ಡೇಂಜರ್ ಝೂನ್ ನಲ್ಲಿ ಮನೆ ನಿರ್ಮಾಣ: ಸ್ಲಂ ನಿವಾಸಿಗಳನ್ನ ರಾಜಕಾಲುವೆಗೆ ಹಾಕಲು ಕುತಂತ್ರ, ಏನಿದು ರಾಜ ಕಾಲುವೆ ಗುಳಂ ಕಥೆ ಅಂತೀರಾ ಈ ಸ್ಟೋರಿ ನೋಡಿ.

ಕಾಲುವೆ ಒತ್ತುವರಿ‌ ಮಾಡುವುದು ಕಾನೂನು ಬಾಹಿರ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ‌ ಮೇಯ್ದಂತೆ ಆಗಿದೆ. ಹೌದು ಸರ್ಕಾರಿ ರಾಜಕಾಲುವೆ ರಕ್ಷಣೆ ಮಾಡಬೇಕಿದ್ದ ನಗರಸಭೆಯೇ ಹಣಕ್ಕಾಗಿ ಮಾರಿಕೊಳ್ಳುತ್ತಾಯಿದ್ದು, ಅಧಿಕಾರಿಗಳೇ ಇಲ್ಲಿ ಸರ್ಕಾರಿ ಜಾಗ ಮಾರಾಟ ಮಾಡುತ್ತಿದ್ದಾರೆ ಎಂದು ಅವಳಿ ನಗರದ ಜನರು ಆಕ್ರೋಶ ಹೊರ ಹಾಕಿದ್ದಾರೆ. ಏನಿದು ರಾಜಕಾಲುವೆ ಗುಳುಂ ಕಥೆ ಅಂತೀರಾ ಈ ಸ್ಟೋರಿ ನೋಡಿ.

ಡೇಂಜರ್ ಝೂನ್ ನಲ್ಲಿ ಮನೆ ನಿರ್ಮಾಣ: ಸ್ಲಂ ನಿವಾಸಿಗಳನ್ನ ರಾಜಕಾಲುವೆಗೆ ಹಾಕಲು ಕುತಂತ್ರ,  ಏನಿದು ರಾಜ ಕಾಲುವೆ ಗುಳಂ ಕಥೆ ಅಂತೀರಾ ಈ ಸ್ಟೋರಿ ನೋಡಿ.
ಗದಗ ರಾಜ ಕಾಲುವೆ ಹಗರಣ
Follow us
ಕಿರಣ್ ಹನುಮಂತ್​ ಮಾದಾರ್
|

Updated on:Mar 29, 2023 | 1:08 PM

ಗದಗ: ರಾಜಕಾಲುವೆ ಅಕ್ಕಪಕ್ಕ ನಿರ್ಮಾಣ ಮಾಡುತ್ತಿರುವ ಮನೆಗಳು, ಸರ್ಕಾರ ಕಾನೂನು ಉಲ್ಲಂಘಿಸಿ ಸ್ಲಂ ಬೋರ್ಡ್, ನಗರಸಭೆಯಿಂದ ಮನೆಗಳ ನಿರ್ಮಾಣ. ಮುಖ್ಯಮಂತ್ರಿ ಹಾಗೂ ಜಿಲ್ಲಾಧಿಕಾರಿಯವರ ಖಡಕ್ ಆದೇಶಕ್ಕೂ ಡೋಂಟ್ ಕೇರ್. ಹೌದು ಈ ಅಕ್ರಮ ಕಾನೂನು ಬಾಹೀರ ಕಟ್ಟಡಗಳ ನಿರ್ಮಾಣ ನಡೆದಿದ್ದು ಗದಗ ಬೆಟಗೇರಿ ಅವಳಿ ನಗರದ ವಾರ್ಡ್ ನಂಬರ್ 29 ನೇ ರಾಜೀವ್ ಗಾಂಧಿ ನಗರದಲ್ಲಿ. ಸರ್ವೇ ನಂಬರ್ 405, 411, ಹಾಗೂ 412 ರಲ್ಲಿ ದೊಡ್ಡ ನಾಲಾ ಹರಿಯುತ್ತೆ. ಮೊದಲೆಲ್ಲ ಇಲ್ಲಿ ದೊಡ್ಡ ಪ್ರಮಾಣದಲ್ಲಿ ನಿರಂತರವಾಗಿ ನೀರು ಹರಿಯುತ್ತಿತ್ತು. ಹತ್ತಾರು ವರ್ಷಗಳ ಹಿಂದೆ ಸುಮಾರು 30 ಅಡಿಗಿಂತಲೂ ಅಗಲವಿದ್ದ ನಾಲಾ ಇದೀಗ 5 ರಿಂದ‌ 6 ಅಡಿಗೆ ಬಂದು ನಿಂತಿದೆ. ಕೆಲವು ಪಟ್ಟಭದ್ರ ಹಿತಾಶಕ್ತಿಗಳು, ನಗರಸಭೆ ಜನಪ್ರತಿನಿಧಿಗಳು ನಾಲಾವನ್ನು ನುಂಗಿ ನೀರು ಕುಡಿಯಲಾರಂಭಿಸಿದ್ದಾರೆ.

ಸರ್ಕಾರಿ ಆಸ್ತಿಯನ್ನ ರಕ್ಷಣೆ ಮಾಡಬೇಕಿರುವ ನಗರಸಭೆ ಕಣ್ಣುಮುಚ್ಚಿ ಕುಳಿತಿದೆ. ಮಾಡೋದು ತಪ್ಪು ಎಂದು ಗೊತ್ತಿದ್ದರೂ ಸಹ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ. ಮಳೆ ಬಂದಾಗಲೆಲ್ಲ ಈ ಭಾಗದ ಜನರ ಗೋಳು ಹೇಳತೀರದು. ಆದರೂ ಇದೇ ನಾಲೆ ಮೇಲೆ ಮತ್ತೆ ಸ್ಲಂ ನಿವಾಸಿಗಳಿಗೆ ಸರ್ಕಾರದ ಆಶ್ರಯ ಯೋಜನೆಯಡಿ 45 ಮನೆಗಳು ನಿರ್ಮಾಣವಾಗುತ್ತಿದೆ. ವಸತಿ ಯೋಜನೆಯಡಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಆರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿ ಫಲಾನುಭವಿಗಳಿಗೆ ನಿವೇಶನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಜನರ ವಿರೋಧ ವ್ಯಕ್ತವಾಗಿದೆ. ಸ್ಥಳೀಯ ಶಾಸಕ ಎಚ್​.ಕೆ ಪಾಟೀಲ್ ಹಾಗೂ ಈ ವಾರ್ಡ್ ಸದಸ್ಯ ಎಫ್​.ಡಿ ಚಂದಾವರಿ ಕುಮ್ಮಕ್ಕಿನಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.

ಇದನ್ನೂ ಓದಿ:ಚಾಮರಾಜನಗರ: ಮಡಹಳ್ಳಿ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣ; ಒಂದು ವರ್ಷದ ಬಳಿಕ ಆರೋಪಿಗಳ ಬಂಧನ

ಇನ್ನು ನಿವೇಶನ ಆಯ್ಕೆ ಸಮಿತಿ ಅಧ್ಯಕ್ಷರು ಆಯಾ ಭಾಗದ ಶಾಸಕರು ಆಗಿರುತ್ತಾರೆ. ಹಾಗಾಗಿ ಸ್ಥಳೀಯ ಜನಪ್ರತಿನಿಧಿಗಳ ಹಿತಾಸಕ್ತಿಗೆ ನಗರಸಭೆ ಅಧಿಕಾರಿ ವರ್ಗ ಮಣೆಹಾಕುತ್ತಿದೆ. ಹೌದು ದೊಡ್ಡ ಪ್ರಮಾಣದಲ್ಲಿ ಮಳೆ ಬಂದರೆ ನೀರು ರಭಸವಾಗಿ ಬರುತ್ತದೆ. ಇದರಿಂದ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಮಳೆ ಬಂದಾಗಲೆಲ್ಲ ಸಾಕಷ್ಟು ಅವಾಂತರ ಸೃಷ್ಠಿಯಾಗುತ್ತೆ. ಅದರಿಂದ ಇದು ಸೂಕ್ತವಾದ ಸ್ಥಳವಲ್ಲ, ಇಲ್ಲಿ ನಿವೇಶನ ಬೇಡ. ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಎಂದು ಸಾರ್ವಜನಿಕರು ಸಾಕಷ್ಟು ಮನವಿ, ವಿರೋಧ ಮಾಡಿದ್ದಾರೆ.

ಸ್ಥಳಿಯ ಶಾಸಕರು ಹಾಗೂ ಈ ಭಾಗದ ನಗರಸಭೆ ಸದಸ್ಯರು 2018 ರಲ್ಲಿ ಈ ನಿವೇಶನ‌ ಕಾಮಗಾರಿಗೆ ಠರಾವು ಪಾಸ್ ಮಾಡಿದ್ದಾರೆ. ಇದಕ್ಕೆ ನಗರಸಭೆ ಅಧಿಕಾರಿಗಳು ಸಾಥ್ ನೀಡಿದ್ದು, ಮನೆ ಕಟ್ಟಲು ಯೋಗ್ಯವಾಗಿದೆ ಎಂದು ಸೂಕ್ತವಲ್ಲದ ವರದಿ ನೀಡಿದ್ದಾರೆ. ಅಲ್ಲದೇ ಫಾರ್ಮ್ ನಂಬರ್ 3 ಹಕ್ಕುಪತ್ರ ಆದೇಶ ಹೊರಡಿಸಿದ್ದಾರೆ. ಯೋಗ್ಯವಲ್ಲದ ಹಾಗೂ ಒತ್ತುವರಿಯಾದ ಜಾಗದಲ್ಲಿ ಮನೆ ನಿರ್ಮಿಸಲು, 45 ಫಲಾನುಭವಿಗಳಿಗೆ ಮನೆ ಹಕ್ಕು ಪತ್ರ ಹೇಗೆ ಸೃಷ್ಟಿಯಾದವು ಎನ್ನುವುದು ಹಲವಾರು ಅನುಮಾನಕ್ಕೆ ಎಡೆ‌ಮಾಡಿ ಕೊಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿಗಳನ್ನ ಕೇಳಿದರೆ ಕಾಮಗಾರಿ ಸ್ಟಾಪ್ ಮಾಡುವಂತೆ ಹೇಳಿದ್ದೇನೆ ಎನ್ನುತ್ತಾರೆ. ಜಿಲ್ಲಾಧಿಕಾರಿಗಳು ರಾಜ್ ಕಾಲುವೆ ಮೇಲೆ ಮನೆಗಳ ನಿರ್ಮಾಣ ಮಾಡದಂತೆ ಸೂಚನೆ ನೀಡಿದ್ದಾರೆ. ಆದರೂ ಕೂಡ ನಗರಸಭೆ ಹಾಗೂ ಸ್ಲಂ ಬೊರ್ಡ್ ಅಧಿಕಾರಿಗಳ ಕುಮ್ಮಕ್ಕಿನಿಂದ ಕದ್ದು ಮುಚ್ಚಿ ಕಾಮಗಾರಿ ಮಾಡಲಾಗುತ್ತಿದೆ‌. ಇನ್ನಾದರೂ ಹಿರಿಯ ಅಧಿಕಾರಿಗಳು ರಾಜ ಕಾಲುವೆ ಮೇಲೆ ನಿರ್ಮಾಣ ಹಂತದಲ್ಲಿನ ಮನೆಗಳನ್ನು ತೆರವು ಮಾಡಿ, ರಾಜ ಕಾಲುವೆ ಉಳಿಸಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:06 pm, Wed, 29 March 23