ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ ಕಾಂಗ್ರೆಸ್ ಹೋರಾಟ ಮಾಡಿ ಅಧಿಕಾರದ ಗದ್ದುಗೆ ಏರಿದ್ದು ಎಲ್ಲರಿಗೂ ತಿಳಿದ ವಿಷಯವೆ. ಆದ್ರೆ, ಆ ಜಿಲ್ಲೆಯ ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ (corruption) ನಡೆದ್ರೂ ಸರ್ಕಾರ, ಜಿಲ್ಲಾಡಳಿತ ಡೋಂಟ್ ಕೇರ್ ಅಂತಿದೆ. ಹೌದು ಸರ್ಕಾರದ ಹಣವನ್ನು ಅಧಿಕಾರಿಗಳು ಬೇಕಾಬಿಟ್ಟಿ ಲೂಟಿ ಮಾಡ್ತಾ ಇದ್ದಾರೆ. ನಗರಸಭೆಯ ಹಗರಣಗಳು ಬಗೆದಷ್ಟು ಹೊರಬರುತ್ತಿವೆ. ಹೌದು ಅಧಿಕಾರಿಗಳು, ಅಧ್ಯಕ್ಷರಿಗೆ ಕಾರ್ ಬಾಡಿಗೆಯ ವಿಷಯದಲ್ಲಿ ತಿಂಗಳಿಗೆ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ. ಇದು ದಾಖಲೆ ಸಮೇತ ಬಯಲಾಗಿದೆ. ಈ ವಿಷಯ ಗೊತ್ತಿದ್ದರೂ ಜಿಲ್ಲಾಡಳಿತ ಮೌನವಾಗಿದೆ. ಹೀಗಾಗಿ ಅವಳಿ ನಗರದ ಜನ್ರು ಜಿಲ್ಲಾಡಳಿತ ಯಾಕೆ ಮೌನವಾಗಿದೆ. ಜಿಲ್ಲಾಡಳಿತಕ್ಕೂ ಪಾಲು ಇದೆಯಾ? ಅಂತ ಪ್ರಶ್ನೆ ಮಾಡ್ತಾ ಇದ್ದಾರೆ.
ಗದಗ-ಬೆಟಗೇರಿ ನಗರಸಭೆಯಲ್ಲಿ (Gadag-Betageri City Municipal Council) ಹೇಳೋರೋ ಕೇಳೋರು ಇಲ್ಲದಂತಾಗಿದೆ. ಇಲ್ಲಿ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಸಾರ್ವಜನಿಕರ ಹಣ ಇಲ್ಲಿ ಬೇಕಾಬಿಟ್ಟಿ ಲೂಟಿ ನಡೆದಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಧಿಕಾರಿಗಳು ಸರ್ಕಾರ ಹಣ ಲೂಟಿಗೆ ಇಳಿದಿದ್ದಾರೆ. ವರ್ಷಗಳಿಂದಲೂ ಕಾರ್ ಬಾಡಿಗೆ ಹೆಸರಿನಲ್ಲಿ ಅಧಿಕಾರಿಗಳು ಲಕ್ಷಲಕ್ಷ ಲೂಟಿ ಮಾಡಿದ್ದಾರೆ. ಆಯುಕ್ತರು, ಅಧ್ಯಕ್ಷರ ಇಬ್ಬರ ಕಾರ್ ಬಿಲ್ ಸೇರಿ ಪ್ರತಿ ತಿಂಗಳು ಲಕ್ಷ ಲಕ್ಷ ಖರ್ಚು ಹಾಕ್ತಾಯಿದ್ದಾರೆ.
ಅಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಸರ್ಕಾರಿ ಕೆಲಸಗಳಿಗೆ ಕಾರ್ ಬಾಡಿಗೆ ಪಡೆಯಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ನಿಯಮ ಪ್ರಕಾರ ಟೆಂಡರ್ ಕಾಲ್ ಮಾಡಬೇಕು. ಹಳದಿ ಬೋರ್ಡ್ ಕಾರನ್ನೇ ಬಾಡಿಗೆ ಪಡೆಯಬೇಕು. ಆದ್ರೆ, ಗದಗ ನಗರಸಭೆ ಹಿಂದಿನ ಆಯುಕ್ತರು ಸರ್ಕಾರದ ಎಲ್ಲ ನಿಯಮಗಳು ಗಾಳಿಗೆ ತೂರಿ ಕೋಟೆಷನ್ ಮೇಲೆ ಕಾರ್ ಬಾಡಿಗೆ ಪಡೆದು ಹಣ ಲೂಟಿ ಮಾಡಿದ್ದಾರೆ. ಹಳದಿ ಬೋರ್ಡ್ ಅಲ್ಲ ವೈಟ್ ಬೋರ್ಡ್ ಕಾರನ್ನೇ ಪಡೆದು ಸರ್ಕಾರದ ನಿಯಗಳನ್ನು ಗಾಳಿಗೆ ತೂರಿದ್ದಾರೆ. ಪ್ರತಿ ತಿಂಗಳು ಒಂದು ಕಾರ್ ಗೆ 40 ರಿಂದ 70 ಸಾವಿರದ ವರೆಗೂ ಖರ್ಚು ಹಾಕಿ ಕೆ ಕೆ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿ ಬಿಲ್ ಹಾಕಿದ್ದಾರೆ.
ಇದು ಕೇವಲ ಆರೋಪ ಅಲ್ಲ. ನಿಯಮ ಉಲ್ಲಂಘಿಸಿ ಹಣ ಖರ್ಚು ಹಾಕಿದ್ದು, ದಾಖಲೆ ಸಮೇತ ಬಯಲಾಗಿದೆ. ತಮ್ಮ ಸ್ವಂತ ಕಾರ್ ಗಳಲ್ಲೇ ಸುತ್ತಾಡಿ ಸರ್ಕಾರದಿಂದ ಹಣ ಪಡೆಯುತ್ತಿದ್ದಾರೆ ಅನ್ನೋ ಮಾತು ಕೇಳಿ ಬರ್ತಾಯಿದೆ. ನಗರಸಭೆಯಲ್ಲಿ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿದ್ರೂ ಜಿಲ್ಲಾಡಳಿತ ಯಾಕೇ ಮೌನವಿದೆ. ಜಿಲ್ಲಾಡಳಿತಕ್ಕೂ ಈ ಹಣದಲ್ಲಿ ಪಾಲಿದೆಯಾ ಅಂತ ಅವಳಿ ನಗರದ ಜನ್ರು ಪ್ರಶ್ನಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕ್ಷೇತ್ರದ ಶಾಸಕ ಎಚ್ ಕೆ ಪಾಟೀಲ್ ಅವ್ರು ನಗರಸಭೆಯಲ್ಲಿ ನಡೆಯುತ್ತಿರೋ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಅಂತ ಹೋರಾಟಗಾರ ಚಂದ್ರಕಾಂತ ಚವಾಣ ಒತ್ತಾಯಿಸಿದ್ದಾರೆ.
ಹಣ ಲೂಟಿ ಮಾತ್ರ ನಡೆದಿಲ್ಲ. ಇಲ್ಲಿ ಅಧಿಕಾರ ದುರುಪಯೋಗ ಕೂಡ ದಾಖಲೆ ಸಮೇತ ಕಂಡು ಬಂದಿದೆ. ನಗರಸಭೆ ಆಯುಕ್ತರು, ಅಧ್ಯಕ್ಷರ ವ್ಯಾಪ್ತಿ ಗದಗ-ಬೆಟಗೇರಿ ಅವಳಿ ನಗರ ಮಾತ್ರ. ಬೆಳಗಾವಿ, ಬೆಂಗಳೂರ ಸರ್ಕಾರಿ ಸಭೆ ಇದ್ರೆ ವಾಹನ ತೆಗೆದುಕೊಂಡು ಹೋಗಲು ಅವಕಾಶ ಇದೆ. ಆದ್ರೆ, ಇಲ್ಲಿ ಅಧ್ಯಕ್ಷರು ಪದೇ ಪದೇ ಕೊಪ್ಪಳ ಜಿಲ್ಲೆ ಹಾಗೂ ಬೇರೆ ಬೇರೆ ತಾಲೂಕುಗಳಲ್ಲಿ ಸರ್ಕಾರ ನೀಡಿದ ಕಾರ್ ನಲ್ಲಿ ಸುತ್ತಾಡಿದ್ದಾರೆ. ಅಧ್ಯಕ್ಷರು ಹಾಗೂ ಆಯುಕ್ತರು ದುರಪಯೋಗ ಮಾಡಿಕೊಂಡಿದ್ದು, ಲಾಗ್ ಬುಕ್ ನಲ್ಲಿ ದಾಖಲೆಯೇ ಹೇಳುತ್ತಿದೆ.
ಸರ್ಕಾರದ ದುಡ್ಡಿನಲ್ಲಿ ಆಯುಕ್ತರು, ಅಧ್ಯಕ್ಷರು ಮಸ್ತ್ ಮಜಾ ಮಾಡಿದ್ದಾರೆ ಅಂತ ಜನ್ರು ಕಿಡಿಕಾರಿದ್ದಾರೆ. ಇಷ್ಟೇಲ್ಲಾ ಭ್ರಷ್ಟಾಚಾರ, ದುರಪಯೋಗ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು, ಜಿಲ್ಲಾಧಿಕಾರಿ ವೈಶಾಲಿ ಅವ್ರ ಗಮನಕ್ಕೆ ತಂದ್ರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಅಂತ ಅವಳಿ ನಗರದ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಗಳತೆಯಲ್ಲಿ ಇರೋ ನಗರಸಭೆಯಲ್ಲಿ ಸರ್ಕಾರದ ಹಣ ಬೇಕಾಬಿಟ್ಟಿ ಲೂಟಿ ಆಗ್ತಾಯಿದ್ರೂ ಜಿಲ್ಲಾಡಳಿತ ಮೌನವಾಗಿದೆ ಅಂದ್ರೆ ಏನ್ ಅರ್ಥ ಅಂತ ಕಿಡಿಕಾರಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ವೈಶಾಲಿ ಮೇಡಂ ಅವ್ರನ್ನು ಕೇಳಿದ್ರೆ, ನನ್ನ ಗಮನಕ್ಕೆ ಈಗ ಬಂದಿದೆ. ಸರ್ಕಾರಿ ನಿಯಮ ಉಲ್ಲಂಘನೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ
ಭ್ರಷ್ಟಾಚಾರ ಸಹಿಸಲ್ಲ. ಅದಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಅವಕಾಶವಿಲ್ಲ ಅಂತ ಹೇಳ್ತಿರೋ ಸರ್ಕಾರದಲ್ಲೇ ಇಷ್ಟೊಂದು ಭ್ರಷ್ಟಾಚಾರ ಮಾಡಿ ಸರ್ಕಾರದ ಹಣ ಲೂಟಿ ಆಗ್ತಾಯಿದ್ರೂ ಸರ್ಕಾರ, ಜಿಲ್ಲಾಡಳಿತ ಮೌನವಾಗಿದೆ. ಕಾರ್ ಬಾಡಿಗೆ ವಿಷಯದಲ್ಲಿ ಸಂಪೂರ್ಣ ಸರ್ಕಾರ ನಿಯಮ ಗಾಳಿಗೆ ತೂರಲಾಗಿದೆ. ಇನ್ನಾದ್ರೂ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ರು ಎಚ್ಚೆತ್ತುಕೊಂಡು ನಗರಸಭೆಯಲ್ಲಿ ನಡೆಯುತ್ತಿರೋ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತಾರಾ ಕಾದುನೋಡಬೇಕಿದೆ…
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Sat, 9 September 23