ಲಕ್ಕುಂಡಿ ನಿಧಿಗೆ ಸರ್ಪ ಕಾವಲು? ಮೈಸೂರಿನಿಂದ ಬಂದ ಉರಗ ರಕ್ಷಕರು ಹೇಳಿದ್ದೇನು?
ಗದಗನ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದೆ. ಜನತಾ ಶಿಕ್ಷಣ ಸಂಸ್ಥೆಯ ಶಾಲಾ ಕಟ್ಟಡ ತೆರವುಗೊಳಿಸುವಾಗ ಬೃಹತ್ ಗಾತ್ರದ ಹಾವೊಂದು ಕಾಣಿಸಿಕೊಂಡು ಕಾರ್ಮಿಕರನ್ನು ಭಯಭೀತರನ್ನಾಗಿಸಿದೆ. ಇದೇ ವೇಳೆ ಕೋಟೆ ಗೋಡೆಯಲ್ಲಿ ವಿಶಿಷ್ಟ ಲೋಹದ ಶಿವಲಿಂಗ ಪತ್ತೆಯಾಗಿದೆ. ಈ ಬೆಳವಣಿಗೆಗಳಿಂದ ಜನರಲ್ಲಿ ಕುತೂಹಲದ ಜತೆಗೆ ಸರ್ಪದ ಭಯ ಸಹ ಶುರುವಾಗಿದೆ. ಇದರಿಂದ ಲಕ್ಕುಂಡಿ ಗ್ರಾಮಕ್ಕೆ ಮೈಸೂರಿನಿಂದ ಉರಗ ರಕ್ಷಕರು ಆಗಮಿಸಿದ್ದಾರೆ.

ಗದಗ, (ಜನವರಿ 21): ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ಚಿನ್ನದ ನಿಧಿ (Lakkundi Gold Treasure) ಸಿಕ್ಕಿದ್ದು, ಅಂದಿನಿಂದ ಲಕ್ಕುಂಡಿ ಗ್ರಾಮ ಭಾರೀ ಸದ್ದು ಮಾಡಿದೆ. ಇನ್ನು ಇನ್ನಷ್ಟು ನಿಧಿ ಸಿಗಬಹುದು ಎಂದು ಪುರಾತತ್ವ ಇಲಾಖೆಯು ಗ್ರಾಮದಲ್ಲಿ ಉತ್ಖನನ ನಡೆಸಿದೆ. ಈ ವೇಳೆ ದಿನದಲ್ಲಿ ಒಂದಲ್ಲ ಒಂದು ವಸ್ತು ದೊರೆಯುತ್ತಿದೆ. ಇದರ ನಡುವೆ ಇದೀಗ ಗ್ರಾಮದಲ್ಲಿ ಸರ್ಪದ (snake) ಆತಂಕ ಮನೆ ಮಾಡಿದೆ. ಹೌದು..ಪುರಾತತ್ವ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದ್ದು, ನಿಗೂಢ ಸರ್ಪವೊಂದು ಕಾಣಿಸಿಕೊಂಡು ನಿಧಿ ಮತ್ತು ನಾಗಬಂಧದ ರಹಸ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಮೈಸೂರಿನಿಂದ ಉರಗ ರಕ್ಷಕರು ಲಕ್ಕುಂಡಿ ಗ್ರಾಮಕ್ಕೆ ಆಗಮಿಸಿದ್ದಾರೆ.
ಲಕ್ಕುಂಡಿಗೆ ಉರಗ ರಕ್ಷಕರ ಆಗಮನ
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಬಳಿ ಮೊನ್ನೆ ಬೃಹತ್ ಹಾವು ಕಂಡಿದೆ ಎಂದು ಗ್ರಾಮಸ್ಥರು ಹೇಳಿದ್ದರು. ದೊಡ್ಡ ಪ್ರಮಾಣದ ಹಾವು ಪುರಾತನ ಕೋಟೆ ಗೋಡೆಯಲ್ಲಿ ಹೋಗಿದೆ ಎಂದು ಸ್ಥಳೀಯರು ಟಿವಿ9 ಜತೆ ಮಾಹಿತಿ ಹಂಚಿಕೊಂಡಿದ್ದರು. ಇದರಿಂದ ಮೈಸೂರು ಅರಣ್ಯ ಪರಿಸರ ವನ್ಯ ಜೀವ ಸಂರಕ್ಷಣೆ ಸಂಸ್ಥೆ ಸಿಬ್ಬಂದಿ ಶಿವರಾಜ್ ಹಾಗೂ ಶ್ವೇತಾ ಲಕ್ಕುಂಡಿ ಗ್ರಾಮಕ್ಕೆ ಆಗಮಿಸಿದ್ದು, ಉತ್ಖನನ ನಡೆಯುವ ಸ್ಥಳ ಹಾಗೂ ಕೋಟೆ ಗೋಡೆ ಭಾಗವನ್ನು ಉರಗ ರಕ್ಷಕರು ಪರಿಶೀಲಿಸಿದರು.
ಇದನ್ನೂ ಓದಿ: ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್ ಹಾವು ಪ್ರತ್ಯಕ್ಷ!
ಉರಗ ರಕ್ಷಕ ಶಿವರಾಜ್ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಉರಗ ರಕ್ಷಕ ಶಿವರಾಜ್, ಕೂದಲು ಇದೆ ಅಂತ ಸುದ್ದಿ ಕೇಳಿ ಕುತೂಹಲ ಹೆಚ್ಚಾಗಿತ್ತು. ಹೀಗಾಗಿ ಮೈಸೂರಿನಿಂದ ಹಾವು ನೋಡಲು ಬಂದಿದ್ದೇವೆ. ಉತ್ಖನನ ಜಾಗ ಹಾಗೂ ಗೋಡೆ ಬಳಿ ಪರಿಶೀಲನೆ ಮಾಡಿದ್ದೇವೆ. ಇನ್ನು ಹಾವಿಗೆ ಕೂದಲು ಇರಲು ಸಾಧ್ಯವಿಲ್ಲ. ಸುಳ್ಳ ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದರು.
ಉತ್ಖನನ ವೇಳೆ ಮತ್ತೊಂದು ಬಿಲ್ಲೆ ಪತ್ತೆ
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇಗುಲ ಬಳಿ ಪುರಾತತ್ವ ಇಲಾಖೆ ಅಧಿಕಾರಿಗಳ ಉತ್ಖನನ ಕಾರ್ಯ ಮುಂದುವರೆದಿದ್ದು, ಇಂದು (ಜನವರಿ 21) ಪುರಾತನ ಕಾಲದ ಮತ್ತೊಂದು ಬಿಲ್ಲೆ ಪತ್ತೆಯಾಗಿದೆ. ಸುಟ್ಟ ಮಡಿಕೆಯ ಕುಂಟಾಬಿಲ್ಲೆ ಪತ್ತೆಯಾಗಿದ್ದು, ಇದು ಪುರಾತನ ಕಾಲದ ಬಿಲ್ಲೆ ಎಂದ ಪುರಾತತ್ವ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ನಿಧಿ ಸಿಕ್ಕಿದ್ದೇ ಸಿಕ್ಕಿದ್ದು, ಲಕ್ಕುಂಡಿಯಲ್ಲಿ ಜಮೀನಿನ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ
ಚಿನ್ನ ನಿಧಿಯನ್ನು ಸರ್ಪ, ಕಾಡುಹೋಣ, ರಾಕ್ಷಸ ಕಾಯುತ್ತಿರುತ್ತವೆ ಎಂದು ಹಳ್ಳಿಗಳಲ್ಲಿ ಜನ ಮಾತನಾಡುತ್ತಾರೆ. ಇನ್ನು ನಿಧಿ ಸಿಕ್ಕರೆ ಅವರ ಮನೆಯಲ್ಲಿ ಆಗಾಗ ಪೂಜೆ ಪುನಸ್ಕಾರಗಳನ್ನು ಮಾಡಲೇಬೇಕು. ಇಲ್ಲವಾದಲ್ಲಿ ಕುಟುಂಬದಲ್ಲಿ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತವೆ ಎನ್ನುವುದು ಹಳ್ಳಿಗಳಲ್ಲಿ ಹಿರಿಯರು ಹೇಳುತ್ತಾರೆ.
ಲಕ್ಕುಂಡಿ ಬಗ್ಗೆ ಈಗೀಗ ಹೆಚ್ಚೆಚ್ಚು ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ, ಅಲ್ಲಿನ ಇತಿಹಾಸದ ಜೊತೆಗೆ ಸಿಕ್ಕ ಸಂಪತ್ತು. ಹೌದು.. ಕಳೆದ ಕೆಲವು ದಿನಗಳ ಹಿಂದೆ ಇದೇ ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ ರಿತ್ತಿ ಕುಟುಂಬ ಹಳೆಯ ಮನೆಯನ್ನ ಕೆಡವಿ, ಹೊಸ ಮನೆ ಕಟ್ಟಲು ಪಾಯ ಅಗೆಯುತ್ತಿದ್ದ ವೇಳೆ ಮಣ್ಣಿನ ಅಡಿಯಲ್ಲಿ ಒಂದು ಪುಟ್ಟ ತಾಮ್ರದ ಬಿಂದಿಗೆಯಲ್ಲಿ ಚಿನ್ನದ ನಿಧಿ ಪತ್ತೆಯಾಗಿತ್ತು. ಕುತೂಹಲದಿಂದ ಅದನ್ನ ತೆಗೆದು ನೋಡಿದಾಗ ತಾಯಿ-ಮಗ ದಂಗಾಗಿದ್ದು, ಅದರೊಳಗೆ ಬರೋಬ್ಬರಿ 470 ಗ್ರಾಂ ತೂಕದ ಪುರಾತನ ಕಾಲದ ಚಿನ್ನದ ಸರಗಳು, ಉಂಗುರಗಳು, ಕಿವಿಯೋಲೆಗಳು ಹಾಗೂ ವಿಶಿಷ್ಟವಾದ ನಾಗಮುದ್ರೆಗಳಿದ್ದವು.
Published On - 3:23 pm, Wed, 21 January 26