ಓಪನ್ ಮಾಡಿದ ಕ್ರಸ್ಟ್ ಗೇಟ್ ಮುಂದೆಯೇ ಮೀನು ಹಿಡಿದು ದುಸ್ಸಾಹಸ! ಸ್ವಲ್ಪ ಯಾಮಾರಿದ್ರು ಜೀವಕ್ಕೆ ಕಂಟಕ
ಆ ಬ್ಯಾರೇಜ್ನಿಂದ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದೆ. ಹೀಗಾಗಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲಾಡಳಿತ ಯಾರೂ ನದಿಪಾತ್ರಕ್ಕೆ ಹೋಗಬಾರದು, ನದಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆ ನಡುವೆಯೂ ತುಂಬಿದ ನದಿಯಲ್ಲಿ ಮೀನುಗಾರರು ತೆಪ್ಪ ಹಾಕಿ ಮೀನು ಹಿಡಿಯುವ ಹುಚ್ಛಾಟ ತೋರುತ್ತಿದ್ದಾರೆ. ಅನಾಹುತ ಸಂಭವಿಸಿದರೆ ಯಾರೂ ಹೊಣೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಗದಗ, ಆ.23: ಗದಗ ಜಿಲ್ಲೆಯ ಮುಂಡರಗಿ(Mundaragi) ತಾಲೂಕಿನ ಹಮ್ಮಿಗಿ ಗ್ರಾಮದ ಬಳಿಯ ಸಿಂಗಟಾಲೂರ ಬ್ಯಾರೇಜ್ನಲ್ಲಿ. ಧುಮ್ಮಿಕ್ಕಿ ಹರಿಯುವ ನದಿಯಲ್ಲಿಯೇ ತೆಪ್ಪದಲ್ಲಿ ಕುಳಿತು ಮೀನು ಹಿಡಿಯುವ ದುಸ್ಸಾಹಸ ನಡೆಸಿದ್ದಾರೆ. ಸ್ವಲ್ಪ ಹೆಚ್ಚುಕಮ್ಮಿಯಾದರೂ ದೊಡ್ಡ ದುರಂತವೇ ಸಂಭವಿಸುವ ಸಾಧ್ಯತೆಯಿದೆ. ಇನ್ನು ಜಿಲ್ಲಾಡಳಿತ ನದಿಪಾತ್ರಕ್ಕೆ ಹೋಗದಂತೆ ಎಚ್ಚರಿಕೆ ನೀಡಿದ್ದರೂ ಈ ಮೀನುಗಾರರಿಗೆ ಭಯ ಇಲ್ಲದಂತಾಗಿದೆ. ಡ್ಯಾಂ ಉಸ್ತುವಾರಿ ನೋಡುವ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಕೂಡ ಧುಮ್ಮಿಕ್ಕಿ ಹರಿಯುವ ನದಿಯಲ್ಲಿನ ಮೀನುಗಾರಿಕೆ ತಡೆಯುವ ಗೋಜಿಗೆ ಹೋಗಿಲ್ಲ.
ಮಲೆನಾಡು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ನದಿಗೆ ಅಪಾರ ನೀರು ಹರಿದು ಬರುತ್ತಿದೆ. ಸುಮಾರು 24 ಕ್ರಷ್ಟ ಗೇಟ್ ಹೊಂದಿದ ಸಿಂಗಟಾಲೂರ ಬ್ಯಾರೇಜ್, ಈಗಾಗಲೇ ಭರ್ತಿಯಾಗಿದೆ. ಹರಿದು ಬಂದ ನೀರು 5 ಗೇಟ್ಗಳ ಮೂಲಕ ಅಷ್ಟೇ ಪ್ರಮಾಣದಲ್ಲಿ ನದಿಗೆ ಹರಿಬಿಡಲಾಗುತ್ತಿದೆ. ಹೀಗಿರುವಾಗ ಕ್ರಸ್ಟ್ ಗೇಟ್ ಮುಂಭಾಗದಲ್ಲೇ ತೆಪ್ಪದ ಮೂಲಕ ಮೀನುಗಾರಿಕೆ ಮಾಡಲಾಗುತ್ತಿದೆ. ಅಪಾಯಮಟ್ಟ ಹರಿಯುವ ನದಿಯಲ್ಲಿ ಮೀನು ಹಿಡಿಯುವ ಚೆಲ್ಲಾಟ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಜಿಲ್ಲಾಡಳಿತದ ಎಚ್ಚರಿಕೆ ಮಧ್ಯೆಯೂ ಹುಚ್ಚಾಟ ಮಾಡುತ್ತಿರುವುದು ಸರಿಯೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಗದಗ ಜಿಲ್ಲಾಧಿಕಾರಿಗಳನ್ನು ಕೇಳಿದರೆ, ‘ಅವರು ನುರಿತ ಮೀನುಗಾರರು ಇರ್ತಾರೆ. ತುಂಬಿದ ನದಿಯಲ್ಲೇ ಮೀನುಗಾರಿಕೆ ಮಾಡ್ತಾರೆ. ಈಗಾಗಲೇ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಆದರೂ ಇನ್ನೊಮ್ಮೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗುತ್ತ ಎನ್ನುತ್ತಿದ್ದಾರೆ.
ಎಷ್ಟೇ ನುರಿತ ಮೀನುಗಾರರೇ ಇದ್ದರೂ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಅದರಲ್ಲೂ ಓಪನ್ ಮಾಡಿದ ಕ್ರಸ್ಟ್ ಗೇಟ್ ಬಳಿಯೇ ಮೀನು ಹಿಡಿಯುವ ದುಸ್ಸಾಹಸ ಮಾಡುತ್ತಿರುವುದು ಸರಿಯಲ್ಲ. ದುರಂತ ನಡೆಯುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಅಪಾಯಕಾರಿ ಮೀನುಗಾರಿಕೆಗೆ ಕಡಿವಾಣ ಹಾಕುತ್ತಾ ಕಾದುನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ