ಗದಗ ಜಿಲ್ಲೆಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ನಲ್ಲಿಯಲ್ಲಿ ಹನಿ ನೀರು ಬರುತ್ತಿಲ್ಲವೆಂಬ ಜನಾಕ್ರೋಶ
ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಜಾರಿ ಮಾಡಿದ ಕುಡಿಯುವ ನೀರಿನ ಯೋಜನೆ ಗದಗ ಜಿಲ್ಲೆಯ ಕೆಲವೊಂದು ಹಳ್ಳಿ ಜನರ ಜೀವ ಹಿಂಡುತ್ತಿದೆ. ಗುತ್ತಿಗೆದಾರರು ಮಾಡಿದ ಯೆಡವಟ್ಟಿನಿಂದಾಗಿ ಇಡೀ ಯೋಜನೆ ಹಳ್ಳ ಹಿಡಿದಿದೆ ಎಂದು ಆರೋಪಿಸಲಾಗುತ್ತಿದೆ.
ಗದಗ: ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಜಾರಿ ಮಾಡಿದ ಕುಡಿಯುವ ನೀರಿನ ಯೋಜನೆ ಗದಗ ಜಿಲ್ಲೆಯ ಕೆಲವೊಂದು ಹಳ್ಳಿ ಜನರ ಜೀವ ಹಿಂಡುತ್ತಿದೆ. ಗುತ್ತಿಗೆದಾರರು ಮಾಡಿದ ಯೆಡವಟ್ಟಿನಿಂದಾಗಿ ಇಡೀ ಯೋಜನೆ ಹಳ್ಳ ಹಿಡಿದಿದೆ ಎಂದು ಮಹಿಳೆಯರು ಆರೋಪಿಸುತ್ತಿದ್ದಾರೆ. ಅಧಿಕಾರಿಗಳು ನೀಡಿದ ಗುರಿಯನ್ನು ಪೂರ್ಣ ಮಾಡುವ ಉದ್ದೇಶಕ್ಕೆ ಗುತ್ತಿಗೆದಾರರು ಇಡೀ ಯೋಜನೆಯ ಉದ್ದೇಶವನ್ನು ಮಣ್ಣು ಪಾಲು ಮಾಡಿದ್ದಾರೆ. ಆ ಕುಡಿಯುವ ನೀರಿನ ಯೋಜನೆಗೆ ಕೋಟ್ಯಾಂತರ ರೂಪಾಯಿ ವೆಚ್ಚವಾದರೂ ಪೈಪ್ನಲ್ಲಿ ಹನಿ ನೀರು ಬರುತ್ತಿಲ್ಲ. ಗ್ರಾಮೀಣ ಭಾಗದ ಜನರು ಮಾತ್ರ ಕೆರೆಯ ನೀರು ಕುಡಿಯುವುದು ಮಾತ್ರ ತಪ್ಪುತ್ತಿಲ್ಲ. ಕೊಡ ಹಿಡಿದು ಕೆರೆಗೆ ನೀರು ತೆಗೆದುಕೊಂಡು ಬರುವ ಸ್ಥಿತಿ ಇನ್ನೂ ಮುಂದುವರಿದಿದೆ. ಜಲ ಜೀವನ್ ಮಿಷನ್ (Jal Jeevan Mission) ಯೋಜನೆ ಹಳ್ಳ ಹಿಡಿದರೂ, ಜನ್ರಪ್ರತಿನಿಧಿಗಳು, ಅಧಿಕಾರಿಗಳು ಮೌನವಾಗಿದ್ದು, ಇಡೀ ಜಿಲ್ಲೆಯಲ್ಲಿ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಪ್ರತಿ ಗ್ರಾಮಗಳಿಗೆ ಮನೆ ಮನೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ ಜಲ ಜೀವನ ಮಷಿನ್ ಯೋಜನೆ ಜಾರಿ ಮಾಡಿದೆ. ಅದಕ್ಕೆ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದೆ. ಈ ಯೋಜನೆ ಕಾಮಗಾರಿ ಗದಗ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ, ಕಾಮಗಾರಿ ಮುಗಿದು ವರ್ಷ, ಎರಡು ವರ್ಷಗಳು ಕಳೆದರೂ ನಲ್ಲಿಯಲ್ಲಿ ಮಾತ್ರ ಇನ್ನೂ ಹನಿ ನೀರು ಬರುತ್ತಿಲ್ಲ.
ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಯೋಜನೆಯ ಕಾಮಗಾರಿ ಮುಗಿದು ಬರೊಬ್ಬರಿ ಎರಡು ವರ್ಷ ಕಳೆದಿವೆ. ಆದರೆ ನಲ್ಲಿಯಲ್ಲಿ ನೀರು ಬರುವ ಮುನ್ನವೇ ಪೈಪ್ಗಳು ತುಕ್ಕು ಹಿಡಿದು ಯೋಜನೆ ಹಳ್ಳ ಹಿಡಿದು ಹೋಗಿವೆ. ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆ ಇದಾಗಿದೆ. ಅಷ್ಟೇ ಅಲ್ಲ ಪೈಪ್ ಹಾಕಲು ಇಡೀ ಗ್ರಾಮದಲ್ಲಿ ರಸ್ತೆ ಅಗೇದು ಹಾಳು ಮಾಡಿದ್ದಾರೆ. ಒಂದು ಕಡೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಲಾಗಿದ್ದು, ಇನ್ನೊಂದೆಡೆ ಅಗೆದ ರಸ್ತೆಗಳನ್ನು ರಿಪೇರಿ ಮಾಡದೆ ಹೋಗಿದ್ದಾರೆ ಅಂತ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿದ್ದರು ಅಭಿವೃದ್ದಿ ಕಾಣದ ಸೇತುವೆ ಕಾಮಗಾರಿಗಳು
ನೀರು ಇಲ್ಲದೆ ಗಂಟಲು ಒಣಗಿಸುತ್ತಿರುವ ಜನರು, ಇದ್ದ ಒಂದು ಒಳ್ಳೆಯ ರಸ್ತೆಗಳು ಹಾಳಾಗಿ ನಿತ್ಯವೂ ಸಂಚರಿಸಲು ಪರದಾಡುತ್ತಿದ್ದಾರೆ. ಮನೆ ಮುಂದೆ ನಲ್ಲಿಗಳು ಇದ್ದರೂ ನೀರು ತರಲು ಕೆರೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸಚಿವ ಸಿ.ಸಿ ಪಾಟೀಲ್ ಕ್ಷೇತ್ರ ಹುಯಿಲಗೋಳ ಗ್ರಾಮದಲ್ಲಿ ಮಹಿಳೆಯರು ಅಧಿಕಾರಿಗಳು, ಜನಪ್ರತನಿಧಿಗಳ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಸಮಸ್ಯೆ ಬಗ್ಗೆ ಕ್ಷೇತ್ರದ ಶಾಸಕರ ಗಮನಕ್ಕೆ ತಂದರೂ ಅವರು ಕ್ಯಾರೇ ಎಂದಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕುಡಿಯುವ ನೀರಿಗಾಗಿ ರಸ್ತೆಗಳನ್ನು ಅಗೆದು ಅರೆಬರೆ ಕಾಮಗಾರಿ ಮಾಡಿ ಮಣ್ಣು ಮುಚ್ಚಿ ಹೋಗಿದ್ದಾರೆ. ಎರಡು ವರ್ಷ ಕಳೆದರೂ ಒಂದು ಹನಿ ನೀರು ಬರುತ್ತಿಲ್ಲ. ಹೀಗಾಗಿ ಕುಡಿಯುವ ನೀರಿಗಾಗಿ ಮತ್ತೆ ಕೆರೆಯನ್ನೇ ಅವಲಂಬಿಸಿದ್ದೇವೆ. ಇಷ್ಟೆಲ್ಲಾ ಸಮಸ್ಯೆ ಮಾಡಿಟ್ಟು ಗುತ್ತಿಗೆದಾರರು ಹೋಗಿದ್ದಾರೆ ಎಂದು ಸ್ಥಳೀಯರಾದ ರೇಣ್ಣವ್ವಾ ಆರೋಪಿಸಿದ್ದಾರೆ.
2021 ಜನವರಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಅದೇ ವರ್ಷದಲ್ಲಿ ಪೈಪ್ಗಳನ್ನು ಅಳವಡಿಸಿದ್ದರು. ಮೂರು ಫೀಟ್ ಅಡಿಯಲ್ಲಿರಬೇಕಾದ ಪೈಪ್ಗಳನ್ನು ಒಂದು ಫೀಟ್ ಅಡಿಗೆ ಹಾಕಿದ್ದಾರೆ. ಇದರಿಂದಾಗಿ ಪೈಪ್ಗಳು ಒಡೆದು ಹೋಗುತ್ತಿವೆ. ಒಂದಷ್ಟು ಮನೆಗಳಿಗೆ ನಲ್ಲಿ ಸಂಪರ್ಕವನ್ನೂ ಕೊಟ್ಟಿಲ್ಲ. ಕೆಲವೊಂದು ಕಡೆಗಳಲ್ಲಿ ನಾವೇ ಸ್ವಂತ ದುಡ್ಡಿನಲ್ಲಿ ಕೆಲಸಗಳನ್ನು ಮಾಡಿದ್ದೇವೆ. ಅದರ ಹಣವನ್ನೂ ನಮಗೆ ವಾಪಸ್ ಕೊಟ್ಟಿಲ್ಲ ಎಂದು ಗ್ರಾಮ ಪಂಚಾಯತ್ ಸದಸ್ಯ ಮಿಲೀನ್ ಕಾಳೆ ಆರೋಪಿಸಿದರು.
ಕೇಂದ್ರ ಸರ್ಕಾರದ ಕನಸಿನ ಯೋಜನೆ ಗುತ್ತಿಗೆದಾರರು, ಅಧಿಕಾರಿಗಳು ಸೇರಿ ಹಳ್ಳಹಿಡಿಸಿದ್ದಾರೆ. ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ತನಿಖೆ ಮಾಡಬೇಕು ಅಂತ ಜನರು ಒತ್ತಾಯಿಸಿದ್ದಾರೆ. ಯೋಜನೆ ಹದಗೆಟ್ಟರೂ ಗುತ್ತಿಗೆದಾರರಿಗೆ ಅಧಿಕಾರಿಗಳು ಈಗಾಗಲೇ ಎಲ್ಲ ಹಣ ಪಾವತಿ ಮಾಡಿದ್ದಾರೆ. ಗದಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನಿತ್ಯವೂ ಯೋಜನೆ ವಿರುದ್ಧ ದೂರು ಬಂದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇನ್ನೂ, ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಚಿವರು, ಶಾಸಕರಾಗಲಿ ಕ್ಯಾರೇ ಎನ್ನುತ್ತಿಲ್ಲ.
ಒಡೆದು ಹೋದ ಪೈಪ್ಗಳನ್ನು ಗುತ್ತಿಗೆದಾರರ ಮೂಲಕವೇ ಸರಿಪಡಿಸಲಾಗುತ್ತದೆ. ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ಜನರು ಆಡುಗಳನ್ನು ಕಟ್ಟುತ್ತಿದ್ದಾರೆ. ಇದರಿಂದಾಗಿ ಪೈಪ್ಗಳು ಒಡೆದು ಹೋಗುತ್ತಿವೆ. ಇತ್ತೀಚೆಗೆ ಗುತ್ತಿಗೆದಾರರ ಜೊತೆ ಸಭೆ ನಡೆಸಿದ್ದೇವೆ. ಕೆಲಸ ಕಾರ್ಯಗಳು ಆರಂಭಗೊಂಡಿವೆ ಎಂದು ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿ ಇಂಜಿನೀಯರ್ ಆನಂದ ಹೇಳಿದ್ದಾರೆ.
ಗುತ್ತಿಗೆದಾರರು ಜನರಿಗೆಗೆ ನೀರು ತಲುಪಿದರೇನು ಬಿಟ್ಟರೇನು, ನಾವು ಮಾಡಿದ್ದೇ ಕಾಮಗಾರಿ ಅಂತ ಬೇಕಾಬಿಟ್ಟಿ ಮಾಡಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮಗಳಲ್ಲಿ ಮಾಡಿದ್ದ ಸಿಮೆಂಟ್ ಕಾಂಕ್ರಿಟ್ ರಸ್ತೆಗಳು ಸಂಪೂರ್ಣ ಹಾಳು ಮಾಡಿದ್ದಾರೆ. ಜೆಜೆಎಂ ಯೋಜನೆ ಬಂತು ನಮ್ಮ ಮನೆಗೆ ಮನೆಗೆ ನೀರು ಬರುತ್ತದೆ ಅಂದುಕೊಂಡಿದ್ದ ಜನರು ಭ್ರಮನಿರಸಗೊಂಡಿದ್ದಾರೆ. ಯೋಜನೆ ಯಾಕೆ ಬೇಕು? ಇದ್ದ ರಸ್ತೆಗಳು ಹಾಳು ಮಾಡಿ ಹೋಗಿದ್ದಾರೆ ಅಂತ ಹಿಡಿಶಾಪ ಹಾಕುತ್ತಿದ್ದಾರೆ. ಹನಿ ನೀರಿಗಾಗಿ ಪರದಾಟ ನಡೆಸುವುದು ಮಾತ್ರ ತಪ್ಪಿಲ್ಲ. ಇನ್ನಾದರೂ ಕ್ಷೇತ್ರದ ಸಂಸದರು, ಶಾಸಕರು, ಸಚಿವರು, ಜಿಲ್ಲಾಡಳಿತ ಜೆಜೆಎಂ ಯೋಜನೆ ಕಾಮಗಾರಿ ಮಾಡಿದ ಗುತ್ತಿಗೆದಾರರು, ಅಧಿಕಾರಿಗಳಿಗೆ ಚಾಟಿ ಬೀಸುವ ಮೂಲಕ ಯೋಜನೆಯಿಂದ ಜನರಿಗೆ ಆದ ಹಿಂಸೆಯಿಂದ ಮುಕ್ತಿ ನೀಡಬೇಕಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ