ಸ್ವಾಮೀಜಿ VS ರಾಜಕಾರಿಣಿ: ಇದು ಅಂತ್ಯದಲ್ಲಿ ಆರಂಭ ಎಂದ ದಿಂಗಾಲೇಶ್ವರ ಶ್ರೀ, ಆರೋಪಕ್ಕೆ ಬದ್ಧ ಎಂದ ಸಿಸಿ ಪಾಟೀಲ
ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ನಾನು ಮಾಡಿದ ಆರೋಪಕ್ಕೆ ಬದ್ಧನಾಗಿದ್ದಾನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದರು.
ಗದಗ: ಜಿಲ್ಲೆಯ ನರಗುಂದದಲ್ಲಿ ಇಂದು ಮುಂಜಾನೆಯಿಂದಲೂ ಹಲವು ನಾಟಕೀಯ ಬೆಳವಣಿಗೆಗಳು ನಡೆದವು. ಸಚಿವರು ತಮ್ಮ ಆರೋಪಗಳನ್ನು ಸಾಬೀತುಪಡಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಲು ಮುಂದಾದ ದಿಂಗಾಲೇಶ್ವರ ಸ್ವಾಮೀಜಿಗೆ ನಗರ ಪ್ರವೇಶಿಸಲು ಪೊಲೀಸರು ಅವಕಾಶ ಕೊಡಲಿಲ್ಲ. ಬೆಳಿಗ್ಗೆಯಿಂದಲೂ ನಗರದತ್ತ ದಿಂಗಾಲೇಶ್ವರ ಸ್ವಾಮೀಜಿ ಭಕ್ತರು ಬಂದರು. ಅದರ ಜೊತೆಗೆ ಸಚಿವ ಸಿ.ಸಿ.ಪಾಟೀಲ ಅವರಿಗೆ ಬೆಂಬಲ ಸೂಚಿಸಿ ಹಲವು ಬಿಜೆಪಿ ಕಾರ್ಯಕರ್ತರೂ ಆಗಮಿಸಿದರು. ಪಟ್ಟಣ ಪ್ರವೇಶಿಸದೇ ದಿಂಗಾಲೇಶ್ವರ ಸ್ವಾಮೀಜಿ ವಾಪಸ್ ತೆರಳಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಬೆಳವಣಿಗೆ ಕುರಿತು ನರಗುಂದದಲ್ಲಿ ಟಿವಿ9 ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವ ಸಿ.ಸಿ.ಪಾಟೀಲ, ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ನಾನು ಮಾಡಿದ ಆರೋಪಕ್ಕೆ ಬದ್ಧನಾಗಿದ್ದಾನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಆರೋಪ ದೃಢಪಡಿಸುವ ಕೆಲಸ ನನ್ನದಲ್ಲ, ಅದು ಕೋರ್ಟ್ ಕೆಲಸ. ದಿಂಗಾಲೇಶ್ವರ ಶ್ರೀಗಳು ಈ ವಿಷಯ ಇಷ್ಟಕ್ಕೆ ನಿಲ್ಲಿಸೋದು ಉತ್ತಮ. ಮುಂದುವರಿದರೆ ನಿಮಗೂ ಒಳ್ಳೆಯದಲ್ಲ, ನನಗೂ ಒಳ್ಳೆಯದಲ್ಲ. ನಾನು ಶ್ರೀಗಳ ಬಗ್ಗೆ ಆರೋಪಿಸಿಲ್ಲ, ಅವರ ವಿರುದ್ಧದ ಪ್ರಕರಣಗಳ ಬಗ್ಗೆ ಮಾತ್ರವೇ ಪ್ರಸ್ತಾಪಿಸಿದ್ದಾನೆ. ತಮ್ಮ ವಿರುದ್ಧದ ಆರೋಪಗಳು ನಿಜವೋ ಅಥವಾ ಸುಳ್ಳೋ ಎಂದು ದಿಂಗಾಲೇಶ್ವರಶ್ರೀ ಸ್ಪಷ್ಟಪಡಿಸಬೇಕು. ಅವರು ಈಗಲೂ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದರು.
ಮಠಗಳ ಮೇಲೆ ಸರ್ಕಾರಕ್ಕೆ ಗೌರವವಿದೆ. ಸಾಕಷ್ಟು ಅನುದಾನವನ್ನೂ ನೀಡಲಾಗಿದೆ. ಎಲ್ಲದಕ್ಕೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಎಳೆದುತರುವುದು ಬೇಡ. ನಿಮ್ಮ ಮೇಲೆ ಆರೋಪ ಮಾಡಿದ್ದು ನಾನು, ಏನಿದ್ದರೂ ನನ್ನ ವಿರುದ್ಧ ಮಾತಾಡಬೇಕು. ಅಧಿಕಾರ ಯಾರಿಗೂ ಶಾಶ್ವತವಲ್ಲ, ಪೀಠದಲ್ಲಿ ಇವತ್ತು ನೀವಿದ್ದೀರಿ. ನಾಳೆ ಮತ್ತೊಬ್ಬರು ಬರಬಹುದು ಎಂದು ಎಚ್ಚರಿಕೆ ನೀಡಿದರು. ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಇರುವ ಘನತೆಗೆ ಧಕ್ಕೆ ತರಬಾರದು. ಸಿಎಂ ಬೊಮ್ಮಾಯಿ ಅವರು ತೋಂಟದಾರ್ಯಶ್ರೀಗಳ ಸಮಾಧಿ ಉದ್ಘಾಟಿಸಿ, ಶಿರಹಟ್ಟಿ ಮಠದ ಸಮಾಧಿ ಮಾಡಿದರು ಅಂದಿದ್ದರು ದಿಂಗಾಲೇಶ್ವರ ಸ್ವಾಮೀಜಿ. ಇದರಲ್ಲಿ ಪರಿಷತ್ನ ಮಾಜಿ ಸದಸ್ಯರೊಬ್ಬ ಕೈವಾಡವಿದೆ ಎಂದು ಪರೋಕ್ಷವಾಗಿ ಎಸ್.ಆರ್.ಪಾಟೀಲ್ ಬಗ್ಗೆ ಕಿಡಿಕಾರಿದರು.
ಪ್ರವೇಶ ನಿರಾಕರಣೆ ಸಚಿವರ ಮನೆ ಎದುರು ಧರಣಿ ನಡೆಸಲು ದಿಂಗಾಲೇಶ್ವರ ಶ್ರೀಗಳಿಗೆ ಪೊಲೀಸರು ಅವಕಾಶ ಕೊಡಲಿಲ್ಲ. ನರಗುಂದ ಪಟ್ಟಣದ ಹೊರವಲಯದಲ್ಲಿರುವ ಕಲಕೇರಿ ಬಳಿಯೇ ಸ್ವಾಮೀಜಿಯನ್ನು ಪೊಲೀಸರು ತಡೆದರು. ಬಂದ ದಾರಿಗೆ ಸುಂಕವಿಲ್ಲದಂತೆ ಸ್ವಾಮೀಜಿ ವಾಪಸ್ಸಾದರು. ಒಂದು ವೇಳೆ ಪೊಲೀಸರು ಶ್ರೀಗಳನ್ನು ಮುಂದೆ ಬಿಟ್ಟಿದ್ದರೂ ತಡೆಯಬೇಕು ಎಂದು ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಪರಿಸ್ಥಿತಿ ಅರಿತ ಸ್ವಾಮೀಜಿ, ವಾಪಸ್ ಶಿರಹಟ್ಟಿ ಮಠದ ದಾರಿ ಹಿಡಿದರು. ‘ಇದು ಅಂತ್ಯದಲ್ಲಿ ಆರಂಭ. ಮುಂದಿನ ದಿನಗಳಲ್ಲಿ ಭಕ್ತರ ಅಭಿಪ್ರಾಯ ಪಡೆದು ಹೋರಾಟ ಮುಂದುವರಿಸುವೆ’ ಎಂದು ಸ್ವಾಮೀಜಿ ತಿಳಿಸಿದರು.
ಶ್ರೀಗಳ ಸತ್ಯಾಗ್ರಹಕ್ಕೆ ಪರ್ಯಾಯವಾಗಿ ಸಚಿವರ ಮನೆ ಎದುರು ಬಿಜೆಪಿ ಕಾರ್ಯಕರ್ತರು ಜಮಾವಣೆಯಾಗಿದ್ದರು. ಗದಗ, ಶಿರಹಟ್ಟಿ, ನರಗುಂದ ಸೇರಿ ವಿವಿಧೆಡೆಯಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು.
ಇದನ್ನೂ ಓದಿ: ನನ್ನ ರೌಡಿಸಂ ಸಾಬೀತು ಮಾಡಿ: ಸಚಿವ ಸಿಸಿ ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ
ಇದನ್ನೂ ಓದಿ: ಸರಕಾರ ಪೊಲೀಸರ ಮೂಲಕ ನನ್ನ ಹೆದರಿಸುವ ತಂತ್ರ ಮಾಡ್ತಿದೆ; ನನ್ನ ಕಟ್ಟಿಹಾಕುವ ಪ್ರಯತ್ನ ಮಾಡಲಾಗ್ತಿದೆ; ದಿಂಗಾಲೇಶ್ವರ ಶ್ರೀ