ಐತಿಹಾಸಿಕ ಲಕ್ಕುಂಡಿಯಲ್ಲಿ 6ನೇ ದಿನದ ಉತ್ಖನನದಲ್ಲಿ ಏನೇನು ಸಿಕ್ತು? ಇಲ್ಲಿದೆ ವಿವರ
ಐತಿಹಾಸಿಕ ನಾಡು, ದೇಗುಲಗಳ ಬೀಡು, ಬಂಗಾರದ ಖಣಜ ಲಕ್ಕುಂಡಿ. ಈ ಚಿನ್ನದ ಊರಲ್ಲಿ 6ನೇ ದಿನದ ಉತ್ಖನ ಕಾರ್ಯ ಅಂತ್ಯವಾಗಿದೆ. ಭೂಗರ್ಭ ಅಗೆದಂತೆಲ್ಲಾ ಭೂತಾಯಿ ಒಡಲೊಳಗೆ ಹುದುಗಿರುವ ಅನೇಕ ಪ್ರಾಚ್ಯಾವಶೇಷಗಳು, ಶಿಲಾಕೃತಿಗಳು, ಅನೇಕ ಅವಶೇಷಗಳು ಪತ್ತೆಯಗುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಇಂದು ಮೂಳೆಗಳ ತುಣುಕುಗಳು, ಬೃಹತ್ ಆಕಾರದ ಕಲ್ಲಿನ ಬಂಡೆ ಪತ್ತೆಯಾಗಿದೆ. ಇನ್ನು ಏನೆಲ್ಲಾ ಅವಶೇಷಗಳು ಸಿಗಬಹುದು ಎಂಬ ಕುತೂಹಲ ಮನೆ ಮಾಡಿದೆ.

ಗದಗ, (ಜನವರಿ 21): ಲಕ್ಕುಂಡಿಯಲ್ಲಿ ಚಿನ್ನದ ನಿಧಿ (Lakkundi Gold Treasure) ಸಿಕ್ಕಿದ್ದೇ ಸಿಕ್ಕಿದ್ದು ಗ್ರಾಮದ ಹೆಸರು ಭಾರೀ ಸದ್ದು ಮಾಡತೊಡಗಿದೆ. ಗ್ರಾಮದ ಶ್ರೀಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ (Lakkundi excavation) ಭರದಿಂದ ಸಾಗಿದ್ದು, 6ನೇ ದಿನದ ಉತ್ಖನನ ಕಾರ್ಯ ಅಂತ್ಯವಾಗಿದೆ. ಇಂದು (ಜನವರಿ 21) 6ನೇ ದಿನದ ಉತ್ಖನನ ಕಾರ್ಯ ವೇಳೆ ಐದಾರು ಬಿಲ್ಲೆ, ನಾಗರಹಾವಿನ ಚಿತ್ರದ ಶಿಲೆ ಜತೆಗೆ ಮೂಳೆ ತುಣುಕುಗಳು ಸಹ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
6ನೇ ದಿನ ಅಪರೂಪದ ವಸ್ತುಗಳು ಪತ್ತೆ
ಪುರಾತನ ಕಾಲದ ಅಪರೂಪದ ಬಿಲ್ಲೆ ಪತ್ತೆಯಾಗಿದೆ. ಅಷ್ಟೇ ಅಲ್ಲ ಇಂದು ಮತ್ತೆ ನಾಗರ ಹಾವಿನ ಚಿತ್ರ ಇರೋ ಶಿಲೆ ಪತ್ತೆಯಾಗಿದೆ. ಪದೇ ಪದೇ ಇದೇ ಸ್ಥಳದಲ್ಲಿ ನಾಗರಹಾವಿನ ಚಿತ್ರ ಇರೋ ಶಿಲೆಗಳು ಪತ್ತೆಯಾಗಿರುವುದಿರಂದ ಇಲ್ಲಿ ನಿಧಿ ಇದೆಯಾ ಎನ್ನುವ ಕೌತಕ ಹೆಚ್ಚಾಗಿದೆ. ಇನ್ನೊಂದೆಡೆ ನಿಧಿಯನ್ನು ಹಾವುಗಳು ಕಾಯುತ್ತಿವೆಯಾ ಎನ್ನುವ ಭಯ, ಆತಂಕ ಸಹ ಗ್ರಾಮಸ್ಥರಲ್ಲಿ ಹೆಚ್ಚಾಗಿದೆ. ಈಗಾಗಲೇ ಸುಮಾರು 6 ಅಡಿಯಷ್ಟು ಆಳಕ್ಕೆ ಅಗೆಯಲಾಗಿದ್ದು, ಮುಂದೆ ನಡೆಯುವ ಉತ್ಖನನದಲ್ಲಿ ಮತ್ತಷ್ಟು ಪ್ರಾಚೀನ ಅವಶೇಷ ಪತ್ತೆಯಾಗುವ ಸಾಧ್ಯತೆ ಸಹ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಲಕ್ಕುಂಡಿ ನಿಧಿಗೆ ಸರ್ಪ ಕಾವಲು? ಮೈಸೂರಿನಿಂದ ಬಂದ ಉರಗ ರಕ್ಷಕರು ಹೇಳಿದ್ದೇನು?
ಪತ್ತೆಯಾಗಿದ್ದ ಪಾಣಿಪೀಠ ಹಿನ್ನೆಲೆ
ಉತ್ಖನನ ವೇಳೆ ಪತ್ತೆಯಾಗಿದ್ದ ಪಾಣಿಪೀಠವನ್ನು ಮೊದಲು ಶಿವಲಿಂಗ ಪಾಣಿಪೀಠ ಎನ್ನಲಾಗಿತ್ತು.ಪಾಣಿಪೀಠದಲ್ಲಿ ಗರುಡ ಮುದ್ರೆ ಇರುವುದರಿಂದ ವಿಷ್ಣುವಿನ ಪೀಠ ಸಾಧ್ಯತೆ ಎನ್ನಲಾಗುತ್ತಿದೆ. ಯಾಕಂದ್ರೆ ಕೇಶವ ಅಂದ್ರೆ ವಿಷ್ಣು ದೇವರ ಪೀಠವಾಗಿರಬಹುದು ಎನ್ನಲಾಗುತ್ತಿದೆ. ಕೇಶವಾದಿತ್ಯ ದೇವಾಲಯಕ್ಕೆ ಸಂಬಂಧಪಟ್ಟ ಪೀಠ ಸುಖಾಸನದ ಆಕಾರದಲ್ಲಿ ಕುಳಿತ ಗರುಡ ಚಿತ್ರ ಇರುವ ಪೀಠ ಇದ್ದಾಗಿದೆ.
ಲಕ್ಕುಂಡಿಯಲ್ಲಿ ಭೂಗರ್ಭ ಅಗೆದಷ್ಟು ಅನೇಕ ಅವಶೇಷಗಳು ಪತ್ತೆಯಾಗುತ್ತಿವೆ. ಇವು ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಉತ್ಖನನ ಜಾಗದ A4 ಬ್ಲಾಕ್ ನಲ್ಲಿ ಐದಾರು ಚಿಕ್ಕ ಚಿಕ್ಕ ಮೂಳೆಯ ತುಣುಕುಗಳು ಪತ್ತೆಯಾಗಿವೆ. ಸಿಕ್ಕ ಆ ಮೂಳೆಯ ತುಂಡನ್ನು ಪ್ರತ್ಯೇಕವಾಗಿ ತೆಗೆದಿಡಲಾಗಿದೆ. ಅದನ್ನು ಚಿಕ್ಕ ಪ್ಲಾಸ್ಟಿಕ್ ಪ್ಯಾಕೇಟ್ನಲ್ಲಿ ಸೀಲ್ ಮಾಡಿ ಮೂಳೆಯನ್ನ ತೆಗೆದಿಟ್ಟಿದ್ದು, ಪುರಾತತ್ವ ಇಲಾಖೆಯ ಅಧಿಕಾರಿಗಳು, ಮೇಲ್ವಿಚಾರಕರು ಇದರ ಬಗ್ಗೆ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಮೂಳೆ ಮಾನವರದ್ದಾ? ಪ್ರಾಣಿಗಳದ್ದಾ? ಅಥವಾ ಯಾವುದಾದರೂ ಪಕ್ಷಿಯದ್ದಾ ಎಂಬ ಸ್ಪಷ್ಟ ವರದಿಯನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕಾಗಿದೆ.
ಪ್ರವಾಸಿಗರನ್ನ ಆಕರ್ಷಿಸುತ್ತಿದೆ ಲಕ್ಕುಂಡಿ!
ಇನ್ನು ಚಿನ್ನದ ನಿಧಿ ಸಿಕ್ಕಿದ್ದೇ ತಡ ಲಕ್ಕುಂಡಿ ಗ್ರಾಮ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ ಲಕ್ಕುಂಡಿಯಲ್ಲಿ ಯಾವಾಗ ನಿಧಿ ಸಿಕ್ತೋ ಪ್ರವಾಸಗರ ದಂಡೇ ಬರುತ್ತಿದೆ. ಅದರಲ್ಲೂ ಇಂದು ಹುಬ್ಬಳ್ಳಿ ನೇಕಾರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು, ಶಿಕ್ಷಕರು ಆಗಮಿಸಿ ಉತ್ಖನನ ಕಾರ್ಯ ಹೇಗಿರುತ್ತೆ ಎನ್ನುವುದನ್ನು ಮಕ್ಕಳಿಗೆ ತಿಳಿಸಲಾಯ್ತು
ಉತ್ಖನನ ಬಗ್ಗೆ ಕೇವಲ ಪಠ್ಯಪುಸ್ತಕಗಳಲ್ಲಿ ಮೂಲಕ ತಿಳಿದುಕೊಂಡಿದ್ದೆವು. ಈಗ ಪ್ರತ್ಯಕ್ಷವಾಗಿ ಉತ್ಖನನ ಕೆಲಸ ನೋಡಿ ತುಂಬಾನೆ ಖುಷಿ ಆಗಿದೆ. ಉತ್ಖನನ ಅಂದ್ರೆ ಏನು? ಹೇಗೆ ಉತ್ಖನನ ಮಾಡ್ತಾರೆ.? ಅಲ್ಲಿ ಏನೆಲ್ಲಾ ಅವಶೇಷಗಳು ಸಿಗುತ್ತವೆ? ಇದರ ಹಿನ್ನಲೆ ಏನಿರಬಹುದು.? ಹೀಗೆ ಹತ್ತಾರು ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಸಂತೋಷವಾಗುತ್ತಿದೆ ಅಂತಿದ್ದಾರೆ ಶಿಕ್ಷಕರು.
ಒಟ್ಟಾರೆ ಲಕ್ಕುಂಡಿ ಸಾಕಷ್ಟು ಬಂಗಾರ, ವಜ್ರ ವೈಡೂರ್ಯ ಶ್ರೀಮಂತ ನಾಡು ಈಗ ರಾಜ್ಯ, ದೇಶದ ಗಮನ ಸೆಳೆಯುತ್ತಿದೆ. ಇದು ಇತಿಹಾಸ ಗ್ರಾಮ ಆಗಬೇಕು. ಇಲ್ಲಿಯ ಪ್ರತಿಯೊಂದು ದೇವಸ್ಥಾನ ಅಭಿವೃದ್ಧಿ ಪಡಿಸಬೇಕಿದ್ದು, ಲಕ್ಕುಂಡಿಯಲ್ಲಿ ನಡೆಯುವ ಉತ್ಖನನ ವೇಳೆ ಏನೆಲ್ಲಾ ಸಿಗಬಹುದು ಎಂಬ ಕುತೂಹಲ ಜನರಲ್ಲಿ ಮನೆಮಾಡಿದೆ.