ಹಾಸ್ಟೆಲ್​​ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ

ಗದಗ ಜಿಲ್ಲೆಯ ಮುಂಡರಗಿ ಪಟ್ಟಣ ಮೆಡಿಕಲ್​​ ಕಾಲೇಜ್ ಹಾಸ್ಟೆಲ್​​ನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ವಿದ್ಯಾರ್ಥಿಯ ಶವ ಪತ್ತೆಯಾದ ಘಟನೆ ನಡೆದಿದೆ. ಆ ಮೂಲಕ ಈ ಕಾಲೇಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂರನೇ ವಿದ್ಯಾರ್ಥಿ ಎನ್ನಲಾಗುತ್ತಿದೆ. ಕಾಲೇಜ್ ಆಡಳಿತ‌ ಮಂಡಳಿ, ಸಿಬ್ಬಂದಿ ವಿರುದ್ಧ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಹಾಸ್ಟೆಲ್​​ನಲ್ಲಿ BAMS ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಕಾಲೇಜ್ ವಿರುದ್ಧ ಕೊಲೆ, ಸಾಕ್ಷಿ ನಾಶ ಆರೋಪ
ಮೃತ ವಿದ್ಯಾರ್ಥಿ
Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2025 | 3:33 PM

ಗದಗ, ಡಿಸೆಂಬರ್​ 11: ಕಾಲೇಜ್ ಹಾಸ್ಟೆಲ್​​ನಲ್ಲಿ ನೇಣು ಬಿಗಿದಿದ್ದ ಸ್ಥಿತಿಯಲ್ಲಿ ವಿದ್ಯಾರ್ಥಿಯ (student) ಶವ ಪತ್ತೆ (dead body found) ಆಗಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದ ಎಸ್​​​ಬಿಎಸ್​​ ಆಯುರ್ವೇದಿಕ್ ಮೆಡಿಕಲ್​​ ಕಾಲೇಜ್ ಹಾಸ್ಟೆಲ್​​ನಲ್ಲಿ ನಡೆದಿದೆ. BAMS ಅಂತಿಮ ವರ್ಷದಲ್ಲಿ ಓದುತ್ತಿದ್ದ ಈಶ್ವರ ಗಾದಗೆ(21) ಮೃತ ವಿದ್ಯಾರ್ಥಿ. ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕುಟುಂಬಸ್ಥರು ಆಡಳಿತ‌ ಮಂಡಳಿ, ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಟುಂಬಸ್ಥರಿಗೆ ಮಾಹಿತಿ ನೀಡದೇ ಆಸ್ಪತ್ರೆಗೆ ಮೃತದೇಹವನ್ನು ಸಾಗಾಟ ಮಾಡಿದ್ದಾರೆ.

ಡೆತ್​​ ನೋಟ್ ಪತ್ತೆ: ಕೊಲೆ ಎಂದ ಕುಟುಂಬಸ್ಥರು

ಮೃತ ವಿದ್ಯಾರ್ಥಿ ಈಶ್ವರ ಗಾದಗೆ ಬೀದರ್​​​ ಜಿಲ್ಲೆಯ ಬಾಲ್ಕಿ ತಾಲೂಕಿನ ಧನ್ನೂರ ಎಸ್ ಗ್ರಾಮದವರು. ಎಸ್​​​ಬಿಎಸ್​​ ಆಯುರ್ವೇದಿಕ್ ಮೆಡಿಕಲ್​​ ಕಾಲೇಜ್​​ನಲ್ಲಿ BAMS ಅಂತಿಮ ವರ್ಷದಲ್ಲಿ ಓದುತ್ತಿದ್ದರು. ಆರು ತಿಂಗಳ ಹಿಂದೆ ಕೂಡ ಕಾಲೇಜ್​​ ಉಪನ್ಯಾಸಕ ಕಿರುಕುಳ ತಾಳಲಾರದೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇನ್ನು ಎರಡು ಲೈನ್​​​ ಇರುವ ಡೆತ್​​ ನೋಟ್ ಪತ್ತೆ ಆಗಿದೆ. ‘ನನ್ನ ಸಾವಿಗೆ ಯಾರೂ ಕಾರಣ ಅಲ್ಲ, ನಾನೇ ಕಾರಣ. ಸಾರಿ ಮಮ್ಮಿ, ಪಪ್ಪಾ’ ಅಂತ ಬರೆಯಲಾಗಿದೆ. ಆದರೆ ಇದು ನಮ್ಮ ಮಗ ಬರೆದ ಡೆತ್ ನೋಟ್ ಅಲ್ಲ, ನಮ್ಮ ಮಗನ ಬರವಣಿ ಅಲ್ಲ ಎಂದಿದ್ದಾರೆ ಕುಟುಂಬಸ್ಥರು. ಕಾಲೇಜ್​ನವರು ಸೃಷ್ಟಿ ಮಾಡಿರುವ ಡೆತ್ ನೋಟ್ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೋಲಾರ: ಮಲ ತಂದೆ ತಾಯಿಗೆ ತಲಾಖ್ ನೀಡಿದ್ದರಿಂದ ಮನನೊಂದು ಮಗ ಆತ್ಮಹತ್ಯೆ

ವಿದ್ಯಾರ್ಥಿ ಕಾಲಿನ ಬೆರಳಿ ಉಗುರು ಕಿತ್ತು ಚಿತ್ರಹಿಂಸೆ ನೀಡಿದ್ದಾರೆ. ಕತ್ತು, ದೇಹದ ಭಾಗದಲ್ಲಿ ರಕ್ತ ಗಾಯಗಳಾಗಿವೆ. ಕಾಲೇಜ್​​ನವರೇ ಕೊಲೆ ಮಾಡಿ ಆತ್ಮಹತ್ಯೆ ಕಥೆ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಕುಟುಂಬಸ್ಥರ ಆರೋಪವಾಗಿದೆ.

ಈ ಹಿಂದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

ಇನ್ನು ಈಶ್ವರ ಗಾದಗೆ ಈ ಕಾಲೇಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೂರನೇ ವಿದ್ಯಾರ್ಥಿ. ಈ ಹಿಂದೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ಮುಚ್ಚಿ ಹಾಕಿದ್ದಾರೆ. ನಮ್ಮ ಮಗನಿಗೂ ಕಿರಕುಳ ನೀಡಿದ್ದಾರೆ. ಇದು ಅಂತಿಮ ವರ್ಷವಿರುವುದರಿಂದ ಸಮಾಧಾನ‌ ಮಾಡಿದ್ದೇವು. ಆದರೆ ಕಾಲೇಜನವರು ಕೊಂದು ಬಿಟ್ಟರು. ಎಲ್ಲಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್​ನಲ್ಲಿ ಪಾಸಾಗಿದ್ದಾನೆ ಎಂದು ಮಗನ್ನು ಕಳೆದುಕೊಂಡ ಹೆತ್ತವರು ಕಣ್ಣೀರು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:16 pm, Thu, 11 December 25