AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್​​ ಹಾವು ಪ್ರತ್ಯಕ್ಷ!

ಗದಗ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ನಂತರ ಆರಂಭವಾದ ಉತ್ಖನನದ 3ನೇ ದಿನದ ವೇಳೆ ಹಾವೊಂದು ಪ್ರತ್ಯಕ್ಷವಾಗಿ ಕಾರ್ಮಿಕರನ್ನು ಬೆಚ್ಚಿಬೀಳಿಸಿದೆ. ನಿಧಿಯನ್ನು ಸರ್ಪ ಕಾಯುತ್ತದೆ ಎಂಬ ಗ್ರಾಮಸ್ಥರ ನಂಬಿಕೆಗೆ ಇದು ಪುಷ್ಟಿ ನೀಡಿದಂತಾಗಿದ್ದು, ಲಕ್ಕುಂಡಿ ಜನರಲ್ಲಿ ಆತಂಕ ಹೆಚ್ಚಿದೆ. ಆದರೆ, ಇತಿಹಾಸ ತಜ್ಞರು ಮಾತ್ರ ಇದು ಕೇವಲ ನಂಬಿಕೆ, ವೈಜ್ಞಾನಿಕವಾಗಿ ಇದಕ್ಕೆ ಆಧಾರವಿಲ್ಲ ಎನ್ನುತ್ತಿದ್ದಾರೆ.

ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್​​ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನImage Credit source: Google
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jan 18, 2026 | 9:29 AM

Share

ಗದಗ, ಜನವರಿ 18: ಮನೆಗಾಗಿ ಅಡಿಪಾಯ ಮಾಡುವ ವೇಳೆ ಗದಗ ತಾಲೂಕಿನ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ವಿಚಾರ ದೇಶಾದ್ಯಂತ ಸುದ್ದಿಯಾಗಿತ್ತು. ಸಿಕ್ಕ ಆಭರಣಗಳನ್ನು ಕುಟುಂಬ ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಹತ್ತಾರು ಬೆಳವಣಿಗೆಗಳು ನಡೆದು ಗ್ರಾಮದಲ್ಲಿ ಉತ್ಖನನ ಕಾರ್ಯವನ್ನು ಆರಂಭಿಸಲಾಗಿತ್ತು. ಅದರ ಭಾಗವಾಗಿ ಇಂದು ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿಯ ಆವರಣದಲ್ಲಿ ಮೂರನೇ ದಿನದ ಉತ್ಖನನದ ವೇಳೆ ಕಾರ್ಮಿಕರು ಬೆಚ್ಚಿಬೀಳುವಂತೆ ಘಟನೆಯೊಂದು ನಡೆದಿದೆ. ನಿಧಿಯನ್ನು ಸರ್ಪ ಕಾಯುತ್ತದೆ ಎಂಬ ನಂಬಿಕೆಗೆ ಕಾಕತಾಳೀಯವೆಂಬಂತೆ ಹಾವೊಂದು ಸ್ಥಳದಲ್ಲಿ ಪ್ರತ್ಯಕ್ಷವಾಗಿರೋದು ಕೆಲಸಗಾರರನ್ನು ಭೀತಿಗೊಳಿಸಿದೆ.

ಗ್ರಾಮದಲ್ಲಿ ಮಳೆಗಾಲದಲ್ಲಿ ಹಿಂದೆಲ್ಲ ಮಣ್ಣು ಅಗೆಯುವಾಗ ಚಿನ್ನದ ತುಂಡುಗಳು ಕಾಣಿಸುತ್ತಿದ್ದವು. ಇಲ್ಲಿ ಎಲ್ಲೇ ಅಗೆದರೂ ಬಂಗಾರ ಸಿಗುತ್ತಿತ್ತು. ಆದರೆ, ಈ ನಿಧಿ ಆಸೆಯ ಹಿಂದೆ ಹೋದವರು ರಕ್ತಕಾರಿ ಸತ್ತಿದ್ದಾರೆ ಎಂದು ಗ್ರಾಮಸ್ಥರು ಈ ಹಿಂದೆ ಹೇಳಿದ್ದರು. ನಿಧಿಯನ್ನು ಸರ್ಪ ಕಾಯುತ್ತೆ. ಹೀಗಾಗಿ ಅದರ ತಂಟೆಗೆ ಯಾರೂ ಹೋಗಬಾರದು ಎಂಬ ಅಭಿಪ್ರಾಯಗಳು ಕೆಳಿಬಂದಿದ್ದವು. ಈ ನಡುವೆ ಈಗ ಉತ್ಖನನದ ವೇಳೆ ಹಾವು ಪ್ರತ್ಯಕ್ಷವಾಗಿರೋದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಹಾವು ನೋಡಿ ಜೆಸಿಬಿ ಚಾಲಕ ಗಾಬರಿ ಆಗಿದ್ದಾನೆ. ಹೀಗಾಗಿ ಲಕ್ಕುಂಡಿ ಗ್ರಾಮಕ್ಕೆ ಏನು ಕಂಟಕ ಕಾದಿದೆಯೋ ಎನ್ನುವ ಹೆದರಿಕೆ ಶುರುವಾಗಿರೋದಾಗಿ ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಪ್ರದೇಶಕ್ಕೆ ಲಾಕ್! ಚಿತ್ರೀಕರಣವನ್ನು ಸಂಪೂರ್ಣ ನಿರ್ಬಂಧಿಸಿ ಡಿಸಿ ಆದೇಶ

‘ಎಲ್ಲವೂ ಬರೀ ನಂಬಿಕೆ’

ಇನ್ನು ನಿಧಿಯನ್ನು ಸರ್ಪ, ಕಾಡೆಮ್ಮೆ ಕಾಯುತ್ತದೆ ಎನ್ನುವುದು ಬರೀ ನಂಬಿಕೆ. ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಉತ್ಖನನ ಮಾಡುವ ಅಧಿಕಾರಿಗಳಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಟಿವಿ9ಗೆ ಇತಿಹಾಸ ತಜ್ಞ ಡಾ. ಶೆಲ್ವಪಿಳೈ ಅಯ್ಯಂಗಾರ್ ತಿಳಿಸಿದ್ದಾರೆ. ರಕ್ತ ಕಾರಿಕೊಂಡು ಸಾಯುತ್ತಾರೆ, ಕೆಟ್ಟದಾಗುತ್ತದೆ ಇದೆಲ್ಲವೂ ನಂಬಿಕೆ ಅಷ್ಟೇ. ಕೇರಳದ ಅನಂತ ಪದ್ಮನಾಭ ದೇಗುಲದ ನಿಧಿ ವಿಚಾರದಲ್ಲೂ ದಿಗ್ಬಂಧನ ಎಂದು ಏನೂ ಇಲ್ಲ. ಬಾಕಿ ಇರುವ ಬಾಗಿಲು ತೆಗೆಯುವ ವಿಧಾನ ಗೊತ್ತಾಗಿಲ್ಲ ಅಷ್ಟೇ. ಎಲ್ಲವೂ ಕೇಳಿರುವುದು, ನಾವು ಯಾರೂ ನೋಡಿಲ್ಲ. ಹಿಂದೆ ನಿಧಿ ಹಾಗೂ ಟಂಕ ಶಾಲೆಯನ್ನು ಊರಿನ ಹೊರಗೆ ಇಡುತ್ತಿದ್ದರು. ರಾಜ್ಯದ ಮೇಲೆ ದಾಳಿಯಾದರೂ ಅವುಗಳ ರಕ್ಷಣೆಗೆ ಈ ಕ್ರಮ ಅನುಸರಿಸಲಾಗುತ್ತಿತ್ತು ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.