ಮದುವೆಯಾದ ಒಂದು ವರ್ಷದೊಳಗೆ ವಿಚ್ಚೇದನ ಕೋರಬಾರದೆಂಬ ನಿಯಮ ಕಡ್ಡಾಯವಲ್ಲ: ಹೈಕೋರ್ಟ್
ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾದ ಒಂದು ವರ್ಷದ 'ಕೂಲಿಂಗ್ ಆಫ್' ಅವಧಿಯಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸುವಂತಿಲ್ಲ. ಈ ಕಾರಣ ನೀಡಿ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಕೋರಿದ್ದ ಅರ್ಜಿ ವಜಾಗೊಳಿಸಿತ್ತು. ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ದಂಪತಿಗೆ ವಿಚ್ಚೇದನ ಕೋರಲು ಯುವ ಜೋಡಿಯೊಂದಕ್ಕೆ ಅನುಮತಿ ದೊರಕಿದೆ. ಅಲ್ಲದೆ, ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಕೋರಿದ ಅರ್ಜಿಯನ್ನು ಪರಿಗಣಿಸಬಹುದೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಬೆಂಗಳೂರು, ಸೆ.8: ಮದುವೆಯಾದ ಒಂದು ವರ್ಷದ ಒಳಗೇ ವಿಚ್ಚೇದನ ಕೋರಲು ಯುವ ಜೋಡಿಯೊಂದಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ಅನುಮತಿ ನೀಡಿದೆ. ಅಲ್ಲದೆ, ವಿವಾಹವಾದ ಒಂದು ವರ್ಷದ ಅವಧಿಯಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಬಾರದೆಂಬ ನಿಯಮ ಕಡ್ಡಾಯವೇನಲ್ಲ ಎಂದು ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ವಿಶೇಷ ವಿವಾಹ ಕಾಯ್ದೆಯಡಿ ಈ ದಂಪತಿ ಕಳೆದ ನವೆಂಬರ್ 2022 ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಮೂರೇ ತಿಂಗಳಿಗೆ ದಾಂಪತ್ಯದಲ್ಲಿ ಸಮಸ್ಯೆ ತಲೆದೋರಿ ವಿವಾಹ ವಿಚ್ಚೇದನ ಕೋರಿ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಆದರೆ ಕಾಯ್ದೆಯಡಿ ವಿವಾಹವಾದ ಒಂದು ವರ್ಷದ ‘ಕೂಲಿಂಗ್ ಆಫ್’ ಅವಧಿಯಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸುವಂತಿಲ್ಲ.
ಈ ಕಾರಣ ನೀಡಿ ಕೌಟುಂಬಿಕ ನ್ಯಾಯಾಲಯವು ವಿಚ್ಚೇದನ ಕೋರಿ ದಂಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ವಿವಾಹವಾದ ಒಂದು ವರ್ಷದ ಅವಧಿಯಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಬಾರದೆಂಬ ನಿಯಮ ಕಡ್ಡಾಯವೇನಲ್ಲ ಎಂದು ಹೇಳಿದೆ.
ದಂಪತಿ ಹೊಂದಾಣಿಕೆ ಮಾಡಿಕೊಳ್ಳಲೆಂದು ಈ ಒಂದು ವರ್ಷದ ಅವಧಿ ನೀಡಲಾಗಿದ್ದರೂ ಅದು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿ ಇದ್ದರೆ ವಿಚ್ಚೇದನದ ಅರ್ಜಿ ಪರಿಗಣಿಸಬಹುದು. ಈ ಪ್ರಕರಣದಲ್ಲಿ ಇಬ್ಬರೂ ಇಂಜಿನಿಯರಿಂಗ್ ಪದವೀಧರ ಜೋಡಿ ಪರಸ್ಪರ ಹೊಂದಾಣಿಕೆಗೆ ಪ್ರಯತ್ನಿಸಿದ್ದಾರೆ. ಅದು ಸಾಧ್ಯವೇ ಇಲ್ಲವೆಂದಾಗ ಯಾವುದೇ ಆರೋಪ ಪ್ರತ್ಯಾರೋಪ ಮಾಡದೇ ಪರಸ್ಪರ ಒಪ್ಪಿಗೆಯಿಂದ ವಿಚ್ಚೇದನ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ವೃತ್ತಿಯ ಮೇಲೆ ಗಮನ ಹರಿಸಲು ನಿರ್ಧರಿಸಿದ್ದಾರೆ. ದಂಪತಿ ತಮ್ಮ ಮನಸ್ಸು ಬದಲಿಸಿ ಒಂದಾಗಬಹುದೆಂದು ವಿವಾಹವಾದ ಒಂದು ವರ್ಷದೊಳಗೆ ವಿಚ್ಚೇದನ ಕೋರಲು ಇರುವ ನಿರ್ಬಂಧವಿದೆ. ಆದರೆ ಎಲ್ಲಾ ಪ್ರರಣಗಳಿಗೂ ಇದು ಅನ್ವಯಿಸುವುದಿಲ್ಲ ಎಂದು ಪೀಠ ಹೇಳಿದೆ.
ದಂಪತಿಯಲ್ಲಿ ಹೊಂದಾಣಿಕೆ ಸಾಧ್ಯವೇ ಇಲ್ಲವೆಂದಾದರೆ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಕೋರಿದ ಅರ್ಜಿಯನ್ನು ಪರಿಗಣಿಸಬಹುದೆಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ದಂಪತಿಯ ಸಮ್ಮತಿಯ ವಿಚ್ಚೇದನ ಅರ್ಜಿಯನ್ನು ಮರುಪರಿಶೀಲಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ