ಗದಗ : ಜಿಲ್ಲೆಯ ಶಿರಹಟ್ಟಿ ತಾಲೂಕಿನ ವಡವಿ ಗ್ರಾಮದಲ್ಲಿ ರಕ್ಕಸ ಮಳೆಯಿಂದಾಗಿ 30ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಸರ್ಕಾರ ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ರೂ, ಭಾಗಶಃ ಬಿದ್ದ ಮನೆಗಳಿಗೆ 3 ಲಕ್ಷ ರೂ, ಅಲ್ಪಸ್ವಲ್ಪ ಬಿದ್ದ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಅದರಂತೆ ಗದಗ ಜಿಲ್ಲಾಡಳಿತಕ್ಕೆ ಕೋಟ್ಯಾಂತರ ಹಣ ಕೂಡ ಸರ್ಕಾರ ನೀಡಿದೆ. ಆದರೆ ದೇವರು ವರ ಕೊಟ್ಟರು ಪೂಜಾರಿ ಕೊಡುವುದಿಲ್ಲ ಅನ್ನುವ ಸ್ಥಿತಿ ಗದಗ ಜಿಲ್ಲಾಡಳಿತದ್ದಾಗಿದೆ.
ಎರಡು ತಿಂಗಳಾದರೂ ಒಂದು ಕುಟುಂಬಕ್ಕೂ ಕೂಡಾ ಪರಿಹಾರ ಕೊಟ್ಟಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿರಹಟ್ಟಿ ತಹಶೀಲ್ದಾರ್ ಕಚೇರಿಗೆ ಹತ್ತಾರು ಬಾರಿ ಅಲೆದಾಡಿದರು ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಬಡ ಜನರ ಜೀವದ ಜೊತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಪರಿಹಾರಕ್ಕೆ ಅಲೆದಾಡಿ ಬೇಸತ್ತ ಕೆಲ ಜನರು ಕುಸಿದ ಮನೆಗಳಲ್ಲಿಯೇ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ಮಾಡುತ್ತಿದ್ದಾರೆ. ಸತ್ತರೆ ಇಲ್ಲಿಯೇ ಸಾಯುತ್ತೇವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಕೆಲ ಜನರು ಬೇರೆ ಕಡೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಮನೆ ಬಿದ್ದು ಎರಡು ತಿಂಗಳಾದರೂ ಪರಿಹಾರ ನೀಡುತ್ತಿಲ್ಲ ಎಂದು ವೃದ್ಧೆ ಜಯಮ್ಮ ಟಿವಿ9 ಎದುರು ಕಣ್ಣೀರು ಹಾಕಿ ಗೋಳು ತೋಡಿಕೊಂಡಿದ್ದಾಳೆ. ಅನಾರೋಗ್ಯ ಪೀಡಿತ ಪತಿಯೊಂದಿಗೆ ಜೀವನ ಮಾಡುವ ವೃದ್ಧೆಯ ಕಣ್ಣೀರು ಕಥೆ ಮನಕಲುಕವಂತಿದೆ.
ಇನ್ನು ಇದೇ ಗ್ರಾಮದ ಪತಿ ಕಳೆದುಕೊಂಡ ಪತ್ನಿ ಶಾಂತವ್ವ ಬಿದ್ದ ಮನೆಯಲ್ಲೇ ಬದುಕು ಸಾಗಿಸುತ್ತಿದ್ದಾಳೆ. ಕೆಲಸಕ್ಕೆ ಹೊದರೆ ನಾಲ್ಕು ಮಕ್ಕಳ ಜೊತೆ ನನ್ನ ಹೊಟ್ಟೆ ತುಂಬಬೇಕು. ಹೀಗಾಗಿ ಪರಿಹಾರಕ್ಕೆ ಅಲೆದಾಡಿದರೆ ಎಲ್ಲರೂ ಉಪವಾಸ ಮಲಗಬೇಕು ಎನ್ನುತ್ತಾರೆ ಶಾಂತವ್ವ, ಅವರು ಹೇಳುವ ಮಾತು ಎಂಥಹ ಕಟುಕರ ಹೃದಯವೂ ಕರಗಿ ನೀರಾಗುತ್ತದೆ. ಆದರೆ ಗದಗ ಜಿಲ್ಲೆಯ ಅಧಿಕಾರಿಗಳ, ಜನಪ್ರತಿನಿಧಿಗಳ ಕಲ್ಲು ಹೃದಯಗಳು ಮಾತ್ರ ಕರಗುತ್ತಿಲ್ಲ. ಬಿದ್ದ ಮನೆಯ ಮೂಲೆಯಲ್ಲಿ ಮಕ್ಕಳೊಂದಿಗೆ ವಿಧವೆಯ ಪರದಾಟ ಹೇಳತೀರದು. ಇನ್ನು ವಡವಿ ಗ್ರಾಮದಲ್ಲಿ 30ಕ್ಕೂ ಅಧಿಕ ಕುಟುಂಬಗಳು ಸೂರು ಕಳೆದುಕೊಂಡು ಗೋಳಾಡುತ್ತಿದ್ದಾರೆ. ಸರ್ಕಾರ ಕೋಟಿ ಪರಿಹಾರ ಬಿಡುಗಡೆ ಮಾಡಿದ್ದರು. ಗದಗ ಜಿಲ್ಲೆಯಲ್ಲಿ ಬಡವರಿಗೆ ಮಾತ್ರ ನಯಾಪೈಸೆ ಪರಿಹಾರ ಮುಟ್ಟಿಲ್ಲ ಎಂದು ಸಂತ್ರಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಗದಗ: ಕ್ಯಾನ್ಸರ್ ರೋಗಿಗೆ ಕೂದಲು ದಾನ ಮಾಡಿ ಹೊಸ ರೀತಿಯಲ್ಲಿ ಜನ್ಮದಿನ ಆಚರಿಸಿಕೊಂಡ ಯುವತಿ
ಹತ್ತಾರು ಬಾರಿ ತಹಶೀಲ್ದಾರ ಕಚೇರಿಗೆ ಅಲೆದಾಡಿದರು ಇದುವರೆಗೆ ಒಂದು ಮನೆಗೂ ಪರಿಹಾರ ನೀಡಿಲ್ಲ. ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಗೂ ಈ ಕುರಿತು ಹೇಳಿದರು ಡೋಂಟ್ ಕೇರ್ ಅಂತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಸರ್ಕಾರ ಪರಿಹಾರ ಬಿಡುಗಡೆ ಮಾಡಿದರು ಯಾಕೇ ಬಡ ಜನರಿಗೆ ತಲುಪಿಲ್ಲ ಅನ್ನುವ ಬಗ್ಗೆ ತನಿಖೆ ಮಾಡಿಸಬೇಕಿದೆ. ಮನೆಗಳ ಪರಿಹಾರದಲ್ಲಿ ಭಾರಿ ಭ್ರಷ್ಟಾಚಾರ ವಾಸನೆ ಗದಗ ಜಿಲ್ಲೆಯಲ್ಲಿ ಹಬ್ಬುತ್ತಿದೆ. ಹೀಗಾಗಿ ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಬೇಕಿದೆ. ಬಡ ಜನ್ರಿಗೆ ಪರಿಹಾರ ನೀಡುವ ಮೂಲಕ ಅಪಾಯದಲ್ಲಿ ಬದುಕುತ್ತಿರುವ ಬಡ ಜನರ ಜೀವ ಉಳಿಸಬೇಕು ಅನ್ನುವುದು ಜಿಲ್ಲೆಯ ಜನರ ಒತ್ತಾಯ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:32 pm, Mon, 21 November 22