Mysore Dasara 2023: ದಸರಾ ಆನೆ, ಮಾವುತರಿಗೆ 2.02 ಕೋಟಿ ಮೊತ್ತದ ವಿಮೆ, ತಲಾ ಎಷ್ಟೆಷ್ಟು?
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ. ಈ ಜಂಬೂ ಸವಾರಿಯಲ್ಲಿ ಕ್ಯಾಪ್ಟೆನ್ ಅಭಿಮನ್ಯು ಸೇರಿದಂತೆ 14 ಆನೆಗಳು ಭಾಗಿಯಾಗಲಿವೆ. ಒಟ್ಟು 10 ಗಂಡು ಆನೆ 04 ಹೆಣ್ಣು ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. ಈ ಆನೆಗಳಿಗೆ ಅರಣ್ಯ ಇಲಾಖೆ ವಿಮೆ ಮಾಡಿಸಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ (Mysore Dasara 2023) ಒಂದೇ ತಿಂಗಳು ಬಾಕಿ ಇದೆ. ಈಗಾಗಲೆ ಅರಮನೆ ನಗರಿಯಲ್ಲಿ ಸಿದ್ದತೆ ಆರಂಭವಾಗಿದೆ. ದಸರಾದ (Dasara) ಕೇಂದ್ರಬಿಂದುವಾದ ಗಜಪಡೆ (Gajapade) ಮೈಸೂರಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ದೊರೆತಿದೆ. ಇಂದಿನಿಂದ ತಾಲೀಮು ಆರಂಭವಾಗಿದೆ. ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ. ಈ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಸೇರಿದಂತೆ 14 ಆನೆಗಳು ಭಾಗಿಯಾಗಲಿವೆ. ಒಟ್ಟು 10 ಗಂಡು ಆನೆ 04 ಹೆಣ್ಣು ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. ಈ ಆನೆಗಳಿಗೆ ಅರಣ್ಯ ಇಲಾಖೆ ವಿಮೆ ಮಾಡಿಸಿದೆ.
ಹೌದು ಗಂಡು ಆನೆಗಳಿಗೆ ತಲಾ 5 ಲಕ್ಷ ರೂ. ವಿಮೆ ಮತ್ತು ಹೆಣ್ಣು ಆನೆಗಳಿಗೆ ತಲಾ 4.5 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಇನ್ನು ಮಾವುತ ಕಾವಾಡಿ ಉಸ್ತುವಾರಿ ಸಿಬ್ಬಂದಿಗೆ ತಲಾ 2 ಲಕ್ಷ ರೂ., ಜೀವಹಾನಿಗೆ 50 ಲಕ್ಷ ವಿಮೆ ನೀಡಲಾಗುತ್ತದೆ. ಆನೆಗಳು ಮೈಸೂರು ಅರಮನೆಯಿಂದ ತಮ್ಮ ತಮ್ಮ ಶಿಬಿರಗಳಿಗೆ ತೆರಳುವವರೆಗೂ ಅಂದರೆ ಈ ವಿಮೆ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ ಅಂತ್ಯದವರೆಗೂ ಚಾಲ್ತಿಯಲ್ಲಿರುತ್ತದೆ. ಒಟ್ಟು 10 ಗಂಡು ಆನೆ 04 ಹೆಣ್ಣು ಆನೆಗಳಿದ್ದು, ಮಾವುತ ಕಾವಾಡಿ ಸೇರಿ 42 ಸಿಬ್ಬಂದಿಗೆ ಒಟ್ಟು 2.02 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ.
ಇದನ್ನೂ ಓದಿ: ಮೈಸೂರು ದಸರಾ 2023: ಅರಮನೆಗೆ ಎಂಟ್ರಿ ಕೊಟ್ಟ ಗಜಪಡೆಗೆ ಅದ್ಧೂರಿ ಸ್ವಾಗತ, ಮೆರವಣಿಗೆ; ಫೋಟೋಗಳಲ್ಲಿ ನೋಡಿ
ಇಂದಿನಿಂದ ಗಜಪಡೆಗಳಿಗೆ ತಾಲೀಮು ಆರಂಭವಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಗಜಪಡೆ ಹೆಜ್ಜೆ ಹಾಕುತ್ತಿವೆ. ಮೈಸೂರು ಬಲರಾಮ ದ್ವಾರದಿಂದ ತಾಲೀಮು ಆರಂಭವಾಗಿದ್ದಯ, ಕೋಟೆ ಆಂಜನೇಯ ದೇಗುಲ ಅರಮನೆ ವೃತ್ತ, ನಗರ ಬಸ್ ನಿಲ್ದಾಣ ಕೆ ಆರ್ ವೃತ್ತದ ಮೂಲಕ ಆನೆಗಳು ಸಾಗಿವೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗಳಾದ ಕಂಜನ್, ಮಹೇಂದ್ರ, ವಿಜಯ, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ ತಾಲೀಮಿನಲ್ಲಿ ಭಾಗಿಯಾಗಿವೆ.
ಈ ಬಾರಿ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳು
- ಕ್ಯಾಪ್ಟನ್ ಅಭಿಮನ್ಯು 57ವರ್ಷ, ಮತ್ತಿಗೋಡು ಆನೆ ಶಿಬಿರ, 274ಮೀ ಎತ್ತರ, 4700ರಿಂದ 5000 ಕೆ.ಜಿ.
- ವಿಜಯ 63 ವರ್ಷ, ದುಬಾರೆ ಆನೆ ಶಿಬಿರ, 244ಮೀ ಎತ್ತರ, 3250 ರಿಂದ 3500 ಕೆ.ಜಿ.
- ವರಲಕ್ಷ್ಮಿ 67 ವರ್ಷ, ಭೀಮನಕಟ್ಟೆ ಆನೆ ಶಿಬಿರ, 236ಮೀ ಎತ್ತರ, 3300ರಿಂದ 3500 ಕೆ.ಜಿ.
- ಅರ್ಜುನ 65 ವರ್ಷ, ಬಳ್ಳೆ ಆನೆ ಶಿಬಿರ, 288ಮೀ ಎತ್ತರ, 5800 ರಿಂದ 6000 ಕೆ.ಜಿ.
- ಧನಂಜಯ 43 ವರ್ಷ, ದುಬಾರೆ ಆನೆ ಶಿಬಿರ, 280ಮೀ ಎತ್ತರ, 4000 ರಿಂದ 4200 ಕೆ.ಜಿ.
- ಮಹೇಂದ್ರ 40 ವರ್ಷ, ಮತ್ತಿಗೋಡು ಆನೆ ಶಿಬಿರ, 275ಮೀ ಎತ್ತರ, 3800ರಿಂದ 4000 ಕೆ.ಜಿ.
- ಭೀಮ 23ವರ್ಷ, ಮತ್ತಿಗೋಡು ಆನೆ ಶಿಬಿರ, 285ಮೀ ಎತ್ತರ, 3800 ರಿಂದ 4000 ಕೆ.ಜಿ
- ಗೋಪಿ 41ವರ್ಷ, ದುಬಾರೆ ಆನೆ ಶಿಬಿರ 286ಮೀ ಎತ್ತರ, 3700 ರಿಂದ 3800 ಕೆ.ಜಿ.
- ಪ್ರಶಾಂತ್ 50 ವರ್ಷ, ದುಬಾರೆ ಆನೆ ಶಿಬಿರ 300 ಮೀ ಎತ್ತರ, 4000 ರಿಂದ 4200 ಕೆ.ಜಿ.
- ಸುಗ್ರೀವ 41 ವರ್ಷ, ದುಬಾರೆ ಆನೆ ಶಿಬಿರ, 277ಮೀ ಎತ್ತರ, 4000 ರಿಂದ 4100 ಕೆ.ಜಿ.
- ಕಂಜನ್ 24 ವರ್ಷ, ದುಬಾರೆ ಆನೆ ಶಿಬಿರ, 262ಮೀ ಎತ್ತರ, 3700 ರಿಂದ 3900 ಕೆ.ಜಿ.
- ರೋಹಿತ್ 21 ವರ್ಷ, ರಾಮಾಪುರ ಆನೆ ಶಿಬಿರ, 270ಮೀ ಎತ್ತರ, 2900 ರಿಂದ 3000 ಕೆ.ಜಿ.
- ಲಕ್ಷ್ಮಿ 52ವರ್ಷ, ದೊಡ್ಡಹರವೆ ಆನೆ ಶಿಬಿರ, 252ಮೀ ಎತ್ತರ, 3000 ರಿಂದ 3200 ಕೆ.ಜಿ.
- ಹಿರಣ್ಯ 46 ವರ್ಷ, ರಾಮಾಪುರ ಆನೆ ಶಿಬಿರ, 250ಮೀ ಎತ್ತರ, 3000 ರಿಂದ 3200 ಕೆ.ಜಿ
ಅರ್ಜುನ ಆನೆ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದೆ. ರೋಹಿತ್ ಅತ್ಯಂತ್ಯ ಕಿರಿಯ ವಯಸ್ಸಿನ ಆನೆ ಹಾಗೂ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ. ಕಂಜನ್, ಲಕ್ಷ್ಮಿ, ಹಿರಣ್ಯ ಆನೆಗಳಿಗೂ ಇದು ಮೊದಲ ದಸರಾ ಮಹೋತ್ಸವವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:35 am, Fri, 8 September 23