ಗದಗ: ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಡಾ. ಶಂಭು ಬಳಿಗಾರ, ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರು: ಸಮಗ್ರ ಅಧ್ಯಯನ ಎಂಬ ಮಹಾಪ್ರಬಂಧವನ್ನು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿ ಪಿಎಚ್.ಡಿ. ಪದವಿಯನ್ನು ಪಡೆದವರು. ಸುದೀರ್ಘ ಕಾಲದ ಮೌಖಿಕ ಪರಂಪರೆಯ ಉಳಿವಿಗಾಗಿ ಶ್ರಮಿಸಿದ ಸೇವೆಯನ್ನು ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.
ಗದಗ, ಅಕ್ಟೋಬರ್ 31: ತಾಯಿಯ ಜಾನಪದ ಹಾಡು, ತಂದೆಯ ಬಯಲಾಟ ಕಲೆ ಬದುಕು. ಕುಟುಂಬದ ಕೃಷಿ ಕಾಯಕ ಕಾರಣಕ್ಕೆ ಜಾನಪದ ತೊಟ್ಟಿಲಿನಲ್ಲಿ ಬೆಳೆದೆ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ (Dr Shambu Baligar) ಅವ್ರಿಗೆ ಕರ್ನಾಟಕ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಲಭಿಸಿದೆ. ಜಾನಪದ ಕುಟುಂಬದಲ್ಲೇ ಬೆಳೆದ ಶಂಭು ಬಳಿಗಾರ ಜಾನಪದ ಅರಿತುಕೊಳ್ಳುವ ಪ್ರಶ್ನೆ ಬರಲಿಲ್ಲ. ರಕ್ತಗತವಾಗಿ ಅವಿತುಕೊಂಡಿತ್ತು. ವೃತ್ತಿ ಬದುಕಿನ ಜೊತೆಗೆ ಜಾನಪದ ಸೇವೆ ಮೈಗೂಡಿಸಿಕೊಂಡೆ ಅನ್ನೋ ಮಾತು ಸದಾ ಹೇಳ್ತಾಯಿದ್ರು.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದ ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. (ಕನ್ನಡ), ಹೈದ್ರಾಬಾದ್ ಉಸ್ಮಾನಿಯಾ ವಿ.ವಿ.ಯ. ಎಂ.ಫಿಲ್ ಪದವೀಧರರು ಪಡೆದ ಇವರು ಕನ್ನಡ ನೆಲದ ದೇಶಿ ಸಂಸ್ಕೃತಿ ಮತ್ತು ಸಾಹಿತ್ಯವನ್ನು ನಾಲ್ಕುವರೆ ದಶಕಗಳ ಕಾಲ ದೇಶ- ವಿದೇಶಗಳನ್ನು ಸುತ್ತಿ ಬರಹದ ಮೂಲಕ,ವಿಶೇಷವಾಗಿ ಉಪನ್ಯಾಸಗಳ ಮೂಲಕ, ಜನಪದ ಹಾಡುಗಾರಿಕೆಯ ಮೂಲಕ ಪ್ರಸಾರ ಮಾಡುವದರಲ್ಲಿ ಶ್ರಮ ಪಟ್ಟಿದ್ದಾರೆ. ಜಾನಪದ ಜೀವನ ಹಾಗೂ ಸಾಹಿತ್ಯದಲ್ಲಿ ಅಡಗಿದ ಮಾನವೀಯ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.
ಸುದೀರ್ಘ ಕಾಲದ ಮೌಖಿಕ ಪರಂಪರೆಯ ಉಳಿವಿಗಾಗಿ ಶ್ರಮಿಸಿದ ಇವರ ಸೇವೆಯನ್ನು ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಅವರು ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರು: ಸಮಗ್ರ ಅಧ್ಯಯನ ಎಂಬ ಮಹಾಪ್ರಬಂಧವನ್ನು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿ ಪಿಎಚ್.ಡಿ. ಪದವಿಯನ್ನು ಪಡೆದವರು. ಬಾಗಲಕೋಟೆ ಜಿಲ್ಲೆಯ ಇಲಕಲ್ಲಿನ ಶ್ರೀ ವಿಜಯ ಮಹಾಂತೇಶ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸುದೀರ್ಘ 37 ವರ್ಷಗಳ ಕಾಲ ಉಪನ್ಯಾಸಕರಾಗಿ, ಸಹಪ್ರಾಧ್ಯಾಪಕರಾಗಿ,ಪ್ರಾಚಾರ್ಯರಾಗಿ ಅನುಪಮ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಇವರು ಜಾನಪದವನ್ನು ಅತಿಯಾಗಿ ಪ್ರೀತಿಸಿದವರು ಮತ್ತು ಹಲವಾರು ಧ್ವನಿ ಸುರಳಿಗಳ ಮೂಲಕ ನಾಡಿನಲ್ಲೆಲ್ಲಾ ಹೆಸರಾದವರು. ಅದ್ಭುತ ಭಾಷಣ ಕಲೆಯನ್ನು ಮೈಗೂಡಿಸಿಕೊಂಡಿರುವ ಇವರು ಸಾವಿರಾರು ವೈವಿಧ್ಯಮಯ ವೇದಿಕೆಗಳ ಮೂಲಕ ಜಾನಪದ ಜೀವನ ಮೌಲ್ಯಗಳನ್ನು ಜನಮಾನಸದಲ್ಲಿ ಬಿತ್ತಿದವರು ನೆಲಮೂಲ ಸಂಸ್ಕೃತಿಯನ್ನು ಪ್ರಸಾರ ಮಾಡುತ್ತ ದೇಶ-ವಿದೇಶಗಳನ್ನು ಸುತ್ತಿದ ಹೆಗ್ಗಳಿಕೆ ಇವರಿಗಿದೆ.
ಇದನ್ನೂ ಓದಿ: ಜಾನಪದ ಕಲಾವಿದೆ ಚೌಡಮ್ಮಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಕನ್ನಡ ನಾಡು – ನುಡಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಿರುವುದಕ್ಕೆ ಅತೀವ ಸಂತೋಷವಾಗಿದೆ ಅಂತ ಡಾ. ಶಂಭು ಬಳಿಗಾರ ಹೇಳಿದ್ದಾರೆ.
ಪ್ರಶಸ್ತಿ-ಧ್ವನಿ ಸುರುಳಿ
ಹೂವಾ ತಂದವರು, ಬಿಚ್ಚಿ ಬಿದ್ದಾವ ಬಿಳಿಜೋಳ, ಜೋಳದ ರಾಶಿ ದೊಡ್ಡನಗೌಡರು, ಎಸ್.ಆರ್.ಕಂಠಿಯವರು, ಹುನಗುಂದ ತಾಲೂಕಾ ದರ್ಶನ, ಗುರುಕಿರಣ, ನಡುಕನ್ನಡ ಕಾವ್ಯ ಸಂಚಯ, ಜನಪದ ಸಾಹಿತ್ಯ ಹಾಗೂ ಬೈಲಾಟಗಳ ಸಂಗ್ರಹ ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ನುಚ್ಚಿನ ಮಲ್ಲಯ್ಯ, ಹಾಲುಂಡ ತವರು, ಕೆರೆಗೆ ಹಾರ, ತೊಗರಿ ತಿಪ್ಪ, ಗೋದಿ ಹುಗ್ಗಿ ಗಂಗಯ್ಯ, ಪತಿವೃತಾ ನೀಲಮ್ಮ, ಸೋಮರಾಯ ಭೀಮರಾಯ, ಮದುವೆ ಹಾಡುಗಳು, ಮಹಾಂತ ಜೋಳಿಗೆ ಸೇರಿದಂತೆ ವಿವಿಧ ಧ್ವನಿ ಸುರುಳಿಗಳು ಜನಮಾನಸದಲ್ಲಿ ಇಂದಿಗೂ ಪ್ರಸಿದ್ಧಿ ಪಡೆದಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ