ಗದಗ: ಪುಟಾಣಿಯ ಹಠಕ್ಕೆ ಮನಸೋತು ಮುಸ್ಲಿಂ ವ್ಯಕ್ತಿ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ

ದೇವರು, ಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿ ಸಮಾಜದಲ್ಲಿ ಅಶಾಂತಿಗೆ ಕಾರಣರಾಗುವವರೇ ಹೆಚ್ಚಿರುವ ಈ ಕಾಲದಲ್ಲಿ ಗದಗ ಜಿಲ್ಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಪುಟಾಣಿ ಮಗನ ಆಸೆ, ಪ್ರೀತಿ, ಹಠಕ್ಕೆ ಕಟ್ಟುಬಿದ್ದು ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ‘ದೇವರೊಬ್ಬನೇ ನಾಮ ಹಲವು’ ಎಂಬ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ.

ಗದಗ: ಪುಟಾಣಿಯ ಹಠಕ್ಕೆ ಮನಸೋತು ಮುಸ್ಲಿಂ ವ್ಯಕ್ತಿ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ
ಗಣೇಶ ಮೂರ್ತಿ ಜತೆ ಮುಸ್ತಪಾ ಹಾಗೂ ಮಕ್ಕಳು
Edited By:

Updated on: Sep 10, 2024 | 9:46 AM

ಗದಗ, ಸೆಪ್ಟೆಂಬರ್ 10: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ಲಿಂ ಸಮುದಾಯದ ಮುಸ್ತಾಪ್ ಮಾಬುಸಾಬ್ ಕೋಲ್ಕಾರ ಎಂಬ ವ್ಯಕ್ತಿ ಗಣೇಶ ಚತುರ್ಥಿ ದಿನ ಹಿಂದೂ ಸಂಪ್ರದಾಯದಂತೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ್ದಾರೆ. ಮುಸ್ತಾಪ್ ಮತ್ತು ಯಾಸ್ಮಿನಾ ಬಾನು ದಂಪತಿಗಳಿಗೆ ಐದು ಜನ ಮಕ್ಕಳು. ಅವರ ಕೊನೆಯ ಮಗ 3 ವರ್ಷದ ಹಜರತಲಿಗೆ ಗಣೇಶ ದೇವರ ಮೂರ್ತಿಯೆಂದರೆ ಬಹಳ ಪ್ರೀತಿ. ದೇವರು-ಧರ್ಮ, ಜಾತಿ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಅರಾಜಕತೆ, ಧರ್ಮಯುದ್ಧದ ಬಗ್ಗೆ ಏನೂ ಅರಿಯದ ಪುಟಾಣಿ ತಾನು ಗಣೇಶನನ್ನು ಮನೆಗೆ ತೆಗೆದುಕೊಂಡು ಹೋಗಬೇಕು, ಎಲ್ಲರಂತೆ ಪೂಜಿಸಬೇಕು, ಪಟಾಕಿ ಹೊಡೆಯಬೇಕು, ಕುಣಿದು ಕುಪ್ಪಳಿಸಬೇಕೆಂಬ ಹಂಬಲ. ಈ ಬಗ್ಗೆ ತಂದೆ-ತಾಯಿ ಹತ್ತಿರ ಕೇಳಿ ಅತ್ತು ಕರೆದು ಹಠ ಮಾಡಿದ್ದರೂ ತಂದೆ ಹೇಗೋ ಸಮಾಧಾನ ಮಾಡಿ ಮಾತು ಮರೆಸಿದ್ದರು.

ಆದರೆ, ಗಣೇಶ ಚತುರ್ಥಿ ದಿನ ಎಲ್ಲರೂ ಮನೆಗೆ ಗಣೇಶ ಮೂರ್ತಿ ತರುವುದನ್ನು ಗಮನಿಸಿದ ಹಜರತಲಿ, ತನ್ನ ಅಣ್ಣನೊಂದಿಗೆ ಗಣೇಶಮೂರ್ತಿ ಮಾರಾಟ ಮಾಡುವಲ್ಲಿಗೆ ಹೋಗಿ ಗಣೇಶನ ಮೂರ್ತಿಯನ್ನು ಮನೆಗೆ ತಂದಿದ್ದಾನೆ. ಇದನ್ನು ಕಂಡ ತಂದೆ-ತಾಯಿ ಒಂದು ಕ್ಷಣ ಮೌನವಾಗಿದ್ದಾರೆ. ಗ್ರಾಮೀಣ ಭಾಗದ ಪರಿಸರ. ಜಾತಿ ಧರ್ಮದ ಹಂಗಿಲ್ಲದೇ ಎಲ್ಲರೂಂದಿಗೆ ಸಹೋದರತ್ವ ಭಾವನೆಯಿಂದ ಬದುಕುವುದನ್ನು ಅರಿತ ತಂದೆ-ತಾಯಿಗಳು ಮಗನ ಬಗ್ಗೆ ಒಂದಷ್ಟೂ ಬೇಸರ ಮಾಡಿಕೊಳ್ಳದೇ ಗಣೇಶನ ಮೂರ್ತಿಯಿಂದ ಶ್ರದ್ಧಾ ಭಕ್ತಿಯಿಂದ ಬರ ಮಾಡಿಕೊಂಡು ಮನೆಯಲ್ಲಿ ಪ್ರತಿಷ್ಠಾಪಿಸಿ ಹಿಂದೂ ಸಂಪ್ರದಾಯದಂತೆ ಪೂಜಿಸಿದ್ದಾರೆ.

ದೇವರು ಮನೆಗೆ ಬಂದಂತೆ!

ಮಗ ಹಜರತಲಿಗೆ ಗಣೇಶನ ಮೂರ್ತಿಯೆಂದರೆ ತುಂಬಾ ಇಷ್ಟ. ಅಂಗನವಾಡಿಯಲ್ಲೂ ರಾಷ್ಟೀಯ ಹಬ್ಬದ ದಿನ ಹಿಂದೂ ದೇವರ ವೇಷಭೂಷಣ ತೊಡಿಸಿದ್ದೇವೆ. ಮಕ್ಕಳು ದೇವರ ಸಮಾನ ಎನ್ನುತ್ತಾರೆ. ದೇವರೇ ಮನೆಗೆ ಬಂದಂತಾಗಿದ್ದು ಶ್ರದ್ಧೆ, ಭಕ್ತಿ, ಸಂಭ್ರಮದಿಂದ ಗಣೇಶನ ಮೂರ್ತಿಯನ್ನು ಪೂಜಿಸಿದ್ದೇವೆ. ಇನ್ನು ಪ್ರತಿವರ್ಷವೂ ನಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತೇವೆ ಎಂದು ಹಜರತಲಿ ಪೋಷಕರಾದ ಮುಸ್ತಪಾ- ಯಾಸ್ಮಿನಾಬಾನು ಹೇಳಿದ್ದಾರೆ.

ಇದನ್ನೂ ಓದಿ: ಮೋದಕ ಪ್ರಿಯ ಗಣೇಶನಿಗೆ ಮಾಂಸದ ನೈವೇದ್ಯ: ಗದಗಿನಲ್ಲಿ ವಿಶಿಷ್ಟ ಆಚರಣೆ

ಗ್ರಾಮಸ್ಥರ ಮೆಚ್ಚುಗೆ

ದೇವರ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕದಡುವವರ ನಡುವೆ ಮುಸ್ಲಿಂ ಧರ್ಮದವರಾದರೂ ತಮ್ಮ ಮಗನ ಆಸೆಯಂತೆ ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಈಗಲೂ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಎಲ್ಲ ಜಾತಿ, ಧರ್ಮದವರು ಪರಸ್ಪರ ಸ್ನೇಹ, ಸಹೋದರತ್ವದೊಂದಿಗೆ ಸಂಭ್ರಮಿಸುತ್ತಾರೆ ಎಂದು ಗ್ರಾಮಸ್ಥ ಈರಣ್ಣ ಶೀರನಳ್ಳಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ