ಹಣ ಇದ್ದರೂ ಐದು ತಿಂಗಳಿನಿಂದ ವೇತನ ನೀಡದ ಗದಗ ಜಿಲ್ಲೆಯ ಕಳಸಾಪೂರ ಗ್ರಾಮ ಪಂಚಾಯಿತಿ

ಪತಿ ಅನಾರೋಗ್ಯದಿಂದ ಬಳಲುತ್ತಿದ್ದರು ವೇತನ ನೀಡುತ್ತಿಲ್ಲ.ಪತಿಯ ಸಂಬಳಕ್ಕಾಗಿ ಪತ್ನಿ ಪಂಚಾಯತಿ ಮುಂದೆ ಕಣ್ಣೀರ ಹೋರಾಟ ನಡೆಸಿದ್ದಾಳೆ.12ಕುಟುಂಬಗಳು ಜೀವನ ನಿರ್ವಹಣೆಗಾಗಿ ಗೋಳಾಡುತ್ತಿದ್ದಾವೆ.ಆದರೂ ಕಟುಕ ಮನಸ್ಸಿನ ಅಧಿಕಾರಿಗಳು ವೇತನ ನೀಡುತ್ತಿಲ್ಲ. ಜಿಲ್ಲಾ ಪಂಚಾಯತ್​ ಆಡಳಿತದ ಅಮಾನವೀಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹಣ ಇದ್ದರೂ ಐದು ತಿಂಗಳಿನಿಂದ ವೇತನ ನೀಡದ ಗದಗ ಜಿಲ್ಲೆಯ ಕಳಸಾಪೂರ ಗ್ರಾಮ ಪಂಚಾಯಿತಿ
ಧರಣಿ ಕುಳಿತ ಸಿಬ್ಬಂದಿಗಳು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 19, 2022 | 1:47 PM

ಗದಗ: ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ವಾಟರ್ ಮ್ಯಾನ್, ಬಿಲ್ ಕಲೆಕ್ಟರ್, ಕಸ ಸಂಗ್ರಹಣೆ ಮಾಡುವರು, ಬೀದಿ ದೀಪ ನಿರ್ವಹಣೆ ಸಿಬ್ಬಂದಿ ಸೇರಿದಂತೆ 12 ಸಿಬ್ಬಂದಿಗಳಿಗೆ ಕಳೆದ ಐದು ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಪತಿಯು ನರಳಾಡುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪತ್ನಿ ಕಣ್ಣೀರು ಹಾಕುತ್ತಿದ್ದಾಳೆ. ಪಂಚಾಯತಿ ಎದುರು 12 ಸಿಬ್ಬಂದಿಗಳು ಕುಟುಂಬ ಸಮೇತ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಯಾವ ಅಧಿಕಾರಿಗಳು ಕೂಡ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾ ಪಂಚಾಯತ್ ಮುಖ್ಯಸ್ಥರ ಗಮನಕ್ಕೆ ತಂದರೂ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಈ ಕುರಿತು ಗದಗ ತಾಲೂಕಿನ ಕಳಸಾಪೂರ ಗ್ರಾಮ ಪಂಚಾಯತಿ ಪಿಡಿಓ, ಪಂಚಾಯತ್ ಅಧ್ಯಕ್ಷರಿಗೆ ನಿತ್ಯವೂ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ. ಪಂಚಾಯತ್​ನಲ್ಲಿ ಸಾಕಷ್ಟು ಹಣ ಇದ್ದರೂ ಕೂಡ ವೇತನ ನೀಡುತ್ತಿಲ್ಲ ಎಂದು ಸಿಬ್ಬಂದಿ ಆರೋಪಿಸಿದ್ದಾರೆ. ನಿತ್ಯವೂ ಜೀವನ ಮಾಡುವುದು ಕಷ್ಟವಾಗಿದೆ. ಜಿಲ್ಲಾ ಪಂಚಾಯತ್ ಮೇಲಾಧಿಕಾರಿಗಳ ಗಮನಕ್ಕೆ ತಂದು ಬೇಡಿಕೊಂಡರೂ ಯಾವುದೆ ಪ್ರಯೋಜನವಾಗಿಲ್ಲ, ಅದರಲ್ಲೂ ವಾಟರ್ ಮ್ಯಾನ್ ಅಬ್ದುಲ್ ಸಾಬ್ ಪಿಂಜಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆ ದಾಖಲು ಮಾಡಬೇಕು ಆದರೆ ವೇತನ ಆಗಿಲ್ಲ. ಹೀಗಾಗಿ ರೋಸಿಹೋದ ಕುಟುಂಬಸ್ಥರು ಪಂಚಾಯತ್ ಮುಂದೆ ಧರಣಿ ಮಾಡಿ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಈ ಬಡ ಸಿಬ್ಬಂದಿಗಳ ಸಂಕಷ್ಟಕ್ಕೆ ಯಾವೊಬ್ಬ ಅಧಿಕಾರಿಯೂ ನೆರವಾಗುತ್ತಿಲ್ಲ. ಐದು ತಿಂಗಳವರೆಗೆ ಸಂಬಳ ನೀಡಿಲ್ಲ ನಾವು ಜೀವನ ಮಾಡುವುದಾದರೂ ಹೇಗೆ ಎಂದು ನೊಂದವರು ಅಳಲು ತೋಡಿಕೊಳ್ಳುತ್ತಿದ್ದಾರೆ. ದೊಡ್ಡ ವೇತನ ಪಡೆಯುವ ಅಧಿಕಾರಿಗಳು ಎಸಿ ರೂಮ್​ನಿಂದ ಹೊರಬಂದು ಬಡ ಸಿಬ್ಬಂದಿಗಳ ಸಂಕಷ್ಟ ಅರಿಯಬೇಕು ಎಂದು ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಪತಿಯ ಸಂಬಳಕ್ಕಾಗಿ ಪತ್ನಿ ಕಣ್ಣೀರು ಹಾಕುತಿದ್ದರೂ ಕಲ್ಲು ಹೃದಯದ ಅಧಿಕಾರಿಗಳ ಹೃದಯ ಮಾತ್ರ ಕರಗುತ್ತಿಲ್ಲ.

ಸಿಬ್ಬಂದಿಗಳ ವೇತನ ವಿಳಂಬಕ್ಕೆ ಅಧ್ಯಕ್ಷೆ ಕಾರಣ ಎಂದು ಪಿಡಿಓ ಆರೋಪಿಸಿದ್ದಾರೆ. ಅಧ್ಯಕ್ಷರು ಲಾಗಿನ್ ಆಗಿ ಅಪ್ರೂವಲ್ ನೀಡಬೇಕು. ಆಗ ಮಾತ್ರ ವೇತನ ಮಾಡಲು ಆಗುತ್ತದೆ ಎಂದು ಪಿಡಿಓ ಹೇಳುತ್ತಿದ್ದಾರೆ. ಪಿಡಿಓ ಈ ಮಾತು ಹೇಳುತ್ತಿದ್ದಂತೆ ಗ್ರಾಮ ಪಂಚಾಯತಿ ಸದಸ್ಯರು ಪಿಡಿಓ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯನ್ನು ಅಧಿಕಾರಿಗಳು ಇತ್ಯರ್ಥ ಮಾಡಬೇಕು. ಅದನ್ನು ಬಿಟ್ಟು ಅಧ್ಯಕ್ಷರ ಮೇಲೆ ಹಾಕುವುದು ಸರಿ ಅಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ. ಒಟ್ಟಾರೆಯಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಗುದ್ದಾಟದಲ್ಲಿ ಈ ಬಡ ಸಿಬ್ಬಂದಿಗಳು ವೇತನ ಇಲ್ಲದೆ ಒದ್ದಾಡುತ್ತಿದ್ದಾರೆ. ಇನ್ನಾದರೂ ಜಿಲ್ಲಾ ಪಂಚಾಯತ್ ಸಿಇಓ ಬಡ ಸಿಬ್ಬಂಧಿಗಳ ವೇತನ ಸಮಸ್ಯೆಗೆ ಮುಕ್ತಿ ನೀಡುವ ಮೂಲಕ ಮಾನವೀಯತೆ ತೋರಬೇಕಾಗಿದೆ.

ವರದಿ:ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ