ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಳೆದ ಆರು ತಿಂಗಳಿಂದ ಹದಗೆಟ್ಟದೆ. ಕೈಗಾ-ಇಳಕಲ್ಲ ರಸ್ತೆ ದುರಸ್ತಿಗಾಗಿ ಕಳೆದ ಎರಡು ದಿನಗಳಿಂದ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಿದ್ದಾರೆ. ಲಕ್ಷ್ಮೇಶ್ವರ ಪಟ್ಟಣ ಸಂಪೂರ್ಣ ಸ್ತಬ್ಧ ಆಗಿದ್ದು, ಅಂಗಡಿ-ಮುಗ್ಗಟ್ಟುಗಳು ಬಂದಾಗಿವೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಂಜಾನೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರು, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಟೈರ್ಗೆ ಬೆಂಕಿ ಹಚ್ಚಲು ಮುಂದಾಗುತ್ತಿದ್ದಂತೆಯೇ ಪೊಲೀಸರು ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆದಿದೆ. ಕಳೆದ ಆರು ತಿಂಗಳಿಂದ ಕೈಗಾ-ಇಳಕಲ್ಲ್ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು, ಸಾಕಷ್ಟು ಬಾರಿ ದುರಸ್ತಿಗಾಗಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಎರಡು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹೋರಾಟಕ್ಕೆ ತೀವ್ರ ಸ್ವರೂಪ ಕೊಡಲು ಇವತ್ತು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ