ಗದಗ: ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪ ತಹಶೀಲ್ದಾರ್ ಅಮಾನತು

ಗದಗದ ಉಪ ತಹಶೀಲ್ದಾರ್ ದೇವಾನಂದ ವಾಲ್ಮೀಕಿ ಅವರನ್ನು ಅಮಾನತು ಮಾಡಲಾಗಿದೆ. ಸರ್ಕಾರಿ ಕಚೇರಿಯಲ್ಲೇ ಉಪ ತಹಶೀಲ್ದಾರ್ ಯುವಕನ ಮೇಲೆ ಹಲ್ಲೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಿಂದಾಗಿ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಸಚಿವ ಸಿಸಿ ಪಾಟೀಲ್ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾದ ಕಾಂಗ್ರೆಸ್ ಮುಖಂಡನ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಕೇಳಿಬಂದಿದೆ.

ಗದಗ: ಯುವಕನ ಮೇಲೆ ಹಲ್ಲೆ ಮಾಡಿದ್ದ ಉಪ ತಹಶೀಲ್ದಾರ್ ಅಮಾನತು
ಗದಗ ಉಪ ತಹಶೀಲ್ದಾರ್ ದೇವಾನಂದ್​
Edited By:

Updated on: May 19, 2025 | 9:40 AM

ಗದಗ, ಮೇ 19: ಸರ್ಕಾರಿ ಕಚೇರಿಯಲ್ಲಿ ಗೂಂಡಾ ವರ್ತನೆ ತೋರಿದ್ದ ಉಪ ತಹಶೀಲ್ದಾರ್ (Deputy Tahsildar) ದೇವಾನಂದ ವಾಲ್ಮೀಕಿಯವರನ್ನು ಗದಗ (Gadag) ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಗದಗನ ಉಪ ತಹಶೀಲ್ದಾರ ದೇವಾನಂದ ವಾಲ್ಮೀಕಿ ಎಂಬುವರ ಸಂಬಂಧಿಕರ ಕಾರು ಶಿವು ಎಂಬುವರ ಬೈಕ್​ಗೆ ಡಿಕ್ಕಿಯಾಗಿದೆ. ಆಗ ಶಿವು ಅವರ ಸ್ನೇಹಿತ ಅಕ್ಷಯ್ ನ್ಯಾಯ ಕೇಳಲು ತಹಶೀಲ್ದಾರ ಕಚೇರಿಗೆ ಹೋಗಿದ್ದಾರೆ. ಆಗ ಉಪ ತಹಶೀಲ್ದಾರ ದೇವಾನಂದ ಹಾಗೂ ಅವರ ಸಹಚರು ಅಕ್ಷಯ ಅವರಿಗೆ ಥಳಿಸಿದ್ದರು.

ಸರ್ಕಾರಿ ಕಚೇರಿಯಲ್ಲೇ ಈ ಘಟನೆ ನಡೆದಿದ್ದು, ಉಪ ತಹಶೀಲ್ದಾರ ದೇವಾನಂದ ವಾಲ್ಮೀಕಿ ಮತ್ತು ಅವರ ಸಹಚರ, ಕಾಂಗ್ರೆಸ್ ಮುಖಂಡ ವಿದ್ಯಾಧರ ದೊಡ್ಡಮನಿಯ ಗೂಂಡಾಗಿರಿ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದಕ್ಕೆ ಗದಗ ತಹಶೀಲ್ದಾರ ಕಚೇರಿಯಲ್ಲಿ ನಡೆದ ಘಟನೆ ತಾಜಾ ಉದಾಹರಣೆಯಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಸಿಸಿ ಪಾಟೀಲ್ ವಾಗ್ದಾಳಿ ಮಾಡಿದ್ದರು. ಈ ಘಟನೆ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ ಅನ್ನೋ ಪ್ರಶ್ನೆ ಕಾಡುತ್ತಿದೆ. ಈ ರೀತಿ ಹಲವಾರು ಘಟನೆ ನಡೆದರೂ ಯಾರ ಮೇಲೂ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಯುವಕನ ಹಿಂದೆ ಬಿದ್ದು ಹೆಣವಾದ ಮೂರು ಮಕ್ಕಳ ತಾಯಿ: ಲವ್ವಿಡವ್ವಿ ಕೊಲೆಯಲ್ಲಿ ಅಂತ್ಯ

ಗೃಹ ಸಚಿವ ಜಿ. ಪರಮೇಶ್ವರ್​ ಒಳ್ಳೆಯ ವ್ಯಕ್ತಿಯಾಗಿದ್ದರೂ ಇಲಾಖೆ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಕಿಡಿಕಾರಿದ್ದರು. ಉಪ ತಹಶೀಲ್ದಾರ್ ಅವರನ್ನು ಸೇವೆಯಿಂದ ತೆಗೆದು ಹಾಕಬೇಕು ಅಂತ ಸಿಸಿ ಪಾಟೀಲ್ ಒತ್ತಾಯಿಸಿದ್ದರು. ಆದರೆ, ಸಚಿವ ಹೆಚ್ ಕೆ ಪಾಟೀಲ್ ಆಪ್ತ, ಕಾಂಗ್ರೆಸ್ ಮುಖಂಡ ವಿದ್ಯಾಧರ ದೊಡ್ಡಮನಿ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಗದಗ ಜಿಲ್ಲೆಯ ಜನರು ಪ್ರಶ್ನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:22 am, Mon, 19 May 25