ಗದಗ ಸೆ.24: ಶ್ರಾವಣ (Sharavana) ಮಾಸ ಆರಂಭವಾದರೇ ಸಾಕು ಹಬ್ಬಗಳ ಸಾಲು ಶುರುವಾಗುತ್ತೆ. ಈ ವೇಳೆ ಹೂವು, ಹಣ್ಣುಗಳಿಗೆ ಫುಲ್ ಡಿಮ್ಯಾಂಡ್ ಇರುತ್ತದೆ. ಹೀಗಾಗಿ ಹೂವು, ಹಣ್ಣು ಬೆಳೆಗಾರರು ಅಧಿಕ ಲಾಭದ ನಿರೀಕ್ಷೆಯಲ್ಲಿರುತ್ತಾರೆ. ಒಂದು ವೇಳೆ ಬೆಲೆ ಕುಸಿತವಾದರೆ ರೈತರ ಬದುಕು ಹೇಳತೀರದು. ಇದೇರೀತಿಯಾಗಿ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಕದಂಪುರ ಗ್ರಾಮದ ರೈತ, ಉತ್ತಮ ಬೆಲೆ ಇದೆ ಎಂದು ಚೆಂಡು ಹೂವು ಬೆಳೆದು ಕೈ ಸುಟ್ಟುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಮಗಳ ಬಿಇ ಶಿಕ್ಷಣದ ಫೀಸ್ಗಾಗಿ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಕದಂಪುರ ಗ್ರಾಮದ ರೈತ ವೀರೇಶ್ ಸಾಲಿಮಠ ಅವರದ್ದು ನಾಲ್ಕು ಎಕರೆ ತೋಟವಿದೆ. ಒಂದು ಎಕರೆ ತೋಟದಲ್ಲಿ ವಿರೇಶ್ ಚೆಂಡು ಹೂವು ಬೆಳೆದು ಹೂವಿನಂತ ಬದುಕು ಕಟ್ಟಿಕೊಳ್ಳಬೇಕು ಅಂತ ಕನಸು ಕಂಡಿದ್ದರು. ಜೊತೆಗೆ ಮಗಳಿಗೆ ಬಿಇ ಓದಿಸಬೇಕೆಂದುಕೊಂಡಿದ್ದರು. ಈಗ ಹಬ್ಬದ ಸೀಸನ್ ಹೂವುಗಳಿಗೆ ಭಾರಿ ಬೇಡಿಕೆ, ಭರ್ಜರಿ ಬೆಲೆ ಇರುತ್ತದೆ. ಹೀಗಾಗಿ ಅಧಿಕ ಲಾಭ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ನಾಲ್ಕು ಎಕರೆ ತೋಟದಲ್ಲಿ ಚೆಂಡು ಹೂವು ಬೆಳೆಯಲು ನಿರ್ಧರಿಸಿದರು. ಆದರೆ ತಾನೊಂದು ಬಗೆದರೇ ದೈವವೊಂದು ಬಗೆಯುತ್ತದೆ ಎಂಬಂತೆ ವಿರೇಶ್ ಅವರ ಪಾಡು ಆಗಿದೆ.
ಇನ್ನು ಮಗಳು ಗೀತಾ ಸಿಇಟಿ ಪರೀಕ್ಷೆ ಬರೆದಿದ್ದು, ಉತ್ತಮ ರ್ಯಾಂಕ್ನಲ್ಲಿ ಪಾಸಾಗಿದ್ದಾರೆ. ಇಂದು ಅಥವಾ ನಾಳೆ ಕಾಲೇಜ್ಗೆ ಸೀಟ್ ಅಲೌಟ್ ಆಗುತ್ತೆ. ಹೀಗಾಗಿ ತಂದೆ ವೀರೇಶ್ ಮಗಳ ಫೀಸ್ಗಾಗಿ ಎರಡು ಲಕ್ಷ ರೂ. ತೆಗೆದಿಟ್ಟಿದ್ದರು. ಆದರೆ ಅದೇನು ತಿಳಿಯಿತು ಏನೋ, ಇದೇ ಹಣದಲ್ಲಿ ಚೆಂಡು ಹೂವು ಬೆಳೆದರು. ಇನ್ನೂ ಹೆಚ್ಚಿನ ಲಾಭ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದರು.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಬರದ ಪರಿಸ್ಥಿತಿ: ರೈತನ ಪಾಲಿಗೆ ಕಹಿಯಾದ ಸಿಹಿ ಗೆಣಸು
ನಾಲ್ಕು ರೂ.ಗೆ ಒಂದು ಚೆಂಡು ಹೂವಿನ ಸಸಿ ತಂದು ಒಂದು ಎಕರೆಯಲ್ಲಿ ನಾಟಿ ಮಾಡಿದ್ದರು. ಹೂವು ಕೂಡ ಚೆನ್ನಾಗಿ ಬಂದಿದೆ. ಆದರೆ ಗದಗ, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಖರೀದಿ ಆಗುತ್ತಿಲ್ಲ. ಅಲ್ಲದೇ ಒಂದು ಕೆಜಿ ಚೆಂಡು ಹೂವಿನ ವೆಲೆ ಕೇವಲ 10 ರೂ.ಇದೆ. ಹೀಗಾಗಿ ರೈತ ವಿರೇಶ್ ತೋಟದಲ್ಲಿನ ಹೂವುಗಳು ಕಟಾವು ಕೂಡ ಮಾಡುತ್ತಿಲ್ಲ. ಇದರಿಂದ ಹೂವುಗಳು ಒಣಗಿ ಹೋಗುತ್ತಿವೆ. ಲಾಭವಿಲ್ಲದೆ ರೈತ ವಿರೇಶ್ ಕೈ ಸುಟ್ಟುಕೊಂಡಿದ್ದು, ಮಗಳ ಇಂಜಿನೀಯರಿಂಗ್ಗೆ 1.4 ಲಕ್ಷ ರೂ. ಫೀಸ್ ಹೇಗೆ ಕಟ್ಟುವುದು ಎಂದು ವಿರೇಶ್ ತಲೆ ಕಡೆಸಿಕೊಂಡಿದ್ದು, ದಿಕ್ಕುತೋಚದಂತಾಗಿದೆ.
ನಮ್ಮ ತಂದೆ ಹೂವು ಬೆಳೆದು ಲಾಭ ಪಡೆಯಬೇಕು ಅಂತ ಕನಸು ಕಂಡಿದ್ದರು. ಅಷ್ಟೇ ಕಷ್ಟು ಪಟ್ಟು ಹೂವು ಬೆಳೆದಿದ್ದಾರೆ. ಆದರೆ ತಕ್ಕ ಬೆಲೆ ಸಿಗದೆ ನಷ್ಟವಾಗಿದೆ. ಸರ್ಕಾರ ಉತ್ತಮ ಬೆಂಬಲ ಬೆಲೆಯಲ್ಲಿ ಹೂವನ್ನು ಖರೀದಿ ಮಾಡಬೇಕು. ಇಲ್ಲವಾದರೇ ರೈತರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತೆ ಎಂದು ಗೀತಾ ಅಳಲು ತೋಡಿಕೊಂಡಿದ್ದಾರೆ.
ಕಳೆದ ವರ್ಷ ಶ್ರಾವಣ, ಗಣೇಶ್ ಹಬ್ಬದ ಸಂದರ್ಭದಲ್ಲಿ ಚೆಂಡು ಹೂವು 100-150 ರೂಪಾಯಿ ಕೆಜಿ ಮಾರಾಟವಾಗಿತ್ತು. ಆದರೆ ಈ ಬಾರಿ 10 ರೂ. ಕೆಜಿಗೂ ಯಾರೂ ಕೇಳುತ್ತಿಲ್ಲ. ಹೀಗಾಗಿ ಹೂವು ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.
ಉತ್ತರ ಕರ್ನಾಟದ ರೈತರ ಹಣೆಬರ ಸರಿ ಇಲ್ಲ ಅಂತ ಕಾಣುತ್ತೆ. ಭೀಕರ ಬರಗಾಲದಿಂದ ರೈತರು ಒದ್ದಾಡುತ್ತಿದ್ದಾರೆ. ಭರ್ಜರಿ ಹೂವು ಬೆಳೆದು ಬೆಲೆ ಇಲ್ಲದೆ ಪರದಾಡುತ್ತಿದ್ದಾರೆ. ಬಾಯಿ ಬಿಟ್ಟರೆ ಸಾಕು ನಮ್ಮದು ರೈತರ ಪರ ಸರ್ಕಾರ ಅನ್ನುವ ಸಚಿವರು ಮತ್ತು ಶಾಸಕರು, ರೈತರ ನೋವು ಮತ್ತು ಸಂಕಷ್ಟಗಳನ್ನು ಕೇಳುತ್ತಿಲ್ಲ. ಹೀಗಾಗಿ ರೈತರು ಸಾಲಸೂಲ ಮಾಡಿ ಬೆಳದ ಬೆಳೆಗೆ ಬೆಲೆ ಸಿಗದೆ ಒದ್ದಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಅನ್ನದಾತರ ನೆರವಿಗೆ ಧಾವಿಸಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:44 am, Sun, 24 September 23