Gadag News: ಈ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷವಾದ್ರೆ ಸಾಕು ಹೆತ್ತವರಲ್ಲಿ ಆತಂಕ! ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಿದ್ರು ಮಕ್ಕಳು ದಿಢೀರ್ ನಾಪತ್ತೆ

|

Updated on: Jun 01, 2023 | 2:58 PM

ಆ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷವಾದ್ರೆ ಸಾಕು ಹೆತ್ತವರಿಗೆ ಭಯ, ಆತಂಕ ಶುರುವಾಗುತ್ತೆ. ಹೀಗಾಗಿ ಆ ಮನೆಯಲ್ಲಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ. ಈ ನಡುವೆಯೂ ಆಟ ಆಡ್ತಾಯಿರೋ ಬಾಲಕ ಏಕಾಏಕಿ ನಾಪತ್ತೆಯಾಗಿದ್ದಾನೆ. 9 ವರ್ಷದ ಬಾಲಕ ದಿಢೀರ್ ನಾಪತ್ತೆ ಇಡೀ ಕುಟುಂಬಸ್ಥರನ್ನ ಕಂಗಾಲಾಗುವಂತೆ ಮಾಡಿದೆ. ಈ ಹಿಂದೆಯೂ ಈ ಮನೆಯಲ್ಲಿ ಬಾಲಕ ನಾಪತ್ತೆಯಾಗಿದ್ದ. ಇನ್ನೂ ಆ ಬಾಲಕ ಪತ್ತೆಯಾಗಿಲ್ಲ. ಈಗ ಮತ್ತೆ ನಿನ್ನೆ (ಮೇ.30) ಇದೇ ಮನೆಯ ಇನ್ನೊಬ್ಬ ಬಾಲಕ ದಿಢೀರ್​ ನಾಪತ್ತೆಯಾಗಿದ್ದು, ಪುತ್ರನಿಗಾಗಿ ಹಾದಿಬೀದಿಯಲ್ಲಿ ಕಣ್ಣೀರು ಹಾಕುತ್ತ ಜನರಲ್ಲಿ ಮನವಿ ಮಾಡುತ್ತಿದ್ದಾರೆ.

Gadag News: ಈ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷವಾದ್ರೆ ಸಾಕು  ಹೆತ್ತವರಲ್ಲಿ ಆತಂಕ! ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಿದ್ರು ಮಕ್ಕಳು ದಿಢೀರ್ ನಾಪತ್ತೆ
ಗದಗ
Follow us on

ಗದಗ: ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಹೆತ್ತವರಲ್ಲಿ ಖುಷಿ, ಸಂತೋಷ ಸಹಜ. ನನ್ನ ಮಗ ಹಾಗಾಗಬೇಕು, ಹೀಗೇ ಆಗಬೇಕೆಂದು ಕನಸು ಕಾಣುತ್ತಾರೆ. ಆದ್ರೆ, ಆ ಮನೆಯಲ್ಲಿ ಮಕ್ಕಳಿಗೆ 9 ವರ್ಷ ಆಗ್ತಾಯಿದ್ದಂತೆ ಹೆತ್ತವರಲ್ಲಿ ಭಯ, ಆತಂಕ ಹೆಚ್ಚಾಗುತ್ತೆ. ಹೌದು ಈ ಮನೆಯಲ್ಲಿ ಮಕ್ಕಳು ದಿಢೀರ್ ನಾಪತ್ತೆಯಾಗುತ್ತಿದ್ದಾರಂತೆ. ಆಶ್ಚರ್ಯ ಆದ್ರೂ ಸತ್ಯ. ಗದಗ (Gadag)ನಗರದ ಜವಳಗಲ್ಲಿಯ ದಾವಲಖಾನಾವರ್ ಕುಟುಂಬದ ಕಣ್ಣೀರಿನ ಕಥೆಯಿದು. ಈ ಫೋಟೋದಲ್ಲಿರುವ ಕೆಂಪು ಟೀ ಶರ್ಟ್ ಹಾಕಿರೋ ಬಾಲಕನ ಹೆಸರು ಅಬ್ಜಲ್. ಮೌಲಾಸಾಬ್, ಖಾಜಾಬೀ ಮುದ್ದಿನ ಮಗ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗು. ಈ ಮುದ್ದಿನ ಮಗನೇ ಅಬ್ಜಲ್. ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ. ಆದ್ರೆ, ಅಬ್ಜಲ್ ನಿನ್ನೆ(ಮೇ.30) ಸಂಜೆ ದಿಢೀರ್ ನಾಪತ್ತೆಯಾಗಿದ್ದಾನೆ.

ಈ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷ ಆದ್ರೆ, ದಿಢೀರ್​ ನಾಪತ್ತೆ

ಬಾಲಕ ಕಾಣೆಯಾಗುತ್ತಿದ್ದಂತೆ ಕಂಗಾಲಾದ ಕುಟುಂಬ ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಎಲ್ಲ ಕಡೆ ಹುಡುಕಿದ್ರೂ ಪತ್ತೆಯಾಗಿಲ್ಲ. ಈ ಕುಟುಂಬದಲ್ಲಿ ಮಕ್ಕಳಿಗೆ 9 ವರ್ಷ ಆದ್ರೆ, ಅದೇನ್ ಸಮಸ್ಯೆಯೋ ಗೊತ್ತಿಲ್ಲ, ದಿಢೀರ್ ಕಾಣೆಯಾಗ್ತಾರಂತೆ. ಅಬ್ಜಲ್ ನಿನ್ನೆ ಶಾಲೆಗೆ ಹೋಗಿ ವಾಪಸ್ ಆಗಿದ್ದಾನೆ. ಬಂದವನೇ ಸ್ಕೂಲ್ ಬ್ಯಾಗ್ ಇಟ್ಟು. ಮಾವಿನ ಹಣ್ಣು ತೆಗೆದುಕೊಂಡು ಮನೆಯಿಂದ ಆಚೆ ಬಂದಿದ್ದಾನೆ. ಅಷ್ಟೇ ಕ್ಷಣಾರ್ಧದಲ್ಲಿ ಅಬ್ಜಲ್ ನಾಪತ್ತೆಯಾಗಿದ್ದಾನಂತೆ.

ಇದನ್ನೂ ಓದಿ:ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ 22 ಮಕ್ಕಳು ನಾಪತ್ತೆ, ಈ ಮಕ್ಕಳು ಮಠದ ಪಾಲಾಗಿದ್ದು ಹೇಗೆಂಬುದೇ ಪ್ರಶ್ನೆ

ಮುದ್ದಿನ ಮಗನಿಗಾಗಿ ಹೆತ್ತ ಕರುಳು ಕಣ್ಣೀರು ಹಾಕ್ತಾಯಿದ್ರೆ, ಮುದ್ದಿನ ಮೊಮ್ಮಗನ ದಿಢೀರ್ ನಾಪತ್ತೆ ಅಜ್ಜಿ ಗೋಳಾಡುವಂತೆ ಮಾಡಿದೆ. ಮೊಮ್ಮಗನ ಫೋಟೋ ಹಿಡಿದು ಗದಗಬೆಟಗೇರಿ ಅವಳಿ ನಗರದಲ್ಲಿ ಓಣಿ ಓಣಿಯಲ್ಲಿ ಹುಡುಕುತ್ತಿದ್ದಾರೆ. ಕಂಡವರನ್ನು ಮಗನ ಫೋಟೋ ತೋರಿಸಿದ ತಂದೆ, ತಾಯಿ, ಅಜ್ಜಿ ಮಗುವನ್ನು ಹುಡುಕಿಕೊಡುವಂತೆ ಬಿಕ್ಕಿ ಬಿಕ್ಕಿ ಅಳುತ್ತ ಜನರಲ್ಲಿ ಬೇಡಿಕೊಳ್ತಾಯಿದ್ದಾರೆ. ನನ್ನ ಒಬ್ಬನೇ ಮುದ್ದಿನ ಮಗನನ್ನು ಹುಡುಕಿಕೊಡಿ ಅಂತ ಹೆತ್ತಕರಳು ಗೋಳಾಡುತ್ತಿರೋ ದೃಶ್ಯ ಕರಳು ಚುರ್ ಎನ್ನುವಂತಿದೆ.

2010 ಅಕ್ಟೋಬರ್ 10ರಂದು ಇದೇ ಕುಟುಂಬದ ರಫೀಕ್, ಫಾತಿಮಾ ಪುತ್ರ ಇಲಿಯಾಸ್ ಕಾಣೆಯಾಗಿದ್ದನಂತೆ. ಕಾಣೆಯಾಗಿ ಇಂದಿಗೆ ಬರೊಬ್ಬರ 13 ವರ್ಷಗಳು ಕಳೆದ್ರೂ, ಆ ಬಾಲಕ ಪತ್ತೆಯಾಗಿಲ್ಲ. ಅಂದು ಆ ಬಾಲಕ ಕೂಡ ಸಂಜೆ 6 ಗಂಟೆಗೆ ಮನೆಯಿಂದ ದಿಢೀರ್ ಕಾಣೆಯಾಗಿದ್ದಾನಂತೆ. ನಿನ್ನೆ ಅಬ್ಜಲ್ ಕೂಡ ಸಂಜೆ 6 ಗಂಟೆ ಸುಮಾರಿಗೆ ಏಕಾಏಕಿ ಕಾಣೆಯಾಗಿದ್ದಾನೆ. ಹೀಗಾಗಿ ಈ ಕುಟುಂಬಕ್ಕೆ ಭಯ, ಆತಂಕ ಶುರುವಾಗಿದೆ. ನಿನ್ನೆ ಸಂಜೆ ಹೊತ್ತು ಅದೇ ಸಮಯ ಮುದ್ದಿನ ಮೊಮ್ಮಗ ಕಾಣೆಯಾಗಿದ್ದಾನೆ ಅಂತ ಅಜ್ಜಿ ಗೋಳಾಡುತ್ತಿದ್ದಾಳೆ. ಇಬ್ಬರು ಬಾಲಕರು ಕಾಣೆಯಾದ ಸಮಯ, ವೇಳೆ ನೋಡಿ ಕುಟುಂಬಕ್ಕೆ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ನನ್ನ ಮೊಮ್ಮಗ ಯಾರಿಗಾದ್ರೂ ಸಿಕ್ರೆ ದಯವಿಟ್ಟು ತಂದು ಕೊಡಿ ಅಂತ ಅಜ್ಜಿ ಹಾದಿ ಬೀದಿಯಲ್ಲಿ ಅವಲತ್ತುಕೊಳ್ತಾಯಿದ್ದಾರೆ.

ಇದನ್ನೂ ಓದಿ:ಕರ್ನಾಟಕದ ಸರ್ಕಾರಿ ಬಾಲ ಮಂದಿರಗಳಲ್ಲಿ 510 ಮಕ್ಕಳು ನಾಪತ್ತೆ; ಆಘಾತಕಾರಿ ಮಾಹಿತಿ ಬಯಲು

ರೈಲ್ವೇ ಟ್ರ್ಯಾಕ್, ತೋಟದಾರ್ಯ ಜಾತ್ರೆ, ಗದಗಬೆಟಗೇರಿ ಅವಳಿ ನಗರ, ಸಂಬಂಧಿಕರ ಮನೆಗಳಲ್ಲೂ ಹುಡುಕಿದ್ರೂ ಬಾಲಕ ಅಬ್ಜಲ್ ಪತ್ತೆಯಾಗಿಲ್ಲ. ಕ್ಷಣ ಕ್ಷಣಕ್ಕೂ ಹೆತ್ತವರಲ್ಲಿ ಆತಂಕ ಹೆಚ್ಚಾಗುತ್ತಿದೆ. ನಮ್ಮ ಮಗ ಮನೆ ಬಿಟ್ಟು ಎಂದೂ ಎಲ್ಲೂ ಹೋಗಲ್ಲ. ಈಗ ದಿಢೀರ್ ನಾಪತ್ತೆಯಾಗಿದ್ದಾನೆ. ಎಲ್ಲಿ ಹೋಗಿದ್ದಾನೆ? ಯಾರಾದ್ರೂ ಕರ್ಕೋಂಡು ಹೋಗಿದ್ರೆ ದಯವಿಟ್ಟು ನನ್ನ ಮುದ್ದಿನ ಮಗನನ್ನು ತಂದು ಕೊಡಿ ಅಂತ ಹೆತ್ತ ಕರಳು ಕಣ್ಣೀರು ಹಾಕುತ್ತಿದೆ. ಹೆತ್ತವ್ರ ಕಣ್ಣು ಮುಂದೆ ಇದ್ದ ಬಾಲಕ ಕ್ಷಣಾರ್ಧದಲ್ಲಿ ಕಾಣೆಯಾಗಿದ್ದು, ಇಡೀ ಬಡಾವಣೆ ಜನರಲ್ಲಿ ಆಶ್ಚರ್ಯ ಮೂಡಿದೆ. ಕುಟುಂಬಸ್ಥರ ಸ್ಥಿತಿ ನೋಡಿ ಇಡೀ ಬಡಾವಣೆ ಜನರೇ ಕಣ್ಣೀರು ಹಾಕುತ್ತಿದ್ದಾರೆ. ಯಾರಿಗಾದ್ರೂ ಈ ಬಾಲಕ ಕಂಡ್ರೆ, ಸಿಕ್ರೆ ದಯವಿಟ್ಟು ಕುಟುಂಬಕ್ಕೆ ಒಪ್ಪಿಸಿ ಕಣ್ಣೀರು ಒರೆಸಿ ಅನ್ನೋದು ಟಿವಿ9 ಕಳಕಳಿ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ