ಗದಗ, ನವೆಂಬರ್ 04: ಕಾಂಗ್ರೆಸ್ನವರಿಗೆ ಅಧಿಕಾರ ಸಿಕ್ಕಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ (CC Patil) ವಾಗ್ದಾಳಿ ಮಾಡಿದ್ದಾರೆ. ನಗದರಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಲೋಪ ದೋಷ ಆದಾಗ ಎತ್ತಿ ಹಿಡಿಯಬೇಕಾಗಿದ್ದು ನಮ್ಮ ಧರ್ಮ. ಕರ್ತವ್ಯ. ಎಲ್ಲರೂ ಅಧಿಕಾರ ಮದದೊಳಗೆ ಇದ್ದಾರೆ. 136 ಸೀಟು ಬಂದಿರುವುದರಿಂದ ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಅಭಿವೃದ್ಧಿ ಕಾರ್ಯಕ್ರಮ ಒಂದೂ ಇಲ್ಲ. ನಾವು ಜಾರಿಗೆ ತಂದಿದ್ದ ಅಭಿವೃದ್ದಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಕೆಲಸ ಮಾಡಿದ ಗುತ್ತಿಗೆದಾರರ ಬಿಲ್ ಕೊಡಿಸುತ್ತಿಲ್ಲ. ಇದಕ್ಕಿಂತ ಕೆಳಮಟ್ಟದ ರಾಜಕಾರಣ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್ನ 19 ಶಾಸಕರ ಬೆಂಬಲ: ಹೆಚ್ಡಿ ಕುಮಾರಸ್ವಾಮಿ ಓಪನ್ ಆಫರ್
ಬಿಜೆಪಿ ಬರ ಅಧ್ಯಯನ ಮೂಲಕ ಡ್ರಾಮಾ ಕಂಪನಿ ಶುರು ಮಾಡಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಹೌದು. ನಾಟಕ ಅನ್ನೋದನ್ನ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ನಾಟಕ ಮಾಡುವುದಕ್ಕೆ ಹಚ್ಚಿದವರಾರು ಎಂದರು. ಅವರು ಸರಿಯಾಗಿ ಅನುದಾನ ಕೊಟ್ಟಿದ್ದರೆ ನಾವು ಯಾಕೆ ನಾಟಕ ಶುರು ಮಾಡುತ್ತಿದ್ದೆವು. ನಾವು ವಿರೋಧ ಪಕ್ಷದಲ್ಲಿದ್ದೇವೆ ಎಂದು ಹೇಳಿದ್ದಾರೆ.
ನವಲಗುಂದ ಶಾಸಕ ಕೋನರೆಡ್ಡಿಯವರಿಗೆ ಅಧಿಕಾರದ ಮದ ಮತ್ತು ದರ್ಪ ಬಂದಿದೆ. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದಿದ್ದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಹೃದಯಾಘಾತ ಆಯಿತಂತೆ. ರಾಜಕಾರಣದಲ್ಲಿ ಟೀಕೆ, ಟಿಪ್ಪಣೆ ಮಾಡುವುದಕ್ಕೆ ಕೂಡಾ ಮಾನ, ಮರ್ಯಾದೆ ಬೇಕು. ರಾಜಕಾರಣ ಇಂದು ಯಾವ ಹಂತಕ್ಕೆ ಹೋಗಿದೆ ಎಂದು ಕಿಡಿಕಾರಿದ್ದಾರೆ.
ಯಾರನ್ನಾದರೂ ಮೆಚ್ಚಿಸುವುದಕ್ಕೆ ಏನಾದರೂ ಮಾತಾನಾಡುವುದೇ. ಬೊಮ್ಮಾಯಿ ಅವರ ಮೇಲೆ ಸವದತ್ತಿ ಯಲ್ಲಮ್ಮನ ಕೃಪೆ ಇದೆ. ಅಷ್ಟು ದೊಡ್ಡ ಶಸ್ತ್ರಚಿಕಿತ್ಸೆ ಆದರೂ ಆರಾಮಾಗಿದ್ದಾರೆ. ಸ್ವಲ್ಪ ದಿವಸದಲ್ಲೇ ಸಕ್ರಿಯ ರಾಜಕಾರಣಕ್ಕೆ ಬರುತ್ತಾರೆ ಎಂದಿದ್ದಾರೆ.
ಸಚಿವ ಶ್ರೀರಾಮುಲು ಮಾತನಾಡಿ, ಸಿಎಂ ಸಿದ್ದರಾಮಯ್ಯ ಬರಗಾಲದ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ರೈತರ ಪಂಪ್ ಸೆಟ್ಗಳಿಗೆ ಮೂರು ಗಂಟೆಯೂ ವಿದ್ಯುತ್ ಸಿಗ್ತಿಲ್ಲ. ಪಂಪ್ ಸೆಟ್ಗೆ ನಿರಂತರ ವಿದ್ಯುತ್ ಒದಗಿಸುವ ಕೆಲಸ ಆಗಬೇಕು. 31 ಜಿಲ್ಲೆಗೆ 324 ಕೋಟಿ ರೂ. ಬರ ಪರಿಹಾರ ಘೋಷಿಸಿದ್ದೀರಿ. ನೀವು ಗ್ಯಾರಂಟಿ ಯೋಜನೆ ಕೊಟ್ಟರೆ ಯಾವುದೇ ತಕರಾರು ಇಲ್ಲ. ಆದರೆ ಬಡವರ ಜೊತೆಗೆ ರೈತರನ್ನೂ ನೋಡಬೇಕಾಗುತ್ತೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.