ಗದಗ: ಕ್ಯಾನ್ಸರ್ ರೋಗಿಗೆ ಕೂದಲು ದಾನ ಮಾಡಿ ಹೊಸ ರೀತಿಯಲ್ಲಿ ಜನ್ಮದಿನ ಆಚರಿಸಿಕೊಂಡ ಯುವತಿ
ಹುಟ್ಟಿದ ದಿನದ ಆಚರಣೆ ಈಗಿನ ಯುವ ಪೀಳಿಗೆಗೆ ಭಾರಿ ಟ್ರೆಂಡ್ ಆಗಿದೆ. ಕೇಕ್ ಕಟ್ ಮಾಡುವ ಮೂಲಕ ಹುಟ್ಟಿದ ದಿನವನ್ನು ಆಚರಣೆ ಮಾಡುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ತನ್ನ ಕೂದಲು ಕತ್ತರಿಸಿ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ವಿದ್ಯಾರ್ಥಿನಿ ವಿನೂತನವಾಗಿ ಹುಟ್ಟಿದ ದಿನವನ್ನು ಆಚರಿಸಿಕೊಂಡಿದ್ದಾಳೆ.
ಗದಗ: ನಗರದ ಪೂರ್ಣಿಮಾ ಹಾಗೂ ನಾಗರಾಜ್ ಬೆಳವಡಿ ದಂಪತಿಗಳ ಪುತ್ರಿ ಅಕ್ಷತಾ ಬೆಳವಡಿ ತನ್ನ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಣೆ ಮಾಡಿಕೊಂಡಿದ್ದಾಳೆ. ಮೂರು ವರ್ಷದಿಂದ ಉದ್ದವಾಗಿ ಬೆಳೆಸಿದ್ದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಮಾದರಿಯಾಗಿದ್ದಾಳೆ. ಜನ್ಮದಿನದಂದು ಯಾವುದೇ ಆಡಂಬರ, ಕೇಕ್ ಕಟ್ ಮಾಡುವ ಜಂಜಾಟ ಇಲ್ಲದೇ ಎಲ್ಲರೂ ಮೆಚ್ಚುವ ರೀತಿಯಲ್ಲಿ ವಿನೂತನವಾಗಿ ಹುಟ್ಟಿದ ದಿನವನ್ನು ಆಚರಿಸಿಕೊಂಡಿದ್ದಾಳೆ. ಕೇಕ್ ಕಟ್ ಮಾಡುವ ಬದಲು ಕೂದಲು ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ್ದಾಳೆ. ಕೂದಲು ಇಲ್ಲದೇ ಆತ್ಮ ಸ್ಥೈರ್ಯ ಕಳೆದುಕೊಂಡು ಚಿಂತೆಗೀಡಾದ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಆತ್ಮ ಸ್ಥೈರ್ಯ ಮೂಡಿಸುವ ಕೆಲಸ ಮಾಡಿದ್ದಾಳೆ ವಿದ್ಯಾರ್ಥಿನಿ ಅಕ್ಷತಾ.
ಅಕ್ಷತಾ ಬೆಳವಡಿ ಮಾತನಾಡಿ ಕಳೆದ ಮೂರು ವರ್ಷಗಳಿಂದ ಕೂದಲು ದಾನ ಮಾಡಬೇಕೆಂದು ಅಂದುಕೊಂಡಿದ್ದೆ, ಯೂಟ್ಯೂಬ್ನಲ್ಲಿ ಕೂದಲು ಹೇಗೆ ದಾನ ಮಾಡಬಹುದು ಎನ್ನುವುದನ್ನು ಹುಡುಕುತ್ತಿದ್ದೆ. ನನ್ನ ಕೂದಲು ಇಷ್ಟೊಂದು ಉದ್ದವಾಗಿವೆ. ನಾನು ಯಾಕೆ ದಾನ ಮಾಡಬಾರದು ಅಂತ ವಿಚಾರ ಮಾಡಿದ್ದು. ಅದರ ಬಗ್ಗೆಯೂ ಯೂಟ್ಯೂಬ್ ನಲ್ಲಿ ಸಾಕಷ್ಟು ಮಾಹಿತಿ ಪಡೆದುಕೊಂಡೆ. ಆದರೆ ಗದಗ ಜಿಲ್ಲೆಯ ಇತಿಹಾಸದಲ್ಲಿ ಯಾವುದೇ ಕೂದಲು ದಾನ ಮಾಡುವ ಅಥವಾ ಪಡೆಯುವ ಘಟನೆ ಆಗಿಲ್ಲ. ಹೀಗಾಗಿ ಈ ವಿಚಾರ ತಂದೆ, ತಾಯಿ ಬಳಿ ಹೇಳಿಕೊಂಡಿದ್ದಾಳೆ. ಮಗಳ ಈ ಮಾತು ಕೇಳಿ ಅಪ್ಪ–ಅಮ್ಮ ಕಂಗಾಲಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಮಗಳ ವಿಚಾರವನ್ನು ತಂದೆ,ತಾಯಿ ಒಪ್ಪಿಕೊಂಡರು ಎಂದಿದ್ದಾರೆ.
ಗದಗ ನಗರದ ರೆಡ್ ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ಸಾಮುದ್ರಿ ಅವರನ್ನು ಸಂಪರ್ಕ ಮಾಡಿದ್ದಾರೆ. ಅವರು ಕೂಡ ವಿದ್ಯಾರ್ಥಿನಿ ನಿರ್ಧಾರದ ಬಗ್ಗೆ ಆಶ್ಚರ್ಯಗೊಂಡಿದ್ದಾರೆ. ಆ ಬಳಿಕ ತಮ್ಮ ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚೆ ಮಾಡಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರ. ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಆಗುತ್ತದೆ, ಎಂದು ಸಂಸ್ಥೆ ಅಧ್ಯಕ್ಷರು ಕ್ಯಾನ್ಸರ್ ವೈದ್ಯರನ್ನು ಸಂಪರ್ಕ ಮಾಡಿದ್ದಾರೆ. ಆ ವೈದ್ಯರು ಕೂಡ ವಿದ್ಯಾರ್ಥಿನಿ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಅಗತ್ಯವಿದೆ, ವಿದ್ಯಾರ್ಥಿನಿ ಕೂದಲು ಪಡೆಯುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ವಿದ್ಯಾರ್ಥಿನಿ ಕೂದಲು ಮೊಟ್ಟ ಮೊದಲ ಬಾರಿಗೆ ದಾನವಾಗಿ ಪಡೆದಿದ್ದೇವೆ ಎನ್ನುತ್ತಾರೆ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷರು.
ಇದನ್ನೂ ಓದಿ:ಹೆಚ್ಚಿನ ಬೆಲೆ ವಸೂಲಿ: ಗದಗದಲ್ಲಿ ಮದ್ಯ ಮಾರಾಟಗಾರರ ಅಟ್ಟಹಾಸಕ್ಕೆ ಬೇಸತ್ತ ಮದ್ಯ ಪ್ರಿಯರು
ಕೂದಲು ಇಲ್ಲದೆ ಕ್ಯಾನ್ಸರ್ ರೋಗಿಗಳು ಆತ್ಮ ಸ್ಥೈರ್ಯ ಕಳೆದುಕೊಂಡಿರುತ್ತಾರೆ, ಅಂತವರಿಗೆ ಕೂದಲು ದಾನ ಮಾಡುವ ಮೂಲಕ ಅವರಿಗೆ ಆಸರೆಯಾಗಿದ್ದಾಳೆ. ಸಧ್ಯ ಗದಗ ಜಿಲ್ಲೆಯಲ್ಲಿ ಕೂದಲು ದಾನ ಮಾಡಿದ ವಿದ್ಯಾರ್ಥಿನಿ ಅಕ್ಷತಾ ಕುರಿತು ಎಲ್ಲಾ ಕಡೆಗಳಲ್ಲಿ ಚರ್ಚೆ ನಡೆಸಿದೆ. ಈಗಿನ ಹೊಸ ಪೀಳಿಗೆಗೆ ವಿದ್ಯಾರ್ಥಿನಿ ಹೊಸ ಸಂದೇಶ ರವಾನಿಸಿದ್ದಾಳೆ.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ