ಗದಗ: ಮಳೆಗೆ ಸೋರುತ್ತಿದೆ ಜಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್: ತೊಯ್ದು ತೊಪ್ಪೆಯಾದ ಬೆಡ್ಗಳು, ಬಾಣಂತಿಯರ ನರಳಾಟ
ಗದಗ ಜಿಮ್ಸ್ ಆಸ್ಪತ್ರೆಯ ಕೊಠಡಿಗಳು ಮಳೆಯಿಂದಾಗಿ ಸೋರುತ್ತಿವೆ. ಇದರಿಂದ ಬಾಣಂತಿಯರು ಮತ್ತು ನವಜಾತ ಶಿಶುಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿನೀರಿನ ವ್ಯವಸ್ಥೆಯ ಅಭಾವವೂ ಉಂಟಾಗಿದೆ. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಗದಗ ಜಿಮ್ಸ್ ಆಸ್ಪತ್ರೆಯ ಅದ್ವಾನ ಬಯಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ, ಸೆಪ್ಟೆಂಬರ್ 04: ಗದಗ ಜಿಮ್ಸ್ ಆಸ್ಪತ್ರೆ (Gyms Hospital) ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಅದ್ವಾನವಾಗಿದೆ. ನಿರಂತರ ಮಳೆಯಿಂದಾಗಿ ಆಸ್ಪತ್ರೆಯ ಕಟ್ಟಡ ಸೋರುತ್ತಿದೆ. ಪರಿಣಾಮ ಬಾಣಂತಿಯರು, ನವಜಾತ ಶಿಶುಗಳಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಬಾಣಂತಿಯರಿಗೆ ಸಿಗಬೇಕಾಗಿರುವ ಕನಿಷ್ಟ ಬಿಸಿ ನೀರಿನ ವ್ಯವಸ್ಥೆಯೂ ಅಲ್ಲಿಲ್ಲ. ಹೀಗಾಗಿ ರೋಗಿಗಳು ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯ ಟಿವಿ9 ರಿಯಾಲಿಟಿ ಚೆಕ್ನಲ್ಲಿ (TV9 Reality Check) ಬಯಲಾಗಿದೆ. ಅವ್ಯವಸ್ಥೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿವಿ9 ರಿಯಾಲಿಟಿ ಚೆಕ್ನಲ್ಲಿ ಗದಗ ಜಿಮ್ಸ್ ಆಸ್ಪತ್ರೆಯ ಅದ್ವಾನ ಬಯಲು
ಟಿವಿ9 ರಿಯಾಲಿಟಿ ಚೆಕ್ನಲ್ಲಿ ಗದಗ ಜಿಮ್ಸ್ ಆಸ್ಪತ್ರೆಯ ಅಧ್ವಾನ ಬಯಲಾಗಿದೆ. ಜಿಮ್ಸ್ ಆಸ್ಪತ್ರೆ ಸದಾ ಎಡವಟ್ಟುಗಳಿಂದ ಸುದ್ದಿಯಲ್ಲಿರುತ್ತದೆ. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಹಳೆಯ ಕಟ್ಟಡದಲ್ಲಿರುವ ಹೆರಿಗೆ ವಿಭಾದಲ್ಲಿ ಕೊಠಡಿಗಳು ಮಳೆಯಿಂದಾಗಿ ಸೋರುತ್ತಿವೆ. ನೆಲ ಮಹಡಿಯ ಒಂದು ಕೊಠಡಿ ಸಂಪೂರ್ಣವಾಗಿ ಸೋರುತ್ತಿದ್ದು, ಬೆಡ್ ಮೇಲೆ ಮಿನಿ ಹೊಂಡವೇ ಸೃಷ್ಟಿಯಾಗಿದೆ.
ಇದನ್ನೂ ಓದಿ: ಗದಗ: ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಎಂಬ ಹೆಗ್ಗಳಿಕೆ ಹೊಂದಿರುವ ಸರ್ಕಾರಿ ಶಾಲೆಗೆ ಇದೆಂಥಾ ದುಸ್ಥಿತಿ
ತೇವಾಂಶದಿಂದಾಗಿ ಕೊಠಡಿ ಸಂಪೂರ್ಣ ಶಿಥಿಲಗೊಂಡಿದೆ. ವಿದ್ಯುತ್ ಸಂಪರ್ಕ ಕೂಡ ಇರುವುದರಿಂದ ಶಾರ್ಟ್ ಸರ್ಕ್ಯೂಟ್ ಆಗುವ ಆತಂಕ ಸೃಷ್ಟಿಯಾಗಿದೆ. ಇನ್ನು ಸೀಲಿಂಗ್ ಫ್ಯಾನ್ ಮೂಲಕವೇ ಹನಿಹನಿ ನೀರು ತೊಟ್ಟಿಕುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಳೆಯಿಂದಾಗಿ ಜಾಸಿ ಸೋರುತ್ತಿರು ಒಂದು ರೂಮ್ನ್ನು ಬಿಟ್ಟು ಪಕ್ಕದ ರೂಮ್ಗೆ ಬಾಣಂತಿಯರನ್ನ ಶಿಫ್ಟ್ ಮಾಡಲಾಗಿದೆ. ಆದರೆ ಅಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಪಕ್ಕದ ರೂಮ್ ಸಂಪೂರ್ಣ ತೇವಗೊಂಡಿರುವುದರಿಂದ ಶೀತವಾತಾವಣ ಸೃಷ್ಟಿಯಾಗಿದೆ. ಹೀಗಾಗಿ ಬಾಣಂತಿಯರು ಹುಷಾರು ತಪ್ಪುತ್ತಿದ್ದಾರೆ.
ಬಿಸಿನೀರಿನ ವ್ಯವಸ್ಥೆಯೂ ಇಲ್ಲ
ಇನ್ನು ಬಾಣಂತಿಯರಿಗೆ ಇಲ್ಲಿ ಬಿಸಿನೀರಿನ ವ್ಯವಸ್ಥೆಯೂ ಇಲ್ಲ. ಹೆರಿಗೆ ನಂತರ ಬೆಚ್ಚಗಿರಬೇಕಿದ್ದ ನವಜಾತ ಶಿಶು, ಬಾಣಂತಿಯರು ತಂಪಾದ ವಾತಾವರಣದಲ್ಲಿ ಗಡಗಡ ನಡಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆರಂಭದಲ್ಲಿ ಬಿಸಿನೀರು ನೀಡಲಾಗುತ್ತಿದ್ದು, ಇದೀಗ ನೀಡುತ್ತಿಲ್ಲ. ಹೀಗಾಗಿ ಬಾಟಲ್ ಹಿಡಿದು ಹೋಟೆಲ್ಗೆ ಹೋಗಿ ಬಿಸಿನೀರು ಕಾಯಿಸಿಕೊಂಡು ಬರಬೇಕಾದ ಪರಿಸ್ಥಿತಿ ಇದೆ. ಒಂದು ಅಥವಾ ಎರಡು ಲೀಟರ್ ಬಿಸಿನೀರಿಗೆ 20 ರೂ. ನೀಡಬೇಕಾಗಿದೆ.
ಅಟೆಂಡರ್ಗಳಿಗೆ ಕುಡಿಯುವುದಕ್ಕೆ ಬಿಲ್ಡಿಂಗ್ನಲ್ಲಿ ನೀರಿನ ವ್ಯವಸ್ಥೆ ಮಾಡಿಲ್ಲ. ಹೊಸ ಆಸ್ಪತ್ರೆ ಆವರಣಕ್ಕೆ ಹೋಗಿ ನೀರು ತುಂಬಿಕೊಂಡು ಬರಬೇಕು ಅನ್ನೋದು ಅಟೆಂಡರ್ಗಳ ಅಳಲು. ಈ ಬಗ್ಗೆ ಸಿಬ್ಬಂದಿಗೆ ಕೇಳಿದರೆ ಹೊಸ ಆಸ್ಪತ್ರೆಗೆ ಶಿಫ್ಟ್ ಮಾಡುವುದಿದೆ, ಹೀಗಾಗಿ ಸ್ವಲ್ಪ ಸಮಸ್ಯೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಮೂಲ ಸೌಕರ್ಯ ಇಲ್ಲದೇ ಬಾಣಂತಿಯರು ಜೊತೆಗೆ ಅಟೆಂಡರ್ಗಳು ಹೇಳಲಾಗದೇ, ಅನುಭವಿಸಲಾಗದೇ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ಬಟನ್ ಒತ್ತಿ ಸಮಸ್ಯೆ ಹೇಳಿ! ಗದಗದಲ್ಲಿ ಪ್ರಭುವಿನೆಡೆಗೆ ಪ್ರಭುತ್ವ, ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆ
ಜಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಚೆನ್ನಾಗಿದೆ ಅಂತಾ ಬರುವ ರೋಗಿಗಳಿಗೆ ಮೂಲ ಸೌಕರ್ಯದ ಕೊರತೆಯಿಂದಾಗಿ ಕಿರಿಕಿರಿಯಾಗುತ್ತಿದೆ. ಕನಿಷ್ಟ ಬಿಸಿನೀರು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಬಾಣಂತಿಯರು ಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳು ಗಮನ ಹರಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:20 am, Thu, 4 September 25



