ಗದಗ: ಮೂರು ವರ್ಷ ಹಳೆಯ ಪ್ರಕರಣದ ದ್ವೇಷ; ಅಪ್ರಾಪ್ತೆಯ ಮೇಲೆ ನಾಲ್ವರಿಂದ ದೌರ್ಜನ್ಯ ಆರೋಪ
ಅದು ಮೂರು ವರ್ಷಗಳ ಹಿಂದಿನ ಹಳೇ ಕೇಸ್. ಯುವತಿ ಮೇಲೆ ನಡೆದಿದ್ದ ಅತ್ಯಾಚಾರ, ಬ್ಲಾಕ್ ಮೇಲ್ ಪ್ರಕರಣ. ಇದೇ ಕೇಸ್ ಈಗ ದ್ವೇಷ ಬೆಳಸಿ ಸೇಡು ತೀರಿಸಿಕೊಳ್ಳುವ ಮಟ್ಟಿಗೆ ಬೆಳೆದು ನಿಂತಿದೆ. ಅಂದು ಅಕ್ಕನ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿಯೇ ಇಂದು ತಂಗಿಯ ಮೇಲೆಯೂ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.

ಗದಗ, ಫೆ.10: ಜಿಲ್ಲೆಯ ಮುಂಡರಗಿ(Mundaragi) ಪೊಲೀಸ್ ಠಾಣೆ ವ್ಯಾಪ್ತಿಯ ಅಂತಾರಾಷ್ಟ್ರೀಯ ಯೋಗಪಟು ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ದುರುಳರು ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಮುಂಡರಗಿ ನಿವಾಸಿಗಳಾದ ಮೌಲಾಹುಸೇನ್ ಬಾಬುಸಾಬ್ ಕರಣಿ ಹಾಗೂ ಈತನ ಸಹೋದರ ಖಾಜಾಹುಸೇನ್ ಬಾಬುಸಾಬ್ ಕರಣಿ ಇನ್ನೂ ಇಬ್ಬರು ಸಹಚರರಿಂದ ದಾಳಿ ನಡೆದಿದೆ ಎಂದು ಬಾಲಕಿ ಆರೋಪ ಮಾಡಿದ್ದಾಳೆ.
ಪ್ರಕರಣ ದಾಖಲಾದರೂ ಆರೋಪಿಗಳನ್ನ ಬಂಧಿಸಿದ ಪೊಲೀಸರು
2023 ನವೆಂಬರ್ 20 ರಂದು ಮಧ್ಯಾಹ್ನ ಬಾಲಕಿ ಒಬ್ಬಳೇ ಮನೆಯಲ್ಲಿ ಇದ್ದಾಗ ಪ್ರಮುಖ ಆರೋಪಿ ಮೌಲಾಹುಸೇನ್ ಬಾಬುಸಾಬ್ ಕರಣಿ ಹಾಗೂ ಆತನ ಸಹೋದರ ಮತ್ತು ಇನ್ನಿಬ್ಬರು ಸಹಚರರು ಸೇರಿ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ ಎಸಗಿ ಮೂರ್ಚೆ ಬಂದ ಬಳಿಕ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಬಗ್ಗೆ ಮುಂಡರಗಿ ಪೊಲೀಸರಿಗೆ ದೂರು ದಾಖಲಾದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ. ಮುಂಡರಗಿ ಠಾಣೆಯ ಸಿಪಿಐ ಮಂಜುನಾಥ ಕುಸುಗಲ್ ಹಾಗೂ ಪಿಎಸ್ಐ ಸುಮಾ ಗೊರ್ಬಾಳ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು ಮೂಡಾ ಆಯುಕ್ತರ ವಿರುದ್ಧ ಮಹಿಳಾ ಉದ್ಯೋಗಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು
ಮೂರು ವರ್ಷದ ಹಿಂದಿನ ಪ್ರಕರಣದ ದ್ವೇಷ
ಅಂದಹಾಗೆ ಮೂರು ವರ್ಷಗಳ ಹಿಂದೆ ಆರೋಪಿ ಮೌಲಾಹುಸೇನ್ ಅಪ್ರಾಪ್ತೆ ಬಾಲಕಿಯ ಅಕ್ಕನನ್ನು ಅತ್ಯಾಚಾರ ಮಾಡಿದ್ದಲ್ಲದೆ, ಅತ್ಯಾಚಾರದ ವಿಡಿಯೋ ತುಣುಕುಗಳನ್ನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಹಲವು ಬಾರಿ ಹಣಕ್ಕೂ ಬೇಡಿಕೆ ಇಟ್ಟು ಆಕೆಯನ್ನ ಮನಬಂದಂತೆ ಬಳಸಿಕೊಂಡಿದ್ದಾನಂತೆ. ಆತನ ಕಿರುಕುಳಕ್ಕೆ ಬೇಸತ್ತು ಸೇತುವೆ ಮೇಲಿಂದ ಮೂರ್ಚೆ ಬಂದು ಬಿದ್ದು ಗಾಯಗೊಂಡು ಆಸ್ಪತ್ರೆಗೆ ಅಲೆದಾಟ ನಡೆಸಿದ್ದಾಳೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಮೂರು ತಿಂಗಳು ಜೈಲು ವಾಸ ಅನುಭವಿಸಿ ಬೇಲ್ ಮೇಲೆ ಹೊರಗಡೆ ಬಂದಿದ್ದಾನೆ. ಆದರೆ, ಇನ್ನೂ ಕೇಸ್ ವಿಚಾರಣೆ ಹಂತದಲ್ಲಿದೆ.
ಈ ಹಿನ್ನಲೆ ಆತ ಕೇಸ್ ವಾಪಸ್ ಪಡೆಯಲು ಒತ್ತಡ ಹಾಕುತ್ತಿದ್ದಾರಂತೆ. ಹೀಗಾಗಿ ಕೇಸ್ ಸಾಕ್ಷಿ ನಾಶಕ್ಕೆ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ಥೆ ಬಾಲಕಿ ತಾಯಿ ಆರೋಪಿಸಿದ್ದಾಳೆ. ಈ ಕುರಿತು ಡಿಸಿ, ಎಸ್ಪಿ, ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ನ್ಯಾಯ ಸಿಕ್ಕಿಲ್ಲ ಎಂದು ಬಾಲಕಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೇಸ್ ಸಂಬಂಧ ಮುಂಡರಗಿ ಪೊಲೀಸರು ಬಿ. ರಿಪೋರ್ಟ್ ಹಾಕಲು ಮುಂದಾಗಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹೇಳ್ತಿರೋದು ಸುಳ್ಳು ಎಂದು ಪೋಲೀಸರೇ ಬಾಲಕಿಗೆ ಬೆದರಿಕೆ ಹಾಕಿದ್ದಾರಂತೆ. ಜೊತೆಗೆ ನಮ್ಮ ಯೋಗ ಗುರುಗಳನ್ನೂ ಸಹ ಠಾಣೆಗೆ ಕರೆಸಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ನ್ಯಾಯಕ್ಕಾಗಿ ಎಸ್ಪಿ ಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಸೇರಿ ಇಡೀ ಸರ್ಕಾರಕ್ಕೂ ಸಹ ಅಂಗಲಾಚಿ ಬೇಡಿಕೊಂಡಿದ್ದಾರೆ. ಆದರೂ, ಅವರಿಗೆ ಯಾರೂ ನ್ಯಾಯ ಕೊಡಿಸುವ ಭರವಸೆ ನೀಡಿಲ್ಲ. ಹೀಗಾಗಿ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



