ಗದಗ, ಅಕ್ಟೋಬರ್ 31: ಈರುಳ್ಳಿಗೆ ಈಗ ಬಂಪರ್ ಬೆಲೆ (Onion Prices) ಸಿಕ್ತಾ ಇದೆ. ಆದರೆ ಅನ್ನದಾತನ ನೋವು, ಸಂಕಷ್ಟ ಮಾತ್ರ ಇನ್ನೂ ನಿಂತಿಲ್ಲ. ಬಂಪರ್ ಬೆಲೆ ಸಿಕ್ಕ ಖುಷಿ ಇದ್ರೂ ನಗುವ ಹಾಗಿಲ್ಲ. ಹೀಗಾಗಿ ಈರುಳ್ಳಿಗೆ (Onion) ಬಂಪರ್ ರೇಟ್ ಇದ್ರೂ ರೈತರು (Farmers) ಕಣ್ಣೀರು ಹಾಕುವಂತಾಗಿದೆ. ಹೌದು, ಒಂದು ಎಕರೆಗೆ 40-50 ಪಾಕೇಟ್ ಈರುಳ್ಳಿ ಸಿಗುತ್ತಿದ್ದಲ್ಲಿ ಈ ಬಾರಿ ರೈತರಿಗೆ ಸಿಕ್ಕಿದ್ದು ಕೇವಲ 10-15 ಪಾಕೇಟ್ ಮಾತ್ರ. ಹೀಗಾಗಿ ಈರುಳ್ಳಿಗೆ ಖರ್ಚು ಮಾಡಿದಷ್ಟು ಹಣ ಕೂಡ ರೈತನಿಗೆ ದಕ್ಕಿಲ್ಲ.
ಗ್ರಾಹಕರ ಕಣ್ಣಲ್ಲಿ ಮಾತ್ರವಲ್ಲ, ಈಗ ರೈತರ ಕಣ್ಣಲ್ಲೂ ಈರುಳ್ಳಿ ನೀರು ತರಿಸುತ್ತಿದೆ. ಹೌದು, ಬೆಲೆ ಹೆಚ್ಚಳದ ಹೊರತಾಗಿಯೂ ರೈತರು ಬೇಸರದಿಂದ ಇರುವುದು ಗದಗ ಎಪಿಎಂಸಿ ಆವರಣದಲ್ಲಿ ಕಂಡುಬಂತು. ಮಾರ್ಕೆಟ್ ನಲ್ಲಿ 60 ರಿಂದ 70 ರೂಪಾಯಿ ಕೆಜಿ ಈರುಳ್ಳಿ ಮಾರಾಟ ಆಗ್ತಾಯಿದೆ. ಇದು ಗ್ರಾಹಕರ ಕಣ್ಣಲ್ಲೂ ನೀರು ತರಿಸುತ್ತಿದೆ. ಆದ್ರೆ, ಬಂಪರ್ ಬೆಲೆ ಇದ್ರೂ ಕೂಡ ಕಷ್ಟಪಟ್ಟು ಈರುಳ್ಳಿ ಬೆಳೆದ ರೈತನ ಕಣ್ಣಲ್ಲೂ ನೀರು ತರಿಸುತ್ತಿದೆ. ಗದಗ ಎಪಿಎಎಂಸಿಯಲ್ಲಿ ಇವತ್ತು ರೈತರ ಈರುಳ್ಳಿಗೆ ಬಂಪರ್ ರೇಟ್ ಸಿಕ್ಕಿದೆ. ಕ್ವಿಂಟಾಲ್ ಈರುಳ್ಳಿಗೆ 4 ರಿಂದ 5 ಸಾವಿರ ರೂಪಾಯಿಗೆ ಹರಾಜಾಗಿದೆ. ಆದ್ರೂ ರೈತರ ಮುಖದಲ್ಲಿ ಸಂತಸ ಇಲ್ಲ. ಕಾರಣ ಒಂದು ಎಕರೆಗೆ ಕನಿಷ್ಠ 40 ರಿಂದ 50 ಪಾಕೇಟ್ ಬರಬೇಕಿದ್ದ ಈರುಳ್ಳಿ ಭೀಕರ ಬರಕ್ಕೆ ಕೇವಲ 10 ರಿಂದ 15 ಪಾಕೇಟ್ ಮಾತ್ರ ಬಂದಿದೆ. ಈ ಕುರಿತು ಅಂತ ರೈತರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ 5 ಸಾವಿರ ರೇಟ್ ಇದ್ರೂ ನಮಗೆ ಲಾಭವಿಲ್ಲ ಅಂತ ಗೋಳಾಡುತ್ತಿದ್ದಾರೆ. ನಾವು ಬಿತ್ತನೆ ಮಾಡಿದ್ದ, ಕೂಲಿ ಹಾಗೂ ಮಾರ್ಕೆಟ್ ಗೆ ತರುವ ಖರ್ಚು ವೆಚ್ಚವೂ ಬರಲ್ಲ ಅಂತ ರೈತರಾದ ಮಾಧವರೆಡ್ಡಿ, ಉಮೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷ ಅತಿಯಾದ ಮಳೆಯಿಂದ ಭೂಮಿಯಲ್ಲೇ ಈರುಳ್ಳಿ ಕೊಳೆತು ಹಾಳಾಗಿ ಹೋಗಿದೆ. ಹೀಗಾಗಿ ಈ ವರ್ಷವಾದ್ರೂ ಉತ್ತಮ ಇಳುವರಿ ಬರುತ್ತೆ ಅಂದ್ಕೊಂಡ ರೈತರಿಗೆ ಮಳೆರಾಯ ಕೈಕೊಟ್ಟಿದ್ದಾನೆ. ಭೀಕರ ಬರದಿಂದ ಇಳುವರಿ ಸಂಪೂರ್ಣ ಕುಸಿದು ಹೋಗಿದೆ. ಎಕರೆಗೆ 40-50 ಚೀಲ್ ಬೆಳೆಯುತ್ತಿದ್ದ ರೈತರು ಈಗ 10-15 ಚೀಲ್ ಬೆಳೆದು ಕಂಗಾಲಾಗಿದ್ದಾರೆ. ಈ ಈರುಳ್ಳಿ ಈಗ ಗ್ರಾಹಕರ ಕಣ್ಣಲ್ಲಿ ಮಾತ್ರ ನೀರು ತರಿಸಿಲ್ಲ. ಅನ್ನದಾತರ ಕಣ್ಣಲ್ಲೂ ನೀರು ತರಿಸಿದೆ. ಬೆಲೆ ಹೆಚ್ಚಾಗಿದೆ ಅಂತ ಎಲ್ಲರೂ ಬೊಬ್ಬೆ ಹೊಡೀತಾರೆ. ಆದ್ರೆ, ರೈತನ ಕಷ್ಟ ಕೇಳೋ ಯಾರೂ ಅಂತ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಜವಾಗ್ಲೂ ರೈತರ ಬಗ್ಗೆ ಕಾಳಜಿ ಇದ್ರೆ, ಸರ್ಕಾರಕ್ಕೆ ಜನ ಬೇಕಿದ್ರೆ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡ್ಲಿ. ಗ್ರಾಹಕರಿಗೆ ಎಷ್ಟು ಬೇಕಾದಷ್ಟು ರೇಟ್ ನಲ್ಲಿ ಮಾರಾಟ ಮಾಡ್ಲಿ ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಗಗನಕ್ಕೇರಿದ ಈರುಳ್ಳಿ ಬೆಲೆ, ರೈತರಿಗೆ ದೊರೆಯುತ್ತಿಲ್ಲ ಪ್ರಯೋಜನ: ಮಧ್ಯವರ್ತಿಗಳು, ವ್ಯಾಪಾರಿಗಳಿಗಷ್ಟೇ ಲಾಭ
ಈ ಮಧ್ಯೆ, ಈರುಳ್ಳಿ ಆವಕದಲ್ಲಿ ಭಾರಿ ಕುಸಿತವಾಗಿದೆ. ಪ್ರತಿ ವರ್ಷ ಈ ಸಂದರ್ಭದಲ್ಲಿ 20 ಸಾವಿರಕ್ಕೂ ಅಧಿಕ ಪಾಕೇಟ್ ಮಾರ್ಕೆಟ್ ಈರುಳ್ಳಿ ಬರ್ತಿತ್ತು. ಆದ್ರೆ, ಈ ವರ್ಷ ಕೇವಲ 600-800 ಪಾಕೇಟ್ ಮಾತ್ರ ಬರ್ತಾಯಿದೆ. ಈರುಳ್ಳಿ ಉಳುವರಿಯಲ್ಲಿ ಭಾರಿ ಕುಸಿತವಾಗಿದೆ ಅಂತ ವರ್ತಕ ಐಬಿ ದಾವಲ್ ಹೇಳಿದ್ದಾರೆ.
ಬಂಪರ್ ಬೆಲೆ ಇದ್ರೂ ರೈತರ ಹೊಲದಲ್ಲಿ ಭರ್ಜರಿ ಈರುಳ್ಳಿ ಫಸಲು ಇಲ್ಲ. ಭರ್ಜರಿ ಬೆಳೆ ಬಂದಾಗ ರೇಟ್ ಪಾತಾಳಕ್ಕೆ ಕುಸಿದಿರುತ್ತೆ. ಈ ವರ್ಷ ಮಳೆ ಇಲ್ಲದೇ ಈರುಳ್ಳಿ ಇಳುವರಿ ಬಂದಿಲ್ಲ. ಭರ್ಜರಿ ರೇಟ್ ಇದೆ. ಹೀಗಾಗಿ ಸರ್ಕಾರವೇ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುವಂತೆ ಮಾಡಬೇಕು ಅಂತ ರೈತರು ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:09 pm, Tue, 31 October 23