ್ತೂರ ಕರ್ನಾಟಕಕ್ಕೆ ಅಂದರೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೊಸ ಬಸ್ ನೀಡದೇ ಸರ್ಕಾರ ಅನ್ಯಾಯ ಮಾಡಿದೆ ಅನ್ನುವ ಆರೋಪ ಕೇಳಿಬರುತ್ತಿದೆ. ಇನ್ನು ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ, ನರಗುಂದ ಹಾಗೂ ರೋಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿವೆ. ಅಂತಹ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದೇ ಹರಸಾಹಸವಾಗಿದೆ. ಅಂತಹ ರಸ್ತೆಯಲ್ಲಿ ಡಕೋಟಾ ಬಸ್​ಗಳು ಸಂಚಾರ ಮಾಡುತ್ತಿವೆ. ಹೀಗಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತೇವೆ. ಇನ್ನಾದರೂ ಸಾರಿಗೆ ಸಚಿವರು ಗದಗ ಜಿಲ್ಲೆಗೆ ಹೊಸ ಬಸ್​ಗಳನ್ನು ನೀಡುವ ಮೂಲಕ ಪ್ರಯಾಣಿಕರ ಸುರಕ್ಷತೆ ಪ್ರಯಾಣಕ್ಕೆ ಅನಕೂಲ ಮಾಡಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ