ಕರ್ನಾಟಕದ ಸರ್ಕಾರಿ ಬಾಲ ಮಂದಿರಗಳಲ್ಲಿ 510 ಮಕ್ಕಳು ನಾಪತ್ತೆ; ಆಘಾತಕಾರಿ ಮಾಹಿತಿ ಬಯಲು
ಬೆಂಗಳೂರು ನಗರ, ಮೈಸೂರು, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದರೆ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಉಡುಪಿ ಜಿಲ್ಲೆಗಳ ಬಾಲಮಂದಿರದಿಂದ ಕಾಣೆಯಾದವರ ಸಂಖ್ಯೆ ಕಡಿಮೆಯಾಗಿದೆ.
ಕೋಲಾರ: ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಬಾಲ ಮಂದಿರಗಳಿಂದ ಕಳೆದ 6 ವರ್ಷದಿಂದ 510 ಮಂದಿ ಮಕ್ಕಳು ನಾಪತ್ತೆಯಾಗಿರುವ ಆಘಾತಕಾರಿ ಅಂಶವನ್ನು ಕರ್ನಾಟಕ ಸರ್ಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯವು ಮಾಹಿತಿ ಹಕ್ಕು ನಿಯಮದಡಿ ಕೇಳಲಾಗಿದ್ದ ಮಾಹಿತಿಗೆ ಉತ್ತರ ನೀಡಿದೆ. ಕೋಲಾರದ ಆರ್.ಟಿ.ಐ ಕಾರ್ಯಕರ್ತ ಕೆ.ಸಿ. ರಾಜಣ್ಣ ಎಂಬಾತ ಮಾಹಿತಿ ಹಕ್ಕು ನಿಯಮದಡಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ ನೀಡಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯ ಮಾಹಿತಿ ನೀಡಿದೆ. ದುರಂತ ಎಂದರೆ ಸದ್ಯ ನಾಪತ್ತೆಯಾಗಿರುವವರಲ್ಲಿ ಬಾಲಕಿಯರೇ ಹೆಚ್ಚಿದ್ದಾರೆ. ಜೊತೆಗೆ ನಾಪತ್ತೆಯಾಗಿರುವವರ ಸುಳಿವು ಈವರೆಗೂ ಪತ್ತೆಯಾಗಿಲ್ಲ ಎಂಬ ಮತ್ತೊಂದು ಆಘಾತಕಾರಿ ಅಂಶ ಬಯಲಾಗಿದೆ.
ಇನ್ನು, ಮಕ್ಕಳ ರಕ್ಷಣಾ ನಿರ್ದೇಶನಾಲಯವು ನೀಡಿರುವ ಮಾಹಿತಿ ಪ್ರಕಾರವಾಗಿ ಇಷ್ಟು ವರ್ಷಗಳ ಬಾಲ ಮಂದಿರಗಳಿಂದ ನಾಪತ್ತೆಯಾಗಿರುವ ಮಕ್ಕಳು ಇನ್ನೂ ಪತ್ತೆಯಾಗಿಲ್ಲ. ಜೊತೆಗೆ ಬಾಲಮಂದಿರಗಳಲ್ಲಿ ವಾಸಿಸುತ್ತಿರುವ ಮಕ್ಕಳೆಲ್ಲರೂ ಕೂಡಾ 16-18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರೇ ಇರುತ್ತಾರೆ. ಹೀಗಿರುವಾಗ ಅಲ್ಲಿಂದ ನಾಪತ್ತೆಯಾದ ಮಕ್ಕಳು ಎಲ್ಲಿಗೆ ಹೋಗಿದ್ದಾರೆ ಎನ್ನುವ ಮಾಹಿತಿ ಇನ್ನೂ ಪತ್ತೆಯಾಗಿಲ್ಲ. ರಾಜ್ಯದಲ್ಲಿನ ಜಿಲ್ಲಾವಾರು ನೋಡಿದಾಗ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರಿ ಬಾಲಮಂದಿರಗಳಿಂದಲೂ ಮಕ್ಕಳು ನಾಪತ್ತೆಯಾಗಿದ್ದಾರೆ. ಸರ್ಕಾರ ಭದ್ರತೆಯಲ್ಲಿ ಸಂವಿಧಾನದ ಹಕ್ಕು ಬಾಧ್ಯತೆಯಲ್ಲಿ ಜೀವಿಸಬೇಕಾದ ಮಕ್ಕಳು ಕಾಣೆಯಾಗುತ್ತಿರುವುದರ ಹಿಂದೆ ಕಾಣದ ಕೈಗಳ ಕೈವಾಡ ಇರುವ ಶಂಕೆ ಮೂಡುತ್ತಿದೆ.
ರಾಜ್ಯದಲ್ಲಿ ದೌರ್ಜನ್ಯಕ್ಕೊಳಗಾಗಿರುವ ಮಕ್ಕಳು, ತಿಳಿದೋ, ತಿಳಿಯದೆಯೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಮಕ್ಕಳು, ತಂದೆ-ತಾಯಿ ಹಾಗೂ ಪೋಷಕರಿಂದ ದೂರವಾದ ಮಕ್ಕಳು, ತಂದೆ-ತಾಯಿಗಳಿಗೆ ಹಾಗೂ ಪೋಷಕರಿಗೆ ಬೇಡವಾದ ಮಕ್ಕಳು ಸರ್ಕಾರಿ ಬಾಲಮಂದಿರದಲ್ಲಿ ಇರುತ್ತಾರೆ. ಈ ಬಾಲಮಂದಿರದಲ್ಲಿ ಮಕ್ಕಳಿಗೆ ಪುನರ್ವಸತಿ ಜೊತೆಗೆ ಮಕ್ಕಳಿಗೆ ಬೇಕಾದ ಶಿಕ್ಷಣ, ಸೌಲಭ್ಯಗಳನ್ನು ಕೊಟ್ಟು ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಕೆಲಸವನ್ನು ಬಾಲಮಂದಿರ ಮಾಡುತ್ತವೆ.
ರಾಜ್ಯದಲ್ಲಿನ ಬಹುತೇಕ ಬಾಲ ಮಂದಿರಗಳಲ್ಲಿ ಮುಕ್ತ, ವ್ಯವಸ್ಥಿತ, ಆಶ್ರಯ ನೀಡುತ್ತಿಲ್ಲ. ಅಲ್ಲದೆ, ಬಾಲ ಮಂದಿರಗಳಲ್ಲಿ ಭದ್ರತೆ ಕೊರತೆ ಎದ್ದು ಕಾಣುತ್ತಿದೆ. ಇನ್ನು, ರಾಜ್ಯದಲ್ಲಿನ ಬಾಲ ಮಂದಿರಗಳಿಂದ ನಾಪತ್ತೆಯಾದ ಮಕ್ಕಳ ಪೈಕಿ ಯಾವ ಜಿಲ್ಲೆಯಲ್ಲಿ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಅನ್ನೋದನ್ನ ನೋಡಿದರೆ ಬೆಂಗಳೂರು ನಗರ, ಮೈಸೂರು, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದರೆ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಉಡುಪಿ ಜಿಲ್ಲೆಗಳ ಬಾಲಮಂದಿರದಿಂದ ಕಾಣೆಯಾದವರ ಸಂಖ್ಯೆ ಕಡಿಮೆಯಾಗಿದೆ.
ಮಕ್ಕಳ ರಕ್ಷಣಾ ನಿರ್ದೇಶನಾಲಯ ನೀಡಿರುವ ಆಘಾತಕಾರಿ ಅಂಶವನ್ನು ಆಧಾರವಾಗಿಟ್ಟುಕೊಂಡು ಆರ್.ಟಿ.ಐ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ರಾಜ್ಯದಲ್ಲಿನ ಬಾಲಮಂದಿರಗಳಿಂದ ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆ ಮಾಡಲು ಕೋರಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕರ್ನಾಟಕದ ರಾಜ್ಯಪಾಲರಿಗೆ ಹಾಗೂ ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಮತ್ತು ಪೊಲೀಸ್ ಮಹಾನಿರ್ದೇಶಕರು, ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
(ವರದಿ : ರಾಜೇಂದ್ರ ಸಿಂಹ)
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಮಕ್ಕಳ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆರೋಪ; ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ
ಅಮ್ಮನ ಗರ್ಭ, ಸಮಾಧಿಯಲ್ಲಿ ಮಾತ್ರ ಹೆಣ್ಣುಮಕ್ಕಳು ಸೇಫ್; ಸಾಯುವ ಮುನ್ನ ಪತ್ರ ಬರೆದಿಟ್ಟ ಬಾಲಕಿ
Published On - 8:19 pm, Wed, 22 December 21