ಗದಗ: ತೆಪ್ಪದ ಮೂಲಕ ಮರಳು ಲೂಟಿ, ಕಾನೂನು ಸಚಿವರ ತವರಲ್ಲೇ ಮಂಗಮಾಯವಾದ ಕಾನೂನು!

| Updated By: Ganapathi Sharma

Updated on: Jan 06, 2024 | 12:26 PM

ಅಧಿಕೃತವಾಗಿ ಮರಳು ಗುತ್ತಿಗೆ ಪಡೆದ್ರೂ ಕೂಡ ನದಿಯಲ್ಲಿ ನೀರು ಇದ್ದಾಗ ಮರಳು ತೆಗೆಯುವಂತಿಲ್ಲ ಅಂತ ಗಣಿ ಇಲಾಖೆಯ ನಿಯಮವಿದ್ರೂ ದಂಧೆಕೋರರು ಡೋಂಟ್ ಕೇರ್ ಅಂತಿದ್ದಾರೆ. ಸರ್ಕಾರ ನಿಯಮಕ್ಕೂ ಮರಳು ದಂಧೆಕೋರರು ಕಿಮ್ಮತ್ತು ನೀಡ್ತಾ ಇಲ್ಲ.

ಗದಗ: ತೆಪ್ಪದ ಮೂಲಕ ಮರಳು ಲೂಟಿ, ಕಾನೂನು ಸಚಿವರ ತವರಲ್ಲೇ ಮಂಗಮಾಯವಾದ ಕಾನೂನು!
ತುಂಗಭದ್ರಾ ನದಿಯಲ್ಲಿ ಅಪಾಯಕಾರಿ ಅಕ್ರಮ ಮರಳು ದಂಧೆ
Follow us on

ಗದಗ, ಜನವರಿ 6: ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಹೇಳಿ ಎಗ್ಗಿಲ್ಲದೇ ನಡೆಯುತ್ತಿದೆ. ತುಂಗಭದ್ರಾ ನದಿಯಲ್ಲಿ (Tungabhadra River) ಅಪಾಯಕಾರಿ ಅಕ್ರಮ ಮರಳು ದಂಧೆ (Sand Mining) ಎಗ್ಗಿಲ್ಲದೇ ಸಾಗಿದೆ. ತುಂಬಿದ ನದಿಯಲ್ಲಿ ತೆಪ್ಪದ ಮೂಲಕ ಮರಳು ಹೆಕ್ಕಿ ಹೆಕ್ಕಿ ತೆಗೆಯಲಾಗುತ್ತಿದೆ. ಸ್ವಲ್ಪ ಯಾಮಾರಿದ್ರೂ ಸಾಕು ದೊಡ್ಡ ದುರಂತ ಗ್ಯಾರಂಟಿ. ಬಡಕಾರ್ಮಿಕ ಜೀವದ ಜೊತೆ ದಂಧೆಕೋರರ ಚೆಲ್ಲಾಟ ಆಡ್ತಾಯಿದ್ದರೂ ಜಿಲ್ಲಾಡಳಿತ ಮಾತ್ರ ಕುಂಭಕರ್ಣ ನಿದ್ದೆ ಮಾಡ್ತಾ ಇರುವುದು ಗದಗ ಜಿಲ್ಲೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿ ಕಲ್ಲಾಗನೂರ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ತುಂಗಭದ್ರಾ ನದಿಯಲ್ಲಿ ಗುಣಮಟ್ಟದ ಮರಳು ಯಥೇಚ್ಛವಾಗಿದೆ. ಇಲ್ಲಿನ ಮರಳಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಭಾರಿ ಬೇಡಿಕೆ ಇದೆ. ಆದ್ರೆ, ಅಧ್ಯಕ್ಕೆ ತುಂಗಭದ್ರಾ ನದಿಯಲ್ಲಿ ಟೆಂಡರ್ ಪಡೆದ ಎಲ್ಲ ಗುತ್ತಿಗೆದಾರರ ಟೆಂಡರ್ ಅವಧಿ ಮುಗಿದೆ. ಆದ್ರೆ, ಮರಳು ದಂಧೆಕೋರರು ಯಾವುದೇ ಹೆದರಿಕೆ ಇಲ್ಲದೇ ನದಿಯಲ್ಲಿ ಅಕ್ರಮ ಮರಳು ರಾಜಾರೋಷವಾಗಿ ಲೂಟಿ ಮಾಡ್ತ ಇದ್ದಾರೆ. ಅದ್ರಲ್ಲೂ ಕಾರ್ಮಿಕರ ಜೀವ ಪಣಕ್ಕೀಟ್ಟು ಭರ್ಜರಿ ಕಮಾಯಿ ಮಾಡ್ತಾ ಇದ್ದಾರೆ.

ನಿತ್ಯ ಬೆಳಗ್ಗೆ ಕಲ್ಲಾಗನೂರ ಗ್ರಾಮದ ಬಳಿ ಹೋದ್ರೆ ಸಾಕು ಜೀವದ ಹಂಗು ತೊರೆದು ತುಂಬಿದ ನದಿಯಲ್ಲಿ ಮರಳು ತೆಗೆಯುತ್ತಿರೋ ಕಾರ್ಮಿಕರು ಕರಾಮತ್ತು ಕಣ್ಣಿಗೆ ಕಾಣುತ್ತೆ. ಒಂದೊಂದು ತೆಪ್ಪ ಹಾಗೂ ದೊಡ್ಡ ಪ್ರಮಾಣದ ಕಬ್ಬಿಣದ ಬುಟ್ಟಿಯಲ್ಲಿ ನಾಲ್ಕಾರು ಜನ ಕಾರ್ಮಿಕರು ಹೆಕ್ಕಿ ತೆಗೆಯುತ್ತಾರೆ. ಈ ವೇಳೆ ಸ್ವಲ್ಪ ಹೆಚ್ಚುಕಮ್ಮಿಯಾದ್ರೆ ಸಾಕು ದೊಡ್ಡ ದುರಂತ ಸಂಭವಿಸುವುದರಲ್ಲಿ ಸಂದೇಹವೇ ಇಲ್ಲ. ಈ ಅಕ್ರಮ ಶಿರಹಟ್ಟಿ ತಶೀಲ್ದಾರ, ಗಣಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ತಡೆಯುವ ಗೋಜಿಗೆ ಹೋಗಿಲ್ಲ ಅಂತ ಜನರು ಕಿಡಿಕಾರಿದ್ದಾರೆ.

ಅಧಿಕೃತವಾಗಿ ಮರಳು ಗುತ್ತಿಗೆ ಪಡೆದ್ರೂ ಕೂಡ ನದಿಯಲ್ಲಿ ನೀರು ಇದ್ದಾಗ ಮರಳು ತೆಗೆಯುವಂತಿಲ್ಲ ಅಂತ ಗಣಿ ಇಲಾಖೆಯ ನಿಯಮವಿದ್ರೂ ದಂಧೆಕೋರರು ಡೋಂಟ್ ಕೇರ್ ಅಂತಿದ್ದಾರೆ. ಸರ್ಕಾರ ನಿಯಮಕ್ಕೂ ಮರಳು ದಂಧೆಕೋರರು ಕಿಮ್ಮತ್ತು ನೀಡ್ತಾ ಇಲ್ಲ. ಕಾನೂನು ಕಾಪಾಡಬೇಕಾದ ಅಧಿಕಾರಿಗಳು ಎಂಜಲು ಕಾಸಿಗೆ ಜೊಲ್ಲು ಸುರಿಸಿಕೊಂಡು ಸುಮ್ನೆ ಇದ್ದಾರೆ ಅಂತ ಗದಗ ಜನರು ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ. ನದಿಯಲ್ಲಿ ನಿತ್ಯವೂ 20ಕ್ಕೂ ಅಧಿಕ ಟಿಪ್ಪರ್ ಮರಳು ಸಾಗಾಟ ಮಾಡಲಾಗುತ್ತಿದೆ. ಹೀಗಾಗಿ ಈ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಲಕ್ಷ ಲಕ್ಷ ತೆರಿಗೆ ವಂಚನೆ ಆಗ್ತಾಯಿದೆ ಅಂತ ಜನರು ಆರೋಪಿಸಿದ್ದಾರೆ. ಹಾಡಹಗಲೇ ರಾಜಾರೋಷವಾಗಿ ನದಿಯಲ್ಲಿ ಮರಳು ಸಂಗ್ರಹಿಸುತ್ತಿದ್ದರೂ ಅಧಿಕಾರಿಗಳು ಸುಮ್ನೆ ಇರೋದು ನೋಡಿದರೂ, ಅಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ಶ್ರೀರಾಮನಿಗೂ ಮುದ್ರಣ ಕಾಶಿ ಗದಗ ಜಿಲ್ಲೆಗೂ ಇದೆ ಅವಿನಾಭಾವ ಸಂಬಂಧ! ಇಲ್ಲಿದೆ ಪವಿತ್ರ ಕ್ಷೇತ್ರ, ಆ ಸ್ಥಳ ಮಹಾತ್ಮೆ ಏನು?

ಈ ಅಕ್ರಮ ಮರಳು ಗಣಿಗಾರಿಕೆ ಕುರಿತು ಗದಗ ಎಸ್ಪಿ ಬಿಎಸ್ ನೇಮಗೌಡ ಹಾಗೂ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯಕ್ ಅವ್ರನ್ನು ಕೇಳಿದ್ರೆ, ‘ಟಿವಿ9’ ವರದಿ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಮ್ಮ ಗಮನಕ್ಕೆ ಬಂದಿದೆ. ತಕ್ಷಣ ಶಿರಹಟ್ಟಿ ತಹಶೀಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಎಂಥಾ ಪ್ರಭಾವಿ ಆಗಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮದಲ್ಲಿ ಅಧಿಕಾರಿಗಳ ಭಾಗಿ ಬಗ್ಗೆಯೂ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ಅಪಾಯಕಾರಿ ಮರಳು ದಂಧೆ ಬಗ್ಗೆ ಸ್ಥಳೀಯರು ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದಾಗ ‘ಟಿವಿ9’ ಕ್ಯಾಮರಾ ನೋಡುತ್ತಿದ್ದಂತೆ ನದಿ ತೀರಕ್ಕೆ ಬಂದ ಕಾರ್ಮಿಕರು ಎಸ್ಕೇಪ್ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ