ನಿಧಿ ಸಿಕ್ಕಿದ್ದೇ ಸಿಕ್ಕಿದ್ದು, ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ
ಗದಗದ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಶೋಧ, ಸರ್ಕಾರಿ ಉತ್ಖನನದಿಂದ ಐತಿಹಾಸಿಕ ಮಹತ್ವ ಹೆಚ್ಚಿದೆ. ಉತ್ಖನನದಲ್ಲಿ ಈವರೆಗೆ ಅನೇಕ ಪ್ರಾಚೀನ ವಸ್ತುಗಳು ದೊರೆತಿವೆ. ಜಗತೆಗೆ ಹೆದ್ದಾರಿಗಳಿಂದಾಗಿ ಸಂಪರ್ಕವೂ ಹೆಚ್ಚಾಗಿದ್ದು, ಈ ಎಲ್ಲ ಬೆಳವಣಿಗೆಗಳಿಂದಾಗಿ ಭೂಮಿಯ ಬೆಲೆ ಹೆಚ್ಚಳವಾಗಿದೆ. ಲಕ್ಕುಂಡಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಭೂಮಿಯ ಬೆಲೆ ದುಪ್ಪಟ್ಟಾಗಿರುವುದು ತಿಳಿದುಬಂದಿದೆ.

ಗದಗ, ಜನವರಿ 21: ಗದಗದ (Gadag) ಲಕ್ಕುಂಡಿಯಲ್ಲಿ (Lakkundi) ಮನೆಗೆ ಪಾಯ ಆಗೆಯುವಾಗ ಬಂಗಾರದ ನಿಧಿ ಸಿಕ್ಕಿದ್ದು ನಂತರ ಹಲವಾರು ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದೀಗ ಲಕ್ಕುಂಡಿಯಲ್ಲಿ ಸರ್ಕಾರದ ವತಿಯಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು ಆರನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಗಳ ಉತ್ಖನನದಲ್ಲಿ ಅನೇಕ ಐತಿಹಾಸಿಕ ವಸ್ತುಗಳು ದೊರೆತಿದ್ದು ಪಟ್ಟಣದ ಪಾರಂಪರಿಕ ಮಹತ್ವ ಹೆಚ್ಚಿಸಿದೆ. ಮತ್ತೊಂದೆಡೆ, ಈ ಎಲ್ಲ ಬೆಳವಣಿಗೆಗಳಿಂದಾಗಿ ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಎರಡು ವರ್ಷಗಳ ಹಿಂದಿನ ದರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ ಎಂದು ಮೂಲಗಳು ತಿಳಿಸಿವೆ.
ಕೇವಲ ಎರಡು ವರ್ಷಗಳ ಹಿಂದೆ, ಅಂದರೆ 2023 ರಲ್ಲಿ ಲಕ್ಕುಂಡಿ ಬಳಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಕೃಷಿ ಭೂಮಿಯ ಬೆಲೆ ಎಕರೆಗೆ ಸುಮಾರು 50 ಲಕ್ಷ ರೂ.ಗಳಷ್ಟಿತ್ತು. ಈಗ ಬೆಲೆ ಬಹುತೇಕ ದ್ವಿಗುಣಗೊಂಡಿದ್ದು, ಈ ಪ್ರದೇಶದ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಲಕ್ಕುಂಡಿಯಲ್ಲಿ ಭೂಮಿ ಬೆಲೆ ಹೆಚ್ಚಳಕ್ಕೆ ಅಸಲಿ ಕಾರಣ ಏನು?
ಗ್ರಾಮದ ಪಾರಂಪರಿಕ ಮೌಲ್ಯದಲ್ಲಿ ಹೆಚ್ಚಳ ಮತ್ತು ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಂಪರ್ಕದಲ್ಲಿ ಸುಧಾರಣೆ ಕಂಡುಬಂದಿದ್ದು ಈ ಪ್ರದೇಶದ ತ್ವರಿತ ಬೆಳವಣಿಗೆಗೆ ಕಾರಣ ಎಂದು ರಿಯಲ್ ಎಸ್ಟೇಟ್ ಏಜೆಂಟರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಕ್ಕುಂಡಿ ಮತ್ತು ಸುತ್ತಮುತ್ತ ಉತ್ಖನನ ಪ್ರಾರಂಭಿಸುವ ಪ್ರವಾಸೋದ್ಯಮ ಇಲಾಖೆಯ ನಿರ್ಧಾರ ಕೂಡ ಗ್ರಾಮದ ಭವಿಷ್ಯವನ್ನು ಗಮನಾರ್ಹವಾಗಿ ಬದಲಾಯಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ವರದ ಉಲ್ಲೇಖಿಸಿದೆ.
ಉತ್ಖನನವು ಐತಿಹಾಸಿಕ ಕಲಾಕೃತಿಗಳು ಮತ್ತು ಸಂಪತ್ತನ್ನು ಹೊರತೆಗೆಯಲು ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಉತ್ತಮ ಪುನರ್ವಸತಿ ಮತ್ತು ವಸತಿಗೆ ದಾರಿ ಮಾಡಿಕೊಡುತ್ತದೆ ಎಂದು ಗ್ರಾಮಸ್ಥರು ಆಶಿಸಿದ್ದಾರೆ. ಪೂರ್ವಜರ ಮನೆಗಳನ್ನು ಹೊಂದಿರುವ ಕೆಲವು ನಿವಾಸಿಗಳು ಸರ್ಕಾರವು ತಮ್ಮ ಅಸ್ತಿತ್ವದಲ್ಲಿರುವ ಸ್ಥಳ ಪ್ರದೇಶಗಳಿಗೆ ಅನುಗುಣವಾಗಿ ಪರ್ಯಾಯ ಮನೆಗಳನ್ನು ಒದಗಿಸಬೇಕೆಂದು ನಿರೀಕ್ಷಿಸಿದ್ದಾರೆ. 70ರ ಹರೆಯದ ನಿವಾಸಿಯೊಬ್ಬರು ತಮ್ಮ ಕುಟುಂಬವು ಎರಡು ಅಂತಸ್ತಿನ ಪೂರ್ವಜರ ಮನೆಯನ್ನು ಹೊಂದಿದ್ದು, ಸರ್ಕಾರವು ಅದರ ಬದಲಿಗೆ ಒಳ್ಳೆಯ ಮನೆಯನ್ನು ಒದಗಿಸುತ್ತದೆ ಎಂದು ಆಶಿಸಿದ್ದಾರೆ. ಏಕೆಂದರೆ ಅವರು ತಮ್ಮ ಪೂರ್ವಜರು ನಿರ್ಮಿಸಿದ ಮನೆಗಳನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.
ಉತ್ಖನನ ಸ್ಥಳಗಳಲ್ಲಿ ಹಾಜರಿದ್ದ ಹಲವಾರು ಗ್ರಾಮಸ್ಥರು, ಆವಾಸ್ ಯೋಜನೆಯಂತಹ ಯೋಜನೆಗಳ ಅಡಿಯಲ್ಲಿ ತಮಗೆ ಮನೆಗಳನ್ನು ನೀಡಬಾರದು. ಬದಲಿಗೆ ತಮ್ಮ ಅಸ್ತಿತ್ವದಲ್ಲಿರುವ ಆಸ್ತಿಗಳ ಪಾರಂಪರಿಕ ಮೌಲ್ಯವನ್ನು ಪರಿಗಣಿಸಿ ಸರಿಯಾದ ಬದಲಿ ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ
ಆದರೆ, ಕೃಷಿ ಭೂಮಿಯನ್ನು ವಸತಿ ನಿವೇಶನಗಳಾಗಿ ಪರಿವರ್ತಿಸುವುದರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯು ಸುಗಮ ಸಂಪರ್ಕವನ್ನು ಒದಗಿಸುತ್ತಿದ್ದು, ಲಕ್ಕುಂಡಿ ಬಗ್ಗೆ ಹೂಡಿಕೆದಾರರ ಆಸಕ್ತಿ ತೀವ್ರವಾಗಿ ಹೆಚ್ಚಾಗಿದೆ ಎಂದೂ ವರದಿ ತಿಳಿಸಿದೆ.
