ಶಾಲಾ ಮಕ್ಕಳ ಮೇಲೆ ಲಕ್ಕುಂಡಿ ಉತ್ಖನನದ ಎಫೆಕ್ಟ್​​: ಧೂಳಿನ ಅಬ್ಬರಕ್ಕೆ ಪುಟಾಣಿಗಳು ಹೈರಾಣು

ಗದಗದ ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ಶಾಲಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಉತ್ಖನನದಿಂದ ಉಂಟಾಗುವ ಧೂಳು ವಿವೇಕಾನಂದ ಶಾಲೆಯ ಪುಟಾಣಿ ಮಕ್ಕಳಲ್ಲಿ ಡಸ್ಟ್ ಅಲರ್ಜಿ, ಜ್ವರ, ಕೆಮ್ಮಿಗೆ ಕಾರಣವಾಗುತ್ತಿದ್ದು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಕ್ಕಳ ಆರೋಗ್ಯ ಸಮಸ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಹಾಜರಾತಿಯೂ ಕುಸಿಯುತ್ತಿದೆ.

ಶಾಲಾ ಮಕ್ಕಳ ಮೇಲೆ ಲಕ್ಕುಂಡಿ ಉತ್ಖನನದ ಎಫೆಕ್ಟ್​​: ಧೂಳಿನ ಅಬ್ಬರಕ್ಕೆ ಪುಟಾಣಿಗಳು ಹೈರಾಣು
ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ
Image Credit source: Google
Edited By:

Updated on: Jan 31, 2026 | 9:39 PM

ಗದಗ, ಜನವರಿ 31: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗಿದೆ. 14 ದಿನಗಳಲ್ಲಿ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಆ ಮೂಲಕ ಗ್ರಾಮದ ಪುರಾತನ ಮಹತ್ವ ಮತ್ತಷ್ಟು ಬೆಳಕಿಗೆ ಬಂದಿದೆ. ಆದ್ರೆ ಮತ್ತೊಂದೆಡೆ ಇದೇ ಉತ್ಖನನ ಕಾರ್ಯ ಶಾಲಾ ಮಕ್ಕಳ ಮೇಲೆ ಗಂಭೀರ ಪರಿಣಾಮ ಉಂಟುಮಾಡ್ತಿದೆ. ಧೂಳಿನ ಹಿನ್ನೆಲೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿರುವ ವಿವೇಕಾನಂದ ಶಾಲೆಯ ಪುಟಾಣಿ ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ.

ಉತ್ಖನನದ ವೇಳೆ ಉಂಟಾಗ್ತಿರೋ ಧೂಳಿನಿಂದ ಎಲ್‌ಕೆಜಿ, ಯುಕೆಜಿ ಮಕ್ಕಳಲ್ಲಿ ಡಸ್ಟ್ ಅಲರ್ಜಿ, ಜ್ವರ, ಕೆಮ್ಮು ಕಾಣಿಸಿಕೊಳ್ಳುತ್ತಿದ್ದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದ ಕಾರಣ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇನ್ನು ಶಾಲೆಯ ಶಿಕ್ಷಕರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿರುವ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಮುಖ್ಯ ಶಿಕ್ಷಕರು ಶಿಕ್ಷಕಿಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ. ಈ ಬಗ್ಗೆ ಟಿವಿ9 ವರದಿ ಬೆನ್ನಲ್ಲೇ ಉತ್ಖನನ ಸ್ಥಳದಲ್ಲಿ ನೀರು ಸಿಂಪಡಣೆ ಕಾರ್ಯ ಆರಂಭಿಸಲಾಗಿದೆ.

ಇದನ್ನೂ ಓದಿ: ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!

ಇನ್ನು ಉತ್ಖನನ ಸ್ಥಳಕ್ಕೆ ರಾಜ್ಯ ಪುರಾತತ್ವ ಇಲಾಖೆ ನಿರ್ದೇಶಕ ಶೆಜೇಶ್ವರ ಅವರು ಭೇಟಿ ನೀಡಿದ್ದು, ಪತ್ತೆಯಾದ ಶಿಲ್ಪಗಳು, ಶಿಲಾ ಅವಶೇಷಗಳು ಹಾಗೂ ಇತರೆ ಪುರಾತನ ವಸ್ತುಗಳನ್ನು ಮಾಹಿತಿ ಕಲೆ ಹಾಕಿದ್ದಾರೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕೂಡ ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಪುರಾತತ್ವ ಇಲಾಖೆಗೆ ಸೇರಿದ ದೇವಸ್ಥಾನಗಳನ್ನು ವೀಕ್ಷಿಸಿದ ಅವರು, ಕುಂಬಾರೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಮನೆಗಳ ಶೀಘ್ರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪರಿಹಾರ ಹಣ ನೀಡಲಾಗಿದ್ದು, ಸ್ಥಳಾಂತರ ಪ್ರಕ್ರಿಯೆ ಕೇಂದ್ರ ಪುರಾತತ್ವ ಇಲಾಖೆ ಮೂಲಕ ನಡೆಯಲಿದೆ ಎಂದು ತಿಳಿಸಿದ್ದಾರೆ. ಲಕ್ಕುಂಡಿಯ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿಗೆ 2025–26ನೇ ಸಾಲಿನಲ್ಲಿ ಆರು ದೇವಸ್ಥಾನಗಳಿಗೆ ಒಟ್ಟು 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂಬ ಬಗ್ಗೆಯೂ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.