Kalasa Banduri: ಗದಗ ಜಿಲ್ಲೆಯ ಬಂಡಾಯದ ನಾಡಿನಲ್ಲಿ ನಡೆದ ಐತಿಹಾಸಿಕ ಹೋರಾಟಕ್ಕೆ ಕೊನೆಗೂ ಜಯ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2022 | 6:45 PM

ಇಡೀ ರಾಜ್ಯದ ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಂತ ಕರ್ನಾಟಕ ರಾಜ್ಯ ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ಹೇಳಿದ್ದಾರೆ.

Kalasa Banduri: ಗದಗ ಜಿಲ್ಲೆಯ ಬಂಡಾಯದ ನಾಡಿನಲ್ಲಿ ನಡೆದ ಐತಿಹಾಸಿಕ ಹೋರಾಟಕ್ಕೆ ಕೊನೆಗೂ ಜಯ
ಕಳಸಾ ಬಂಡೂರಿ ಯೋಜನೆ (ಸಂಗ್ರಹ ಚಿತ್ರ)
Follow us on

ಗದಗ: ಕಳಸಾ ಬಂಡೂರಿ ನಾಲಾ ಯೋಜನೆಯ ವಿಸ್ತೃತ ವರದಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ನೀಡಿದೆ. ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆ ಕಳಸಾ ಬಂಡೂರಿ ನಾಲಾ ಯೋಜನೆ. (Kalasa Banduri Water Project) ಈ ಯೋಜನೆಗಾಗಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಮಹದಾಯಿ ಹೋರಾಟಗಾರರು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಹಗಲು, ರಾತ್ರಿ ಪ್ರತಿಭಟನೆ ಮಾಡಿದ್ದಾರೆ. ಅದೆಲ್ಲದರ ಫಲವಾಗಿ ಇಂದು (ಡಿ. 29) ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಹಾಗಾಗಿ ಮಹದಾಯಿ ಹೋರಾಟಗಾರರು ಫುಲ್ ಖುಷ್ ಆಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.

ಇಡೀ ರಾಜ್ಯದ ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ: ವಿರೇಶ್ ಸೊಬರದಮಠ

ಕೇಂದ್ರ ಸರಕಾರಕ್ಕೆ ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಧನ್ಯವಾದ ಹೇಳಿದ್ದಾರೆ. ಇಡೀ ರಾಜ್ಯದ ರೈತರ ಪರವಾಗಿ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಂತ ಕರ್ನಾಟಕ ರಾಜ್ಯ ರೈತ ಸೇನಾ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ಹೇಳಿದ್ದಾರೆ. ನರಗುಂದ ಪಟ್ಟಣದಲ್ಲಿ 2721 ದಿನಗಳಿಂದ ನಿರಂತರವಾಗಿ ಹೋರಾಟ ಮಾಡ್ತಾ ಬಂದಿದ್ದೇವೆ ಈ ಹೋರಾಟಕ್ಕೆ ಬೆಂಬಲಿಸಿದ ಸರ್ವರಿಗೂ ಶ್ರೇಯಸ್ಸು ಸಲ್ಲುತ್ತದೆ ಅಂತ ಹೋರಾಟಗಾರರು ಹೇಳಿದ್ದಾರೆ.

ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಹಸಿರು ನಿಶಾನೆ: ಉತ್ತರ ಕರ್ನಾಟಕ ಜನರಿಗೆ ಮೋದಿ ನೀಡಿದ ಕೊಡುಗೆ ಎಂದ ಬೊಮ್ಮಾಯಿ

ಆದರೆ ತಡವಾಗಿ ಅನುಮತಿ ಸಿಕ್ಕಿದ್ದಕ್ಕೆ ನಾವು ಹಬ್ಬ ಆಚರಣೆ ಮಾಡುವಷ್ಟು ಖುಷಿ ಪಡುವಂತ ವಿಚಾರವಲ್ಲ. ಯಾಕೆಂದರೆ ಹೋರಾಟದ ಆರಂಭದಲ್ಲೇ ಅನುಮತಿ ಸಿಗಬೇಕಿತ್ತು. ನಮ್ಮ ಈ ಹೋರಾಟವನ್ನ ರಾಜಕೀಯ ದಾಳವಾಗಿ ಬಳಸಿಕೊಂಡು ಬಂದಿದ್ದು, ನಮಗೆ ನೋವು ತಂದಿದೆ ಅಂತ ಹೋರಾಟಗಾರ ವೀರೇಶ ಸೊಬರದಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೆಂಡರ್ ಕರೆಯುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ

ಏನೇ ಆದರೂ ಸಹ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಇಂದಿನ ಅನುಮತಿಯೇ ಉದಾಹರಣೆ. ಆದರೆ ಅನುಮತಿ ನೀಡಿ ಸುಮ್ಮನಾಗದೇ ಶೀಘ್ರವಾಗಿ ಆದೇಶಪ್ರತಿಯನ್ನ ನೀಡಬೇಕು. ಆದಷ್ಟೂ ಬೇಗ ಕಾಮಗಾರಿ ಆರಂಭಿಸಲು ಟೆಂಡರ್ ಕರೆಯಬೇಕು. ಟೆಂಡರ್ ಕರೆಯುವವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಅಂತ ಹೋರಾಟಗಾರ ವಿರೇಶ್ ಸೊಬರದಮಠ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ತಪ್ಪು ಹೆಜ್ಜೆಗಳ ವಿರುದ್ಧವಾಗಿ ಹೋರಾಟ ಮುಂದುವರೆಸುತ್ತೇವೆ ಅಂತ ವಾಗ್ದಾಳಿ ಮಾಡಿದ್ದಾರೆ. ಒಟ್ಟಿನಲ್ಲಿ ಸುದೀರ್ಘ ಹೋರಾಟಕ್ಕೆ ಜಯ ಸಿಲ್ಲಿದ್ದು, ರೈತ ಸಮೂಹದಲ್ಲಿ ‌ಮಂದಹಾಸ ಮೂಡಿದೆ.

ಇದನ್ನೂ ಓದಿ: ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಬಹಳ ವರ್ಷದ ಕನಸು ನನಸಾಗಿದೆ ಎಂದ ಸಿಎಂ ಬೊಮ್ಮಾಯಿ

ಈ ಕುರಿತಾಗಿ ಸಿಎಂ ಬಸವರಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಇದು ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವಾಗಲೇ ಈ ಸುದ್ದಿ ಬಂದಿರೋದು ಮತ್ತೊಂದು ದೊಡ್ಡ ಖುಷಿ ತಂದಿದೆ. ಬಹಳ ವರ್ಷದ ಕನಸು ನನಸಾಗಿದೆ. ಇಡೀ ಕರ್ನಾಟಕ ಭಾಗದ ಜನತೆ ಹಾಗೂ ಎಲ್ಲಾ ಸದಸ್ಯರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದರು. ಉತ್ತರ ಕರ್ನಾಟಕ ಭಾಗದ ಮಹತ್ವದ ಯೋಜನೆ ಕಳಸಾ ಬಂಡೂರಿ ಯೋಜನೆ.

ನಮ್ಮ ತಂದೆಯವರು ಸಿಎಂ ಇದ್ದಾಗ 1988ರಲ್ಲಿ ಒಂದು ಒಪ್ಪಂದ ಮಾಡಿಕೊಳ್ಳಲು ಸಭೆ ನಡೆದಿತ್ತು. ರಾಣೆಯವರು ಮಹಾರಾಷ್ಟ್ರದಲ್ಲಿ ಸಿಎಂ ಇದ್ರು. ಕಳಸ ಡ್ಯಾಮ್ ಕಟ್ಟಿ ನಮಗೆ ನೀರು ಕೊಡೋದು, ನಾವು ಅವರಿಗೆ ವಿದ್ಯುತ್ ಕೊಡೋದು ಅಂತ ನಿರ್ಧರಿಸಲಾಗಿತ್ತು. ಆದರೆ ಮುಂದಿನ ಸರ್ಕಾರ ಒಪ್ಪಲಿಲ್ಲ. ನಮ್ಮ ಸರ್ಕಾರ ಮಹದಾಯಿ ಯೋಜನೆ ಮಾಡಲು 2002ರಿಂದ ಕಳಸಾದಿಂದ ಡೈವರ್ಟ್ ಮಾಡಲು ಚರ್ಚಿಸಲಾಯಿತು. ಆದರೆ ಗೋವಾ ತಗಾದೆ ತೆಗೆಯಿತು ಎಂದು ಹೇಳಿದರು.

ವರದಿ: ಸಂಜೀವ ಪಾಂಡ್ರೆ ಟಿವಿ9, ಗದಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:44 pm, Thu, 29 December 22