ಗದಗ: ಮನೆಯಲ್ಲಿ ಪೂಜಿಸುವ ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ದೇವರ ಫೋಟೊಗಳನ್ನು ಹೊರಗೆಸೆದ ಕುಟುಂಬ!
ದೇವರು ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯ, ಭಕ್ತಿ ಇದ್ದೇ ಇರುತ್ತದೆ. ಆದರೆ, ಈ ಕುಟುಂಬ ಮಾತ್ರ ನಮಗೆ ದೇವರು ಬೇಡವೇ ಬೇಡ ಎಂದು ಮನೆಯಲ್ಲಿದ್ದ ದೇವರ ಫೋಟೋಗಳನ್ನೇ ಹೊರಗಡೆ ಹಾಕಿದೆ. ದೇವರೇ ಇಲ್ಲ, ಇದೊಂದು ಮೂಢನಂಬಿಕೆ ಎಂದು ವಾದಿಸಿದ್ದು ಹುಲಿಗೆಮ್ಮ, ಯಲ್ಲಮ್ಮ, ಲಕ್ಷ್ಮೀ ದೇವರ ಪೋಟೋಗಳನ್ನು ಹೊರಗಡೆ ಹಾಕಿ ಬುದ್ಧ, ಬಸವ, ಅಂಬೇಡ್ಕರ್ ಮೂರ್ತಿ ಮನೆಗೆ ತಂದಿದೆ. ವಿವರಗಳಿಗೆ ಮುಂದೆ ಓದಿ.
ಗದಗ, ಡಿಸೆಂಬರ್ 26: ಮನೆಯಲ್ಲಿ ಪೂಜೆ ಮಾಡುವ ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ದೇವರುಗಳನ್ನೇ ಆ ಕುಟುಂಬದವರು ಹೊರಗೆ ಹಾಕಿದ್ದಾರೆ. ಬದಲಿಗೆ ಬುದ್ಧ, ಬಸವ, ಅಂಬೇಡ್ಕರ್ ಅವರೇ ನಮ್ಮ ಪಾಲಿಗೆ ದೇವರು ಎಂದು ಸ್ಮರಣೆ ಶುರು ಮಾಡಿದ್ದಾರೆ! ಗದಗ ಬೆಟಗೇರಿ ನಗರದ ಅಂಬೇಡ್ಕರ್ ಕಾಲೋನಿ ನಿವಾಸಿ ಹಾಗೂ ಹೋರಾಟಗಾರ ಷರೀಫ್ ಬಿಳಿಯಲಿ ಮನೆಯಲ್ಲಿ ಕುಟುಂಬಸ್ಥರು ‘‘ಬುದ್ಧಂ ಶರಣಂ ಗಚ್ಛಾಮಿ’’ ಮಂತ್ರ ಪಠಣದೊಂದಿಗೆ ಕಠೋರ ನಿರ್ಧಾರ ಮಾಡಿದ್ದಾರೆ.
ನಮ್ಮ ತಾಯಿ ದೇವದಾಸಿಯಾಗಿದ್ದರು. ಅನಾರೋಗ್ಯದಲ್ಲಿದ್ದಾಗ ಯಾವ ದೇವರೂ ಬದುಕಿಸಲಿಲ್ಲ. ದೇವರು ಎಲ್ಲಿದ್ದಾನೆ ಎಂದು ಕುಟುಂಸ್ಥರು ಪ್ರಶ್ನೆ ಮಾಡಿದ್ದಾರೆ.
ಈ ಕುಟುಂಬದವರು ಹಲವು ವರ್ಷಗಳಿಂದ ಮನೆಯಲ್ಲಿ ಯಲ್ಲಮ್ಮ, ಹುಲಗೆಮ್ಮ, ಲಕ್ಷ್ಮೀ ಸೇರಿ ಹಲವು ದೇವತೆಗಳ ಪೂಜೆ ಮಾಡುತ್ತಿದ್ದರು. ಆದರೆ, ಈಗ ಆ ದೇವರುಗಳ ಫೋಟೊವನ್ನು ಮನೆಯಿಂದ ಹೊರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶರೀಫ್ ಬಿಳಿಯಲಿ ಹಾಗೂ ಅವರ ಪತ್ನಿ ಗಾಯತ್ರಿ ಸೇರಿ ಈ ಕಠೋರ ನಿರ್ಧಾರ ಮಾಡಿದ್ದಾರೆ. ಮನೆಯಲ್ಲಿ ಷರೀಫ್ ಅವರ ತಾಯಿಯ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದರು. ಶರೀಫ್ ತಾಯಿ ದೇವದಾಸಿಯಾಗಿದ್ದರು. ಯಲ್ಲಮ್ಮ, ಹುಲಗೆಮ್ಮ ದೇವಿಯನ್ನು ಆರಾಧಿಸುತ್ತಿದ್ದರು. ಆದರೆ, ಆನಾರೋಗ್ಯದಿಂದ ತಾಯಿ ತೀರಿಕೊಂಡಿದ್ದಾರೆ. ದೇವರು ಇರುವುದು ಹೌದಾದರೆ, ಯಾಕೆ ಬದುಕಿಸಲಿಲ್ಲ? ದೇವರೇ ಇಲ್ಲ? ಇದೊಂದು ಪುರೋಹಿತಶಾಹಿಗಳ ಸಂಚು ಎಂಬುದು ಈ ಕುಟುಂಬದವರ ವಾದ.
ಹೀಗಾಗಿ ಹಿಂದೂ ಪದ್ಧತಿಯ ಪೂಜೆಯನ್ನು ತಿರಸ್ಕಾರ ಮಾಡಿ ಹಿಂದೂ ದೇವರುಗಳಾದ ಯಲ್ಲಮ್ಮ, ಹುಲಿಗೆಮ್ಮ, ಲಕ್ಷ್ಮೀ ಫೊಟೊಗಳನ್ನು ಮತ್ತು ಕಾಯಿ, ಕರ್ಪೂರ ಹಾಗೂ ಪೂಜೆ ವಸ್ತುಗಳನ್ನು ಹೊರಗೆ ಹಾಕಿದ್ದಾರೆ. ಬದಲಾಗಿ ಬುದ್ಧ, ಬಸವ, ಅಂಬೇಡ್ಕರ್ಗಳ ಮೂರ್ತಿಗಳನ್ನು ಮನೆಗೆ ತಂದಿದ್ದಾರೆ. ದೇವರುಗಳಿದ್ದ ಜಾಗದಲ್ಲಿ ಅವುಗಳನ್ನ ಕೂರಿಸಿ ಸ್ಮರಣೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಪಿನ್ ಸೆಟ್ ಮಾಡಿಕೊಡುತ್ತೇನೆ ಅಂತ ATM ಕಾರ್ಡ್ ಬದಲಾಯಿಸಿ ಅಮಾಯಕರ ಖಾತೆಯಿಂದ ಹಣ ದೋಚುತ್ತಿದ್ದ ಆರೋಪಿ ಅರೆಸ್ಟ್
ಮನುಸ್ಮೃತಿ ದಹನ ಮಾಡಿದ ದಿನದ ಪ್ರಯುಕ್ತ ಕಠೋರ ನಿರ್ಧಾರ
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಮಾಡಿದ ದಿನದ ಪ್ರಯುಕ್ತ ಷರೀಫ್ ಬಿಳಿಯಲಿ ಕುಟುಂಬ ಈ ಕಠೋರ ನಿರ್ಧಾರ ಮಾಡಿದೆ. ಜೊತೆಗೆ ಇಂದೇ ಅವರ ತಾಯಿ ಪೂಜೆ ಮಾಡಿಕೊಂಡು ಬರ್ತಿದ್ದ ದೇವರುಗಳನ್ನ ಒಂದು ಬುಟ್ಟಿಯಲ್ಲಿ ತುಂಬಿ ಹೊರಗಡೆ ಹಾಕಿದ್ದಾರೆ. ಈ ನಡೆಗೆ ಹಲವು ಪ್ರಗತಿಪರರು ಸಾಥ್ ನೀಡಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ