34 ಎಕರೆ ಜಾಗಕ್ಕಾಗಿ ಕಾನೂನು ಸಚಿವ ಪಾಟೀಲ್ ಮತ್ತು ಗದಗ ನಗರಸಭೆ ಮಧ್ಯೆ ಫೈಟ್! ಕಾನೂನು ಹೋರಾಟದ ಎಚ್ಚರಿಕೆ

ಗದಗ ನಗರಸಭೆ ಒಡೆತನದ ಕೋಟ್ಯಾಂತರ ಆದಾಯ ತರುವ ಆಸ್ತಿ ಮೇಲೆ ಸರ್ಕಾರ ಕಣ್ಣು ಹಾಕಿದೆ. ಇದಕ್ಕಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಇದು ನಮ್ಮ ಆಸ್ತಿ ನಮ್ಮ ಹಕ್ಕು ಎನ್ನುತ್ತಿರುವ ಗದಗ ಬೆಟಗೇರಿ ನಗರಸಭೆ ಸದಸ್ಯರನ್ನು ರೊಚ್ಚಿಗೆಬ್ಬಿಸಿದೆ.‌ ಮುಂದೆ ಕಾನೂನು ಹೋರಾಟ ಮಾಡುವುದಾಗಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

34 ಎಕರೆ ಜಾಗಕ್ಕಾಗಿ ಕಾನೂನು ಸಚಿವ ಪಾಟೀಲ್ ಮತ್ತು ಗದಗ ನಗರಸಭೆ ಮಧ್ಯೆ ಫೈಟ್! ಕಾನೂನು ಹೋರಾಟದ ಎಚ್ಚರಿಕೆ
34 ಎಕರೆ ಜಾಗಕ್ಕಾಗಿ ಕಾನೂನು ಸಚಿವ ಪಾಟೀಲ್ ಮತ್ತು ಗದಗ ನಗರಸಭೆ ಮಧ್ಯೆ ಫೈಟ್
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on: Feb 28, 2024 | 1:59 PM

ನಮ್ಮ ತೆರಿಗೆ ನಮ್ಮ ಹಕ್ಕು ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಿತ್ತು. ಈ ವಾಗ ನಮ್ಮ ಆಸ್ತಿ ನಮ್ಮ ಹಕ್ಕು ಎಂಬ ಧಾಟಿಯಲ್ಲೇ ಗದಗ ನಗರಸಭೆಯೂ ಹೋರಾಟಕ್ಕೆ ಮುಂದಾಗಿದೆ. ಹೌದು ನಗರಸಭೆ ಒಡೆತನದ ನೂರಾರು ಕೋಟಿ ಮೌಲ್ಯದ 34 ಎಕರೆ ಜಾಗದ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಹೀಗಾಗಿಯೇ ಮೊನ್ನೆ ನಡೆದ ಅಧಿವೇಶನದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ( Law Minister HK Patil) ಅವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಅದು ಕೂಡಾ ನಗರಸಭೆ ಗಮನಕ್ಕೆ ತಂದಿಲ್ಲ! ಹೀಗಾಗಿ ಬಿಜೆಪಿ ಆಡಳಿತಾರೂಢ ಗದಗ ಬೆಟಗೇರಿ ನಗರಸಭೆ ಆಡಳಿತ (BJP members) ರೊಚ್ಚಿಗೆದ್ದಿದೆ. ಕಾನೂನು ಸಚಿವ ಎಚ್ ಕೆ‌ ಪಾಟೀಲ್ ವಿರುದ್ಧ ಹೋರಾಟದ ಕಹಳೆ ಊದಿದ್ದಾರೆ. ಕಾನೂನು ಸಚಿವ ಎಚ್ ಕೆ ಪಾಟೀಲ್ ವಿರುದ್ಧ ನಗರಸಭೆ ಅಧ್ಯಕ್ಷೆ ವಾಗ್ದಾಳಿ, ನಮ್ಮ ಆಸ್ತಿ ನಮ್ಮ ಹಕ್ಕು, ಇದು ಯಾರೂ ಲೂಟಿ ಮಾಡೋಕ್ಕಾಗಲ್ಲ ಅಂತ ಆಕ್ರೋಶ. ಕೂಡಲೇ ಪ್ರಾಧಿಕಾರ ರದ್ದು ಮಾಡಬೇಕು ಇಲ್ಲಾಂದ್ರೆ ಹೋರಾಟ ಮಾಡಬೇಕಾಗುತ್ತೆ ಅಂತ ಗುಡುಗು. ಹೌದು ಇದು ಗದಗ-ಬೆಟಗೇರಿ ನಗರಸಭೆ (Gadag-Betageri City Municipal Council) ನೂರಾರು ಕೋಟಿ ಆಸ್ತಿ ಕುಸ್ತಿ.

ಹೌದು ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ ಇದೆ. ನಗರಸಭೆ ಒಡೆತನದ 34 ಎಕರೆ ಜಾಗದಲ್ಲಿ 54 ವಖಾರವನ್ನು ಹೊಂದಿತ್ತು. ಲೀಜ್ ಮುಗಿದ್ರು ಖಾಸಗಿ ಮಾಲೀಕ್ರು ಜಾಗ ಖಾಲಿ ಮಾಡಿರಲಿಲ್ಲ. ಹೀಗಾಗಿ 2018ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವ್ರು ಗಟ್ಟಿ ನಿರ್ಧಾರದಿಂದ ಎಲ್ಲವೂ ಖಾಲಿ ಮಾಡಿಸಲಾಗಿದೆ.

ಇದೇ ಈವಾಗ ವಿವಾದಕ್ಕೆ ಕಾರಣವಾಗಿದೆ. ಅಂದಹಾಗೇ ಈ 34 ಎಕರೆ ಜಾಗವು ಗದಗ ಬೆಟಗೇರಿ ನಗರಸಭೆಯ ಹೆಸರಿನಲ್ಲಿದೆ. ಆದ್ರೆ, ಮೊನ್ನೆ ನಡೆದ ಅಧಿವೇಶನದಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಒಂದು ವಿಧೇಯಕವನ್ನು ಮಂಡನೆ ಮಾಡಿದ್ದಾರೆ. ನಗರಸಭೆ ಒಡೆತನದ ಆಸ್ತಿಯಲ್ಲಿ ವ್ಯಾಪಾರ, ಸಂಸ್ಕೃತಿ, ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ ರಚನೆ ಮಾಡಿದ್ದು, ಪ್ರಾಧಿಕಾರದ ಉದ್ದೇಶಗಳನ್ನು ನಿಗಧಿಪಡಿಸುವಲ್ಲಿ ಹಾಗೂ ಕಾರ್ಯ ರೂಪಕ್ಕೆ ತರುವಲ್ಲಿ, ಸಮಿತಿ ರಚನೆ ಮಾಡಿದ್ದಾರೆ.

ಇದು ಬಿಜೆಪಿ ನಗರಸಭೆ ಆಡಳಿತವನ್ನು ಕೆರಳುವಂತೆ ಮಾಡಿದೆ. ನಗರಸಭೆ ಆಡಳಿತದ ಗಮನಕ್ಕೆ ತರದೆ ಸರ್ವಾಧಿಕಾರಿ ಧೋರಣೆಯಿಂದ ಸಚಿವ ಎಚ್ ಕೆ ಪಾಟೀಲ್ ಮಾಡಿದ್ದಾರೆ ಅಂತ ಅಧ್ಯಕ್ಷೆ ಉಷಾ ದಾಸರ ಕೆಂಡಕಾರಿದ್ದಾರೆ. ಹೀಗಾಗಿ ಸಂವಿಧಾನಾತ್ಮಕವಾಗಿ ನಗರಸಭೆ ತನ್ನದೆಯಾದ ಹಕ್ಕುಗಳಿವೆ. ಅದನ್ನು ಕಸಿದುಕೊಂಡು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ನಮ್ಮ ಆಸ್ತಿ ನಮ್ಮ ಹಕ್ಕು, ನಮ್ಮ ಜಾಗವನ್ನು ಬಿಡುಕೊಡುವ ಪ್ರಶ್ನೆಯೇ ಇಲ್ಲ. ಸಚಿವರ ನಿರ್ಧಾರದ ವಿರುದ್ಧ ಹೋರಾಟ ಮಾಡುವುದಾಗಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read: AIIMS Hospital in Raichur? ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ -ಕೇಂದ್ರ, ರಾಜ್ಯ ಸರ್ಕಾರಗಳ ನಿಲುವೇನು?

ಗದಗ ಬೆಟಗೇರಿ ನಗರಸಭೆಗೆ ಸ್ಥಳೀಯವಾಗಿ ಆದಾಯ ಬರಬೇಕು, ಅದರಲ್ಲೂ ಕೋಟ್ಯಾಂತರ ರೂಪಾಯಿ ಆದಾಯ ಬರುವಂತ 34 ಎಕರೆ ವಖಾರಸಾಲಿನ ಜಾಗದಿಂದ ನಗರಸಭೆ ಸಾಕಷ್ಟು ಆದಾಯದ ನಿರೀಕ್ಷೆಯಲ್ಲಿದ್ದರು‌. ಆದ್ರೆ ಈವಾಗ ನಗರಸಭೆ ಗಮನಕ್ಕೆ ಹಾಗೂ ಪ್ರಾಧಿಕಾರದ ರಚನೆಯಲ್ಲಿ ಉದ್ದೇಶ, ಹಾಗೂ ನಗರಸಭೆಯ ಅಭಿಪ್ರಾಯ ಸಂಗ್ರಹಣೆ ಮಾಡದೇ ಹಾಗೂ ಠರಾವು ಮಾಡದೆ ಸಚಿವ ಎಚ್ ಕೆ ಪಾಟೀಲ್ ಸರ್ವಾಧಿಕಾರಿ ಧೋರಣೆ ಮಾಡ್ತಾಯಿದ್ದಾರೆ. ಅವರೇ ಕಾನೂನು ಮಂತ್ರಿಗಳು, ಅವರೆ ಕಾನೂನು ಉಲ್ಲಂಘನೆ ಮಾಡಿದ್ದಾರೆ, ಹಾಗೇ ಅವರೇ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ಆಡಳಿತಾರೂಢ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಗದಗ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಸಚಿವ ಎಚ್ ಕೆ ಪಾಟೀಲ್ ನಡೆಯನ್ನು ಖಂಡಿಸಿದ್ದಾರೆ. ನಗರಸಭೆಯಿಂದ ಕಾನೂನು ಹೋರಾಟ ಮಾಡುತ್ತೇವೆ, ನಗರಸಭೆಯಿಂದ ಒಂದು ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಸದಸ್ಯರ ಹೇಳ್ತಾಯಿದ್ದಾರೆ. ಅದು ನಮ್ಮ ಆಸ್ತಿ ನಮ್ಮ ನಗರಸಭೆಗೆ ಸೇರಬೇಕು, ಇವರ ಪ್ರಾಧಿಕಾರ ನಮಗೆ ಬೇಡ ಎಂದು ನಗರಸಭೆ ಸದಸ್ಯರು ಆಗ್ರಹ ಮಾಡಿದ್ದಾರೆ. ಅವಳಿ ನಗರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅಭಿವೃದ್ಧಿ ಕೆಲಸ ಬಿಟ್ಟು ಸಚಿವರು ಇಂಥ ಕೆಲಸ ಮಾಡ್ತಾಯಿದ್ದಾರೆ ಅಂತ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಕಿಡಿಕಾರಿದ್ದಾರೆ.

ನಗರಸಭೆ ಒಡೆತನದ ಕೋಟ್ಯಾಂತರ ಆದಾಯ ತರುವ ಆಸ್ತಿ ಮೇಲೆ ಸರ್ಕಾರ ಕಣ್ಣು ಹಾಕಿದೆ. ನಗರಸಭೆ ಗಮನಕ್ಕೆ ತರದೆ ಪ್ರಾಧಿಕಾರ ರಚನೆ ಮಾಡಿರೋದು, ಗದಗ ಬೆಟಗೇರಿ ನಗರಸಭೆ ಸದಸ್ಯರನ್ನು ರೊಚ್ಚಿಗೆಬ್ಬಿಸಿದೆ.‌ ಮುಂದೆ ಕಾನೂನು ಹೋರಾಟಕ್ಕೆ ಮುಂದಾಗಲು ನಿರ್ಧಾರ ಮಾಡಿದ್ದು, ಕಾನೂನು ಸಚಿವರ ಧೋರಣೆ ಸರಿನಾ.. ನಗರಸಭೆ ಹಕ್ಕು ಸರಿನಾ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.