ರಾತ್ರಿ 1.30ಕ್ಕೆ ಹೊರ ಹೋಗಿದ್ದ ಯುವತಿಯ ಮೃತದೇಹ ಕೆರೆಯಲ್ಲಿ ಪತ್ತೆ: ಆಗಿದ್ದೇನು?
ಅವಳು ಎಸ್ಎಸ್ಎಲ್ಸಿಯಲ್ಲಿ ಊರಿಗೇ ಫಸ್ಟ್ ಬಂದಿದ್ಲು. ಸಿಇಟಿಯಲ್ಲೂ ಉತ್ತಮ ಱಂಕ್ ಪಡೆದು, ಸರ್ಕಾರಿ ಕೋಟಾದಡಿ ಇಂಜಿನಿಯರ್ ಸೀಟ್ ಗಿಟ್ಟಿಸಿಕೊಂಡಿದ್ಳು. ಅಣ್ಣನ ಪಾಲಿನ ಮುದ್ದಿನ ತಂಗಿ ದುಡುಕಿನ ನಿರ್ಧಾರದಿಂದ ಉಸಿರು ಚೆಲ್ಲಿದ್ದಾಳೆ. ಮಧ್ಯರಾತ್ರಿ 1.30ಕ್ಕೆ ಎದ್ದು ಹೊರಗೆ ಹೋದ ಯುವತಿಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಅಷ್ಟಕ್ಕೂ ಆಗಿದ್ದೇನು? ಎನ್ನುವ ವಿವರ ಇಲ್ಲಿದೆ.

ಗದಗ, (ನವೆಂಬರ್ 30): ಅಪ್ಪನಿಲ್ಲ ಅನ್ನೋ ಕೊರತೆ ಬಾರದಂತೆ ತಂಗಿಯನ್ನ (Sister) ಈತ ಬೆಳೆಸಿದ್ದ. ಆದ್ರೆ, ತಂಗಿಗೆ ಬುದ್ದಿವಾದ ಹೇಳಿದ್ದೆ ತಪ್ಪಾಗಿ ಹೋಗಿದೆ. ಹೌದು…ಚೆನ್ನಾಗಿ ಓದು ಎಂದು ಅಣ್ಣ (Brother) ಬುದ್ಧಿವಾದ ಹೇಳಿದ್ದಕ್ಕೆ ತಂಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ಗದಗದ (Gadag) ಭೀಷ್ಮ ಕೆರೆಗೆ ಹಾರಿ ಚಂದ್ರಿಕಾ ನಡುವಿನಮನಿ(21) ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಗಲಕೋಟೆ ಜಿಲ್ಲೆ ಶಿರೂರಿನ ಈಕೆ ಚಂದ್ರಿಕಾ ನಡುವಿನಮನಿ, ಗದಗ ನಗರದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಫೈನಲ್ ಇಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ (ನವೆಂಬರ್ 29) ರಾತ್ರಿ ಅಣ್ಣ ಚೇತನ್ ಕರೆಮಾಡಿ, ಇದು ಕೊನೆ ಸೆಮಿಸ್ಟರ್ ಚೆನ್ನಾಗಿ ಓದು. ಕಳೆದ ಸೆಮಿಸ್ಟರ್ ರಿಸಲ್ಟ್ ಕಡಿಮೆ ಆಗಿದೆ ಎಂದು ಬುದ್ದಿ ಹೇಳಿದ್ದ. ಇಷ್ಟಕ್ಕೆ ನೊಂದ ಚಂದ್ರಿಕಾ, ಮಧ್ಯರಾತ್ರಿ ರಾತ್ರಿ ಭೀಷ್ಮ ಕೆರೆ ಪ್ರಾಣಬಿಟ್ಟಿದ್ದಾಳೆ.
ಚಂದ್ರಿಕಾ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಫಸ್ಟ್ ರ್ಯಾಂಕ್ ಪಡೆದಿದ್ದಳು. ಗ್ರಾಮದಲ್ಲಿ ಪ್ರತಿಭಾನ್ವಿತ ಎಂದು ಹೆಸರು ಪಡೆದಿದ್ಳು. ಇಂಜಿನಿಯರಿಂಗ್ನಲ್ಲಿ ಚೆನ್ನಾಗಿ ಓದಲಿ ಅಂತನೇ, ಹಾಸ್ಟೆಲ್ ಬಿಡಿಸಿ, ಪ್ರತ್ಯೇಕ ಮನೆ ಮಾಡಿಸಿದ್ದು, ಮನೆಯಲ್ಲಿ ಚಂದ್ರಿಕಾ ಸೇರಿ ನಾಲ್ವರು ಸ್ನೇಹಿತೆಯರು ಇದ್ದರು. ಆದ್ರೆ, ಇತ್ತೀಚೆಗೆ ಚಂದ್ರಿಕಾ ಸ್ನೇಹಿತರ ಜೊತೆ ಟೂರಿಗೆ ಹೋಗಿದ್ದಳು. ಹೀಗಾಗಿ ಇನ್ನೂ 6 ತಿಂಗಳು ಪರೀಕ್ಷೆ ಇದೆ, ಚನ್ನಾಗಿ ಓದು ಎಂದು ಅಣ್ಣ ಫೋನ್ನಲ್ಲಿ ಬುದ್ದಿ ಮಾತು ಹೇಳಿದ್ದ. ಅಷ್ಟಕ್ಕೆ ಮನನೊಂದ ಚಂದ್ರಿಕಾ, ನಿನ್ನೆ ರಾತ್ರಿ 1.30ರ ಸುಮಾರಿಗೆ ಮನೆಯಿಂದ ಹೋಗಿ ಗದಗದ ಭೀಷ್ಮ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾಳೆ.
ಇದನ್ನೂ ಓದಿ: ಮದ್ವೆಯಾಗುವ ಕನಸು ಹೊತ್ತು ಮನಸ್ಸು ಕೊಟ್ಟವಳು ದುರಂತ ಸಾವು: ನಟಿ ಆಶಿಕಾ ರಂಗನಾಥ್ ಸಂಬಂಧಿ ಸಾವಿನ ರಹಸ್ಯ ಬಯಲು
ಅಣ್ಣನಂತ ಅಣ್ಣ ಅರೆಜೀವವಾಗಿದ್ದು, ಅಗಲಿದ ತಂಗಿ ಶವದ ಎದುರು ಬಿಕ್ಕುತ್ತಿದ್ದಾನೆ. ತನ್ನ ಮಾತಿಂದಲೇ ಹೀಗಾಯ್ತಲ್ಲ ಎಂದು ಗೋಳಾಡಿ ಅತ್ತಿದ್ದಾನೆ. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಒಳ್ಳೆಯ ಫಲಿತಾಂಶ ಪಡೆದುಕೊಂಡಿದ್ದ ಚಂದ್ರಿಕಾಳದ್ದು, ಇನ್ನೂ ಆರು ತಿಂಗಳಾಗಿದ್ರೆ ಇಂಜಿನಿಯರಿಂಗ್ ಮುಗಿತ್ತಿತ್ತು. ಆದ್ರೆ, ದುಡುಕಿನ ನಿರ್ಧಾರದಿಂದ ದುರಂತ ಸಾವುಕಂಡಿದ್ದಾಳೆ. ಇನ್ನು ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು ಎಂದು ಕಣ್ಣೀರಿಟ್ಟಿದ್ದಾನೆ.
ಏನೇ ಹೇಳಿ ಬಾಳಿ ಬದುಕಬೇಕಿದ್ದ ಯುವತಿ, ಬದುಕಿನ ಬಗ್ಗೆ ನೂರೆಂಟು ಕನಸು ಕಟ್ಟಿಕೊಂಡಿದ್ಳು. ಆದ್ರೆ ದುಡುಕಿನ ನಿರ್ಧಾರದಿಂದ ಪ್ರಾಣಬಿಟ್ಟಿದ್ದು ನಿಜಕ್ಕೂ ದುರಂತ. ಮನೆಯವರು ಏನೇ ಬೈದರೂ ಒಳ್ಳೆಯತನಕ್ಕೆ ಎಂದು ಭಾವಿಸಬೇಕು. ಅದನ್ನು ಬಿಟ್ಟು ಈ ರೀತಿ ಮಾಡಿಕೊಳ್ಳುವುದು ಸರಿಯಲ್ಲ.



