AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನ ಮಾತ್ರವಲ್ಲ, ಕಲೆಗಳಲ್ಲೂ ಶ್ರೀಮಂತ ಲಕ್ಕುಂಡಿ! ನಾಲ್ಕು ದಿನಗಳ ಉತ್ಖನನದಲ್ಲಿ ಏನೆಲ್ಲಾ ಸಿಕ್ಕಿದೆ ಗೊತ್ತಾ?

ಗದಗ ಲಕ್ಕುಂಡಿಯಲ್ಲಿ ನಿಧಿ ಪತ್ತೆಯ ನಂತರ ಆರಂಭವಾದ ಉತ್ಖನನದಿಂದ ಪ್ರಾಚೀನ ಕೋಟೆ ಗೋಡೆ, ದೇವಾಲಯಗಳ ಅವಶೇಷಗಳು ಮತ್ತು ಅಪಾರ ಶಿಲ್ಪಕಲೆಗಳು ಪತ್ತೆಯಾಗಿವೆ. ಚಾಲುಕ್ಯ, ಹೊಯ್ಸಳ, ವಿಜಯನಗರ ಕಾಲದ ಐತಿಹಾಸಿಕ ಮಹತ್ವವನ್ನು ಸಾರುತ್ತಿರುವ ಈ ಪುರಾತತ್ವ ನಿಧಿಗಳು, ಲಕ್ಕುಂಡಿಯ ಕಲಾ, ಸಂಸ್ಕೃತಿ ಮತ್ತು ಐತಿಹಾಸಿಕ ಸಂಪತ್ತನ್ನು ಜಗತ್ತಿಗೆ ಪರಿಚಯಿಸುತ್ತಿವೆ. ಸತತ ಮೂರು ದಿನಗಳ ಉತ್ಖನನದ ನಂತರ ನಾಲ್ಕನೇ ದಿನವೂ ಪ್ರಾಚ್ಯವಸ್ತುಗಳು ಪತ್ತೆಯಾಗಿವೆ.

ಚಿನ್ನ ಮಾತ್ರವಲ್ಲ, ಕಲೆಗಳಲ್ಲೂ ಶ್ರೀಮಂತ ಲಕ್ಕುಂಡಿ! ನಾಲ್ಕು ದಿನಗಳ ಉತ್ಖನನದಲ್ಲಿ ಏನೆಲ್ಲಾ ಸಿಕ್ಕಿದೆ ಗೊತ್ತಾ?
ಚಿನ್ನ ಮಾತ್ರವಲ್ಲ, ಕಲೆಗಳಲ್ಲೂ ಶ್ರೀಮಂತ ಲಕ್ಕುಂಡಿ!
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jan 19, 2026 | 11:32 AM

Share

ಗದಗ , ಜನವರಿ 19: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ (Lakkundi Excavation) ಕಾರ್ಯ ದಿನಕ್ಕೊಂದು ರಹಸ್ಯವನ್ನು ಬಹಿರಂಗಪಡಿಸುತ್ತಿದ್ದು, ರಾಜ್ಯದ ಜನರ ಕುತೂಹಲವನ್ನು ಹೆಚ್ಚಿಸಿದೆ. ಗ್ರಾಮದ ಮನೆಯೊಂದರ ಅಡಿಪಾಯ ತೆಗೆಯುವಾಗ ನಿಧಿ ಸಿಕ್ಕ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದ್ದು, ದೇವಸ್ಥಾನಗಳ ಅವಶೇಷಗಳು ಸೇರಿದಂತೆ ರಾಶಿ ರಾಶಿ ಶಿಲ್ಪಕಲೆಗಳು ಪತ್ತೆಯಾಗುತ್ತಿವೆ.

ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ನಡೆಯುತ್ತಿರುವ ವೇಳೆ, ಪಕ್ಕದಲ್ಲಿದ್ದ ಖಾಸಗಿ ಸಂಸ್ಥೆಯ ಶಾಲೆಯನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಸಂದರ್ಭದಲ್ಲಿ ಪುರಾತನ ಕಾಲದ ಬೃಹತ್ ಕೋಟೆಗೋಡೆ ಗೋಚರಿಸಿದೆ. ಈ ಗೋಡೆಯೊಳಗೆ ಹುದುಗಿಹೋಗಿದ್ದ ಪ್ರಾಚ್ಯವಸ್ತುಗಳು ಹಾಗೂ ಶಿಲ್ಪಕಲೆಗಳು ಲಕ್ಕುಂಡಿಯ ಕಲಾ ಶ್ರೀಮಂತಿಕೆಯನ್ನು ಸಾರುತ್ತಿವೆ.

ಉತ್ಖನನದ ವೇಳೆ ಬೃಹತ್ ಹಾವು ಪ್ರತ್ಯಕ್ಷ, ಶಿವಲಿಂಗ ಪತ್ತೆ!

ಅಚ್ಚರಿಯ ವಿಷಯವೆಂದರೆ ಉತ್ಖನನದ ವೇಳೆ ಕೋಟೆಗೋಡೆಯ ಬಳಿ ಬೃಹತ್ ಆಕಾರದ ನಾಗರ ಹಾವು ಕಾಣಿಸಿಕೊಂಡು ಕಾರ್ಮಿಕರಲ್ಲಿ ಭಯ ಹುಟ್ಟಿಸಿತ್ತು. ಈ ಹಿನ್ನೆಲೆ ಸುಮಾರು ಅರ್ಧ ಗಂಟೆಗಳ ಕಾಲ ಉತ್ಖನನ ಕಾರ್ಯ ಸ್ಥಗಿತಗೊಳಿಸಲಾಯಿತು. ಅಮವಾಸ್ಯೆಯ ದಿನವೇ ಹಾವು ಕಾಣಿಸಿಕೊಂಡಿರುವುದರಿಂದ, ನಿಧಿ ಇರುವ ಜಾಗದಲ್ಲಿ ಹಾವು ಇರುತ್ತದೆ ಎಂಬ ಗ್ರಾಮಸ್ಥರ ನಂಬಿಕೆಗೆ ಇನ್ನಷ್ಟು ಪುಷ್ಠಿ ಕೊಟ್ಟಂತಾಗಿದೆ.

ಇದನ್ನೂ ಓದಿ ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್​​ ಹಾವು ಪ್ರತ್ಯಕ್ಷ!

ಉತ್ಖನನದ ವೇಳೆ ಕೋಟೆಗೋಡೆಯಲ್ಲಿಯೇ ಪುರಾತನ ಕಾಲದ ಚಿಕ್ಕ ಶಿವಲಿಂಗವೂ ಪತ್ತೆಯಾಗಿದ್ದು, ಈ ಕೋಟೆಗೋಡೆ ನಿರ್ಮಾಣಕ್ಕೆ ಹಾಳಾದ ದೇವಸ್ಥಾನಗಳ ಶಿಲ್ಪ ಹಾಗೂ ಸ್ಮಾರಕ ವಸ್ತುಗಳನ್ನು ಬಳಸಿರಬಹುದೆಂದು ಪುರಾತತ್ವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಾಳುಕ್ಯರು, ಹೊಯ್ಸಳರು ಹಾಗೂ ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ಲಕ್ಕುಂಡಿ ಪ್ರಮುಖ ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿತ್ತು ಎನ್ನಲಾಗಿದೆ.

ಲಕ್ಕುಂಡಿಯಲ್ಲಿ ಪುರಾತನ ವಸ್ತುಗಳ ಪತ್ತೆ ಹೊಸದೇನಲ್ಲ

ಲಕ್ಕುಂಡಿಯಲ್ಲಿ ಒಂದು ಕಾಲದಲ್ಲಿ ನಾಣ್ಯಗಳ ತಯಾರಿಕೆ ನಡೆಯುತ್ತಿತ್ತೆಂಬ ದಾಖಲೆಗಳಿದ್ದು, ಈ ಪ್ರದೇಶದಲ್ಲಿ ಅಪಾರ ಸಿರಿ ಸಂಪತ್ತು ಅಡಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಉತ್ಖನನ ಸ್ಥಳಕ್ಕೆ ಕರ್ನಾಟಕ ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜು, ನಿರ್ದೇಶಕ ಶೆಜೇಶ್ವರ ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಲಕ್ಕುಂಡಿಯಲ್ಲಿ ಹೀಗೆ ಪುರಾತನ ವಸ್ತುಗಳ ಪತ್ತೆ ಹೊಸದೇನಲ್ಲ. 91 ವರ್ಷದ ತೋಟಯ್ಯ ಕಾಶಯ್ಯ ಪತ್ರಿಮಠ ಹಲವು ವರ್ಷಗಳಿಂದ ಪಂಚನೀಲ, ಇಂದ್ರನೀಲ, ನೀಲದ ಹರಳು, ಹವಳ, ಮುತ್ತು, ಚಿನ್ನ, ವಜ್ರ, ಪಚ್ಚೆ ಹಾಗೂ ಸ್ಫಟಿಕ ನಾಣ್ಯಗಳನ್ನು ಸಂಗ್ರಹಿಸಿಕೊಂಡು ಬಂದಿದ್ದಾರೆ. ಮಳೆಗಾಲದಲ್ಲಿ ಇಂತಹ ಮುತ್ತು, ರತ್ನಗಳ ಹುಡುಕಾಟ ನಡೆಸುವುದು ತನ್ನ ನಿತ್ಯದ ಕಾಯಕವಾಗಿತ್ತು ಎಂದು ಸ್ವತಃ ತೋಟಯ್ಯನವರೇ ಹೇಳಿದ್ದಾರೆ.

ಇದನ್ನೂ ಓದಿ ಲಕ್ಕುಂಡಿ: ನಿಧಿ ಸಂಗ್ರಹ ಮಾಡೋದೇ ಈ ಅಜ್ಜನ ಕಾಯಕ; ಸಂಗ್ರಹಿಸಿದ ವಸ್ತುಗಳನ್ನ ಸರ್ಕಾರಕ್ಕೆ ನೀಡಿಲ್ಲ ಎಂದ ತೋಟಯ್ಯ

ಅದೇ ರೀತಿ, ಹಾಲಗುಂಡಿ ಬಸವಣ್ಣ ದೇವಸ್ಥಾನದ ಸಮೀಪದ ಜಮೀನಿನಲ್ಲಿ ಕಳೆದ 40 ವರ್ಷಗಳಿಂದ ಶೋಧ ಕಾರ್ಯ ನಡೆಸುತ್ತಿರುವ ಬಸಪ್ಪ ಬಡಿಗೇರ ಅವರು ಮುತ್ತು, ಹವಳ, ನೀಲಮಣಿ, ಸ್ಪಟಿಕ, ಬಿಳಿ ಹವಳ, ಕರಿಪುಕ್ಕಾ, ಹಸಿರು ಮಣಿ ಸೇರಿದಂತೆ ಅನೇಕ ಮೌಲ್ಯಯುತ ವಸ್ತುಗಳನ್ನು ಪತ್ತೆಹಚ್ಚಿದ್ದು, ಹಲವು ಬಾರಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಮತ್ತೆ ದೊರೆತ ವಸ್ತುಗಳನ್ನೂ ಸರ್ಕಾರಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

ಲಕ್ಕುಂಡಿಯ ಇತಿಹಾಸ

ಲಕ್ಕುಂಡಿಯಲ್ಲಿ ನಡೆಯುತ್ತಿರುವ ನಾಲ್ಕನೇ ದಿನದ ಉತ್ಖನನದ ವೇಳೆ ಪುರಾತನ ಕಾಲದ ಕೊಡಲಿ ಆಕಾರದ ಅವಶೇಷವೊಂದು ಪತ್ತೆಯಾಗಿದ್ದು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಶಿಲೆಯು ಮೂರು ಅಡಿ ಆಳದಲ್ಲಿ ದೊರಕಿದೆ. ಈ ಹಿಂದೆ ಉತ್ಖನನದ ಮೊದಲ ದಿನ ಶಿವಲಿಂಗ ಪಾಣಿಪೀಠ ಮತ್ತು ನಿನ್ನೆ ಶಿವಲಿಂಗ ಹಾಗೂ ನಾಗರ ಚಿತ್ರವಿರುವ ಅವಶೇಷಗಳು ಪತ್ತೆಯಾಗಿದ್ದವು. ಲಕ್ಕುಂಡಿ ಗ್ರಾಮವು ಚಾಲುಕ್ಯರು ಮತ್ತು ರಾಷ್ಟ್ರಕೂಟರ ಕಾಲದ ಸುಮಾರು 101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿದ್ದು, ಇದು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ನಾಲ್ಕರಿಂದ ಐದು ಅಡಿ ಆಳದಲ್ಲಿ ಇನ್ನಷ್ಟು ಪ್ರಮುಖ ಅವಶೇಷಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ , ಕಲಾ, ಸಂಸ್ಕೃತಿ ಮತ್ತು ಇತಿಹಾಸದ ಶ್ರೀಮಂತಿಕೆಯನ್ನೂ ಮತ್ತೊಮ್ಮೆ ಜಗತ್ತಿಗೆ ಪರಿಚಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪುರಾತನ ರಹಸ್ಯಗಳು ಬೆಳಕಿಗೆ ಬರಲಿವೆ ಎಂಬ ನಿರೀಕ್ಷೆ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.