
ಗದಗ, ಸೆಪ್ಟೆಂಬರ್ 9: ಗದಗ (Gadag)ಜಿಲ್ಲೆಯ ರೈತರು ಹಲವಾರು ವರ್ಷಗಳಿಂದ ಅರಣ್ಯ ಅಂಚಿನಲ್ಲಿ ಬಗರಹುಕುಂ ಭೂಮಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ, ಈಗ ಕೈಬಿಟ್ಟು ಹೋಗುವ ಆತಂಕ ಎದುರಾಗಿದೆ. ಹೀಗಾಗಿ ಮಲೆನಾಡಿನ ರೈತರಿಗೆ ನೀಡಿದಂತೆ ನಮಗೂ ಹಕ್ಕುಪತ್ರ ನೀಡಿ ಎಂದು ಬಗರಹುಕುಂ ಸಾಗುವಳಿ ಮಾಡುತ್ತಿರುವ ನೂರಾರು ರೈತರು ಅನಿರ್ಧಿಷ್ಟಾವಧಿ ಅಹೋರಾತ್ರಿ ಹೋರಾಟ ನಡೆಸಿದ್ದಾರೆ. 21 ದಿನಗಳು ಕಳೆದರೂ ಸರ್ಕಾರ ಕ್ಯಾರೇ ಎಂದಿಲ್ಲ. ಹೀಗಾಗಿ ಸೋಮವಾರ ನೂರಾರು ರೈತರು ಗದಗ ನಗರದ ಜಲ್ಲಾಡಳಿತ ಭವನದ ಎದುರು ಹಾದಿಬೀದಿಯಲ್ಲಿ ಭಿಕ್ಷಾಟನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಗದಗ ಜಿಲ್ಲೆಯ ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ, ಗಜೇಂದ್ರಗಡ ತಾಲೂಕಿನ ನೂರಾರು ರೈತರು ಬಗರಹುಕುಂ ಸಾಗುವಳಿಗೆ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸಿದ್ದಾರೆ. ರೈತರ ಹೋರಾಟ ಸೋಮವಾರ 21ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಜಿಲ್ಲಾಡಳಿತ, ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸಿಟ್ಟಿಗೆದ್ದ ರೈತರು ಗದಗ-ಬೆಟಗೇರಿ ಅವಳಿ ನಗರದ ಹಾದಿ ಬೀದಿಯಲ್ಲಿ ಭಿಕ್ಷಾಟನೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದಾರೆ.
ಸರ್ಕಾರದ ಬಳಿ ರೈತರ ಸಮಸ್ಯೆ ಬಗೆಹರಿಸದಷ್ಟು ಹಣವಿಲ್ಲ. ಹೀಗಾಗಿ ರೈತರೆಲ್ಲಾ ಭಿಕ್ಷಾಟನೆ ಮಾಡಿ ಸರ್ಕಾರಕ್ಕೆ ಹಣ ನೀಡುತ್ತಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಗಾಂಧಿ ಸರ್ಕಲ್ನಿಂದ ಜಿಲ್ಲಾಡಳಿತ ಭವನದವರೆಗೂ ರೈತರು ಹಾದಿಬೀದಿಯಲ್ಲಿ ಭಿಕ್ಷಾಟನೆ ಮಾಡಿದರು. ಈ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಕಳೆದ 21 ದಿನಗಳಿಂದ ಹಗಲು, ರಾತ್ರಿ ಹೋರಾಟ ನಡೆಸಿದ್ದಾರೆ. ಚಳಿ, ಮಳೆಯಲ್ಲೂ ಹೋರಾಟ ಬಿಡದ ರೈತರು ಹಕ್ಕುಪತ್ರ ನೀಡಬೇಕು ಎಂದು ಮನವಿ ಮಾಡುತ್ತಲೇ ಇದ್ದಾರೆ. ಆದರೆ, ಅಲ್ಲೇ ಇದ್ದರೂ ಜಿಲ್ಲಾಧಿಕಾರಿ ಸಿಎನ್ ಶ್ರೀಧರ ಹೋರಾಟ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ. ರೈತರ ಸಹನೆ ಪರೀಕ್ಷೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಹಕ್ಕುಪತ್ರ ಸಿಗುವವರೆಗೆ ಹೋರಾಟ ಬಿಡಲ್ಲ ಎಂದು ರೈತ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ. ಈಗಾಗಾಲೇ ಅರೆಬೆತ್ತಲೆ ಸೇರಿದಂತೆ ವಿಭಿನ್ನ ಪ್ರತಿಭಟನೆಗಳ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ. ಹೋರಾಟ ಸ್ವರೂಪ ಮುಂದಿನ ದಿನಗಳಲ್ಲಿ ಉಗ್ರವಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ DJ ಬಂದ್ ಮಾಡಿಸಿದ ಪೊಲೀಸರು, ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?
ಬಗರಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯ ಹಾಗೂ ಆರ್‌ಡಿಪಿಆರ್ ವಿಶ್ವವಿದ್ಯಾಲಯಕ್ಕೆ ಜಮೀನು ನೀಡಿದ ರೈತರಿಗೆ ಪರಿಹಾರ ಬಂದಿಲ್ಲ. ಹೀಗಾಗಿ ಇಷ್ಟು ದಿನ ಮನವಿ ಸಲ್ಲಿಸಿ, ಬೇಸತ್ತ ಅನ್ನದಾತರು ಈವಾಗ ಸರ್ಕಾರದ ವಿರುದ್ಧ ಸಮರ ಸೇರಿದ್ದಾರೆ. ನಮ್ಮ ಬೇಡಿಕೆ ಈಡೇರುವವರಿಗೆ ಅಹೋರಾತ್ರಿ ಧರಣೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅನ್ನದಾತರು ಹೋರಾಟ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕು.