ನನ್ನ ರೌಡಿಸಂ ಸಾಬೀತು ಮಾಡಿ: ಸಚಿವ ಸಿಸಿ ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ

ನನ್ನ ರೌಡಿಸಂ ಸಾಬೀತು ಮಾಡಿ: ಸಚಿವ ಸಿಸಿ ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ
ಸಚಿವ ಸಿ.ಸಿ.ಪಾಟೀಲ ಮತ್ತು ದಿಂಗಾಲೇಶ್ವರ ಸ್ವಾಮೀಜಿ

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮನೆ ಎದುರು ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿರುವ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಇಂದು (ಏಪ್ರಿಲ್ 27) ಧರಣಿ ನಡೆಸಲಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 27, 2022 | 7:34 AM

ಗದಗ: ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಮನೆ ಎದುರು ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿರುವ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಇಂದು (ಏಪ್ರಿಲ್ 27) ಧರಣಿ ನಡೆಸಲಿದ್ದಾರೆ. ತಮ್ಮ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತು ಮಾಡಬೇಕು ಎಂದು ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಇರುವ ಸಚಿವ ಸಿ.ಸಿ.ಪಾಟೀಲ್ ಮನೆ ಮುಂದೆ ಸ್ವಾಮೀಜಿ ಧರಣಿ ನಡೆಸುವ ಸಾಧ್ಯತೆಯಿದೆ. ಲಕ್ಷ್ಮೇಶ್ವರ ತಾಲೂಕಿನ ದಿಂಗಾಲೇಶ್ವರ ಮಠ ಹಾಗೂ ಶಿರಹಟ್ಟಿ ಫಕೀರೇಶ್ವರ ಮಠದ ಪೀಠಾಧಿಪತಿಯಾಗಿ ದಿಂಗಾಲೇಶ್ವರ ಸ್ವಾಮೀಜಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ತಮ್ಮ ವಿರುದ್ಧ ವಿವಿಧ ಸಚಿವ ಸಿ.ಸಿ.ಪಾಟೀಲ ಮಾಡಿರುವ ಆರೋಪಗಳ ಬಗ್ಗೆ ಇದೇ 27ರ ಒಳಗೆ ವಿವರಣೆ ನೀಡಬೇಕು ಎಂದು ದಿಂಗಾಲೇಶ್ವರ ಶ್ರೀಗಳು ಆಗ್ರಹಿಸಿದ್ದರು. ಗಡುವು ಮುಕ್ತಾಯವಾದ ಹಿನ್ನೆಲೆಯಲ್ಲಿ ಸ್ವಾಮೀಜಿ ಇಂದು ಸಚಿವರ ವಿರುದ್ಧ ಧರಣಿ ನಡೆಸಲು ಮುಂದಾದರು.

ಏನಿದು ವಿವಾದ? ಮೂರು ಸಾವಿರ ಮಠದ ಪಿಠಾಧಿಪತಿಯಾಗಲು ದಿಂಗಾಗಲೇಶ್ವರ ಸ್ವಾಮೀಜಿ ರೌಡಿಸಂ ಮಾಡಿದ್ದರು. ಅವರ ಪೂರ್ವಾಶ್ರಮದ ಬಗ್ಗೆ ನನಗೆ ಗೊತ್ತಿದೆ ಎಂದು ಸಚಿವ ಸಿ.ಸಿ.ಪಾಟೀಲ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಈ ಹೇಳಿಕೆಯಿಂದ ಕೆರಳಿದ್ದ ದಿಂಗಾಲೇಶ್ವರ ಸ್ವಾಮೀಜಿ, ನಾನು ಏನಾಗಿದ್ದ ಎಂಬುದನ್ನು ಸಿ.ಸಿ.ಪಾಟೀಲ ವಿವರಿಸಬೇಕು ಎಂದು ಒತ್ತಾಯಿಸಿದ್ದರು.

ನನ್ನ ಪೂರ್ವಾಶ್ರಮದ ಬಗ್ಗೆ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಮನೆಯಲ್ಲಿ ಮಾಲೀಕರಾಗಿದ್ದಿರೋ ಅಥವಾ ಜೀತದಾಳು ಆಗಿದ್ದರೋ ಎಂಬ ಬಗ್ಗೆ ಸಮಾಜಕ್ಕೆ ಸ್ಪಷ್ಟನೆ ನೀಡಬೇಕು. ಸ್ಪಷ್ಟನೆ ನೀಡಲು ವಿಫಲರಾದರೆ ಅವರ ಮನೆ ಎದುರು ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

ಏನು ಕಾರಣ? ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಯ ನಂತರ ರಾಜ್ಯದಲ್ಲಿ ಕಮಿಷನ್ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿತ್ತು. ಈ ವೇಳೆ ಚಿತ್ರದುರ್ಗದಲ್ಲಿ ನಡೆದಿದ್ದ ಸಮಾರಂಭದಲ್ಲಿ ಮಾತನಾಡಿದ್ದ ದಿಂಗಾಲೇಶ್ವರ ಸ್ವಾಮೀಜಿ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಮಠಗಳು ಸಹ ಶೇ 30ರ ಕಮಿಷನ್ ಕೊಡಬೇಕಿದೆ ಎಂದು ದೂರಿದ್ದರು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು, ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು. ನಂತರದ ದಿನಗಳಲ್ಲಿ ಇದು ದೊಡ್ಡ ವಿವಾದವಾಗಿ ಬೆಳೆಯಿತು.

ಈ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸಚಿವ ಸಿ.ಸಿ.ಪಾಟೀಲ ರೌಡಿಸಂ ಆರೋಪ ಮಾಡಿದ್ದರು. ಈ ಹೇಳಿಕೆ ಖಂಡಿಸಿ ಇದೀಗ ಧರಣಿ ನಡೆಸಲು ದಿಂಗಾಲೇಶ್ವರ ಸ್ವಾಮೀಜಿ ಮುಂದಾಗಿದ್ದಾರೆ.

ಇದನ್ನೂ ಓದಿ: ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಹಣ ಗುಳುಂ; ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳಿಂದ ಹೊಸ ಬಾಂಬ್

ಇದನ್ನೂ ಓದಿ: ಸರಕಾರ ಪೊಲೀಸರ ಮೂಲಕ ನನ್ನ ಹೆದರಿಸುವ ತಂತ್ರ ಮಾಡ್ತಿದೆ; ನನ್ನ ಕಟ್ಟಿಹಾಕುವ ಪ್ರಯತ್ನ ಮಾಡಲಾಗ್ತಿದೆ – ದಿಂಗಾಲೇಶ್ವರ ಶ್ರೀ

Follow us on

Related Stories

Most Read Stories

Click on your DTH Provider to Add TV9 Kannada